
ನಾ ದಿವಾಕರ
ಯಾವುದೇ ಸಂದರ್ಭದಲ್ಲಾದರೂ ಸಂವಹನ ಮಾಧ್ಯಮಗಳು (Communication Media) ಎರಡು ಪ್ರಧಾನ ಜವಾಬ್ದಾರಿಯನ್ನು ನಿರ್ವಹಿಸುವುದು, ಪಾರಂಪರಿಕವಾಗಿ ಎಲ್ಲ ಸಮಾಜಗಳೂ ಕಂಡಿರುವಂತಹ ಸತ್ಯ. ಮುದ್ರಣ ಮಾಧ್ಯಮಗಳ ಯುಗದಿಂದ ಡಿಜಿಟಲ್ ಯುಗಕ್ಕೆ ಪ್ರವೇಶಿಸಿರುವ ಭಾರತೀಯ ಸಮಾಜವೂ ಇದಕ್ಕೆ ಹೊರತಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ವಿದ್ಯಮಾನಗಳನ್ನು ರಾಜ್ಯದ-ಸಮಾಜದ ಸಮಸ್ತ ಜನತೆಯೂ ಅರಿತಿರಲು ಸಾಧ್ಯವಿಲ್ಲ. ಅಕ್ಷರ ಬಲ್ಲ ಜನತೆಗೆ ಇರುವ ಅನುಕೂಲ, ಅವಕಾಶ ಮತ್ತು ಸವಲತ್ತುಗಳಿಂದ ಅನಕ್ಷರಸ್ಥ ಜನತೆ ವಂಚಿತರಾಗಿರುತ್ತಾರೆ. ನಗರವಾಸಿಗಳಿಗೆ ಇರುವ ಸಂವಹನ ಸಾಧ್ಯತೆಗಳಿಂದ ಗ್ರಾಮೀಣ ಜನತೆ ವಂಚಿತರಾಗಿರುತ್ತಾರೆ. ಆಧುನಿಕ ತಂತ್ರಜ್ಞಾನವೂ ಸಹ ಎಲ್ಲ ಜನರನ್ನೂ ಸಮಾನವಾಗಿ ತಲುಪಲು ಸಾಧ್ಯವಾಗದು.

ಈ ವ್ಯತ್ಯಯಗಳ ನಡುವೆಯೇ ರಾಜ್ಯದ ವಿವಿಧ ಸಮಾಜಗಳಲ್ಲಿ, ಪ್ರದೇಶಗಳಲ್ಲಿ ಸಂಭವಿಸುತ್ತಲೇ ಇರುವ ದುರಂತಗಳನ್ನು, ಅನ್ಯಾಯಗಳನ್ನು, ಜನವಿರೋಧಿ ಚಟುವಟಿಕೆಗಳನ್ನು ಹಾಗೂ ಮಾನವ ಸಮಾಜವನ್ನೇ ತಲ್ಲಣಗೊಳಿಸುವ ಬೆಳವಣಿಗೆಗಳನ್ನು ಸಮಸ್ತ ಜನತೆಗೂ ತಲುಪಿಸುವ ನೈತಿಕ ಜವಾಬ್ದಾರಿ ಯಾರದು ಎಂದು ನಿರ್ವಚಿಸಬೇಕಾಗುತ್ತದೆ. ಮುದ್ರಣದ ಯುಗದಲ್ಲಿ ಪತ್ರಿಕೆಗಳು ಇನ್ನೂ ಮಾರುಕಟ್ಟೆ ನಿಯಂತ್ರಣಕ್ಕೆ ಬರುವ ಮುನ್ನ ರಾಜ್ಯವ್ಯಾಪಿ ಸುದ್ದಿಗಳು ಎಲ್ಲೆಡೆ ಲಭಿಸುತ್ತಿದ್ದವು. ಆದರೆ ತದನಂತರ ಜಿಲ್ಲಾ ಮಟ್ಟದ ಸುದ್ದಿ ಪ್ರಸರಣ ವ್ಯವಸ್ಥೆ ಆರಂಭವಾದ ನಂತರ ಇದು ಇಲ್ಲವಾಯಿತು. ಇದಕ್ಕೆ ಕಾರಣ ಇಡೀ ರಾಜ್ಯವನ್ನು ಕ್ಷಣಮಾತ್ರದಲ್ಲಿ ತಲುಪುವ ದೃಶ್ಯ ಮಾಧ್ಯಮಗಳ ವಿದ್ಯುನ್ಮಾನ ವಾಹಿನಿಗಳ ಉಗಮ ಮತ್ತು ಬೆಳವಣಿಗೆ. ಹಾಗಾಗಿ ಡಿಜಿಟಲ್ ಯುಗದಲ್ಲಿ ಸುದ್ದಿ ಪ್ರಸರಣದ ಜವಾಬ್ದಾರಿಯನ್ನು ಹಾಗೂ ಸಮಸ್ತ ಜನತೆಗೂ ತಲುಪಿಸುವ ನೈತಿಕ ಹೊಣೆಯನ್ನು ದೃಶ್ಯವಾಹಿನಿಗಳು ಹೊತ್ತುಕೊಂಡವು.
ಡಿಜಿಟಲ್ ಯುಗದ ವಾಸ್ತವಗಳು

ಈ ಸನ್ನಿವೇಶವನ್ನೂ ದಾಟಿ ಈಗ ಡಿಜಿಟಲ್ ಪ್ಲಾಟ್‌ಫಾರಂಗಳು ಅಥವಾ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳು (Social Media ) ಹಾಗೂ ಖಾಸಗಿ ಯು ಟ್ಯೂಬ್ ವಾಹಿನಿಗಳು ಈ ಜವಾಬ್ದಾರಿಯನ್ನು ಹಂಚಿಕೊಂಡಿವೆ. ಇದರ ಸಕಾರಾತ್ಮಕ ಪರಿಣಾಮ ಎಂದರೆ, ಯಾವುದೇ ಸುದ್ದಿಯಾದರೂ, ಘಟನೆ ಸಂಭವಿಸಿದ ಕೂಡಲೇ ಕ್ಷಣಮಾತ್ರದಲ್ಲಿ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ವಲಯಗಳಿಗೂ ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಸನ್ನಿವೇಶದಲ್ಲಿ ಸುದ್ದಿ ಪ್ರಸರಣದ ಮಾಧ್ಯಮಗಳ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಎರಡೂ ಮುಖ್ಯವಾಗುತ್ತದೆ. ಖಾಸಗಿ ಯು ಟ್ಯೂಬರ್‌ಗಳೂ ಸೇರಿದಂತೆ ಎಲ್ಲ ವಾಹಿನಿಗಳೂ ತಮ್ಮ ಚಂದಾದಾರರ ಹೆಚ್ಚಳಕ್ಕಾಗಿ, ಟಿಆರ್‌ಪಿ ಶ್ರೇಣಿಗಾಗಿ, ಮಾರುಕಟ್ಟೆಯ ವ್ಯಾಪ್ತಿಯ ದೃಷ್ಟಿಯಿಂದ ʼ ನೇರ-ದಿಟ್ಟ-ನಿರಂತರ-ಪ್ರಾಮಾಣಿಕ-ವಸ್ತುನಿಷ್ಠ ʼ ಇತ್ಯಾದಿ ವಿಶೇಷಣಗಳನ್ನು ಬಳಸುವ ಆತ್ಮರತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತವೆ.

ಆದರೆ ಈ ವಿದ್ಯಮಾನವನ್ನು ವಿಶಾಲ ಹಂದರದಲ್ಲಿಟ್ಟು (Wider Canvas) ನೋಡಿದಾಗ ಡಿಜಿಟಲ್ ಯುಗದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿವೆಯೇ ಎಂಬ ಜಿಜ್ಞಾಸೆ ನಿಸ್ಸಂದೇಹವಾಗಿ ಮೂಡುತ್ತದೆ. ಏಕೆಂದರೆ ಕಳೆದ ಎರಡು ಮೂರು ತಿಂಗಳುಗಳಲ್ಲಿ ಕರ್ನಾಟಕದ ಸಾಮಾಜಿಕ ಪರಿಸ್ಥಿತಿಯನ್ನು ಮತ್ತು ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದೇ ವೇಳೆ ಡಿಜಿಟಲ್ ಮಾಧ್ಯಮದ ಪ್ರಸರಣದ ವೈಖರಿಯನ್ನೂ ಗಮನಿಸಿದಾಗ, ಸಂವಹನ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿವೆ ಎನ್ನುವುದು ಸ್ಪಷ್ಟವಾಗುತ್ತವೆ. ಜನಸಾಮಾನ್ಯರಿಗೆ ತಲುಪಬೇಕಾದ ಸುದ್ದಿಗಳನ್ನು ʼ ರೋಚಕ ʼ , ʼಜನಪ್ರಿಯʼ , ʼ ಆಕರ್ಷಣೀಯ ʼ, ʼ ಉಪಯುಕ್ತ ʼ ಅಥವಾ ʼ ಸಂಚಲನ ʼ ದ ಪರಿಭಾಷೆಯಲ್ಲಿ ವಿಂಗಡಿಸಿ ಪ್ರಸಾರ ಮಾಡುವ ಅತಾರ್ಕಿಕ ವಿಧಾನವನ್ನು, ಯುಟ್ಯೂಬರ್‌ಗಳನ್ನೂ ಸೇರಿದಂತೆ ಎಲ್ಲ ವಾಹಿನಿಗಳೂ ಅಳವಡಿಸಿಕೊಂಡಿವೆ.

ಮುಖ್ಯವಾಹಿನಿ ಮಾರುಕಟ್ಟೆ ಮೋಹ
ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು, ಸುದ್ದಿವಾಹಿನಿಗಳು ಕಾರ್ಪೋರೇಟ್ ಮಾರುಕಟ್ಟೆ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಇವುಗಳಿಂದ ತಳಸಮಾಜದ ತಲ್ಲಣಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಈ ಸುದ್ದಿವಾಹಿನಿಗಳಲ್ಲಿ ಏರ್ಪಡಿಸುವ ಚರ್ಚೆಗಳು (Panel Discussions) ಪ್ರಧಾನವಾಗಿ ರಾಜಕೀಯ ಪರ-ವಿರೋಧದ ವಾಗ್ವಾದಕ್ಕೆ ( ಮಾಧ್ಯಮ ಪರಿಭಾಷೆಯಲ್ಲಿ ವಾಗ್ಯುದ್ಧ) ಸೀಮಿತವಾಗಿದ್ದು, ಅಂತಿಮವಾಗಿ ಸುದ್ದಿವಾಹಿನಿಗೆ ಪೂರಕವಾದ ರೀತಿಯಲ್ಲಿ ಅಭಿಪ್ರಾಯವನ್ನು ಸೃಷ್ಟಿಸುವ ಸಾಧನಗಳಾಗಿರುವುದು ಸುಡು ವಾಸ್ತವ. ಸಭ್ಯತೆ, ಸಂಯಮ, ಸೌಜನ್ಯ ಮೊದಲಾದ ಎಲ್ಲ ಔನ್ನತ್ಯಗಳನ್ನೂ ಕಳೆದುಕೊಂಡಿರುವುದರಿಂದ, ಚರ್ಚೆಗಳೆಲ್ಲವೂ ವ್ಯಕ್ತಿನಿಷ್ಠತೆ/ಪ್ರತಿಷ್ಠೆಗೆ ಸೀಮಿತವಾಗಿ, ಜನತೆಗೆ ಅಗತ್ಯವಾಗಿರುವಂತಹ ಒಳನೋಟಗಳನ್ನು ವ್ಯಕ್ತಪಡಿಸುವಲ್ಲಿ ಸೋಲುತ್ತಿವೆ. ಈ ನಿಟ್ಟಿನಲ್ಲಿ ಕೆಲವು ಅಪವಾದಗಳನ್ನು ಗುರುತಿಸಬಹುದಷ್ಟೆ.

ಈ ವಿಶಾಲ ದೃಷ್ಟಿಯಿಂದ ನೋಡಿದಾಗ ಕರ್ನಾಟಕದ ರಾಜಕೀಯ ಪರಿಸ್ಥಿತಿ, ಸಾಮಾಜಿಕ ಸಂಕಟಗಳು, ತಳಸಮಾಜದ ತಲ್ಲಣಗಳು ಹಾಗೂ ಸಾಂಸ್ಕೃತಿಕ ವಲಯದ ಪಲ್ಲಟಗಳು ಡಿಜಿಟಲ್ ಯುಗದ ಸಂವಹನ ಸೇತುವೆಗಳಲ್ಲಿ ಹೇಗೆ ಪ್ರಸರಣವಾಗುತ್ತಿವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೆಯೇ ಈ ಸುದ್ದಿಗಳನ್ನು ಪ್ರಸಾರ ಮಾಡುವಾಗ ವಾಹಿನಿಗಳು ಬಳಸುವ ಪರಿಭಾಷೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಟಿಅರ್‌ಪಿ ಅವಲಂಬಿಸುವ ಮುಖ್ಯವಾಹಿನಿಗಳಿಗೆ ʼ ರೋಚಕ ʼ ಪರಿಭಾಷೆಯೇ ಬಂಡವಾಳವಾಗಿರುವುದು ನಾವು ಸಹಿಸಿಕೊಂಡಿರುವ ಕಹಿ ಸತ್ಯ. ಆದರೆ ಇದೇ ಪರಿಭಾಷೆಯನ್ನು ಖಾಸಗಿ ಯುಟ್ಯೂಬ್‌ಗಳಲ್ಲೂ ಬಳಸುವುದನ್ನು ಹೇಗೆ ನಿಷ್ಕರ್ಷೆ ಮಾಡುವುದು ? ಯಾವುದೇ ಸುದ್ದಿಯ ಒಳಸೂಕ್ಷ್ಮಗಳು ಮತ್ತು ಅವುಗಳ ಗಂಭೀರ ಸ್ವರೂಪ ಸುದ್ದಿನಿರೂಪಣೆಯಲ್ಲಿ ಬಳಸುವ ʼತಲೆಬರಹ ʼ (Head Line) ನಲ್ಲಿ ಬಿಂಬಿಸಲ್ಪಡುತ್ತದೆ. ಈ ಪರಿವೆ, ಪರಿಜ್ಞಾನವನ್ನು ರೂಢಿಸಿಕೊಳ್ಳುವುದು ಸಂವಹನ ಸೇತುವೆಗಳಿಗೆ ಬಹಳ ಮುಖ್ಯವಾಗುತ್ತದೆ.

ಮತ್ತೊಂದು ಆಯಾಮದಲ್ಲಿ ನೋಡಿದಾಗ, ವಿಶಾಲ ಸಮಾಜಕ್ಕೆ ಅಥವಾ ತಲ್ಲಣಗೊಂಡ ಜನತೆಗೆ ಅಗತ್ಯವಾದ ಸುದ್ದಿ ಯಾವುದು ಎಂದು ನಿರ್ಧರಿಸುವುದೂ ಮಾಧ್ಯಮಗಳ ಜವಾಬ್ದಾರಿಯಾಗಿರುತ್ತದೆ. ಈ ಸುದ್ದಿಯನ್ನು ತಲುಪಿಸುವ ವಿಧಾನಗಳು ಭಿನ್ನವಾದರೂ, ಪರಿಣಾಮಕಾರಿಯಾಗಿ ಮುಟ್ಟಿಸಲು ಅಗತ್ಯವಾದ ಮಾಹಿತಿ ಮತ್ತು ಶೈಲಿಯನ್ನು ಸಂಪಾದಕರು, ನಿರೂಪಕರು ಅನುಸರಿಸಬೇಕಾಗುತ್ತದೆ. ಒಂದು ಸಣ್ಣ ನಿದರ್ಶನ ನೋಡುವುದಾದರೆ, ಚಿತ್ತಾಪುರದ ಆರೆಸ್ಸೆಸ್ ಪಥ ಸಂಚಲನದ ಸುದ್ದಿಯನ್ನು ಬಿತ್ತರಿಸುವಾಗ ಯು ಟ್ಯೂಬ್ ವಾಹಿನಿಗಳೂ ಸಹ ʼ ಚಿತ್ತಾಪುರ ಧಗಧಗ ʼ ಎಂಬ ತಲೆಬರಹ ಹೊತ್ತು ಬರುವುದು ವಿವೇಕಯುತ ಎನಿಸುವುದಿಲ್ಲ. ಧಗಧಗ, ಕೊತಕೊತ, ಭಗಭಗ ಮುಂತಾದ ಪರಿಭಾಷೆಗಳು ಸುದ್ದಿಯ ಗಾಂಭೀರ್ಯತೆಯನ್ನು ಮರೆಮಾಚಿ ನೋಡುಗರಿಗೆ ಅಥವಾ ಕೇಳುಗರಿಗೆ ರೋಚಕವಾಗಿ ಮಾತ್ರ ಕಾಣಲು ಸಾಧ್ಯ. ಮತ್ತೊಂದು ವಾಹಿನಿಯಲ್ಲಿ ಯಾವುದೋ ವಿಷಯಕ್ಕೆ ʼ ಕ್ಯಾಕರಿಸಿ ಉಗಿದ ಸುಪ್ರೀಂಕೋರ್ಟ್ ʼ ಎಂದು ಹೇಳಲಾಗುತ್ತದೆ.
ಸಂಯಮ-ಸಭ್ಯತೆಯ ಕೊರತೆ
ಈ ಪದಗಳು ಏನನ್ನು ಸೂಚಿಸುತ್ತವೆ ಎನ್ನುವುದಕ್ಕಿಂತಲೂ, ಹಾದಿ ಬೀದಿಯ ಪರಿಭಾಷೆಯನ್ನೇ ಉನ್ನತ ನ್ಯಾಯಾಲಯದ ವಿಚಾರದಲ್ಲಿ ಬಳಸುವುದು ಅನುಚಿತ ಅಲ್ಲವೇ ? ಇದನ್ನೇ ಸಂಯಮದಿಂದ, ಸಭ್ಯ ಭಾಷೆಯಲ್ಲಿ ಜನರಿಗೆ ತಲುಪಿಸಲು ಸಾಧ್ಯ. ಹಾಗೆಂದ ಮಾತ್ರಕ್ಕೆ ಮಾಧ್ಯಮಗಳಲ್ಲಿ ಬಳಸುವ ಪದ/ವಾಕ್ಯಗಳು ಸಾಹಿತ್ಯಿಕ ಅಥವಾ ಗ್ರಾಂಥಿಕ ಸ್ವರೂಪ ಹೊಂದಿರಬೇಕಿಲ್ಲ. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುವುದು ಮುಖ್ಯ. ಕನ್ನಡ ಸಮೃದ್ಧ ಭಾಷೆಯಾಗಿದ್ದು ಇದಕ್ಕೆ ಕೊರತೆಯೇನೂ ಇಲ್ಲ. ಗ್ರಾಂಥಿಕ ಭಾಷೆಗೂ, ಸಾಹಿತ್ಯಿಕ ಭಾಷೆಗೂ, ಜನತೆಯ ನಡುವೆ ಬಳಸುವ ಆಡು ಮಾತುಗಳಿಗೂ ಅಪಾರ ಅಂತರ ಇರುವುದನ್ನು ಮಾಧ್ಯಮ ಮಿತ್ರರು ಅರ್ಥಮಾಡಿಕೊಳ್ಳಬೇಕಿದೆ. ರೋಚಕತೆ ಹುಟ್ಟಿಸುವ ಪದಗಳು ಉನ್ಮಾದ ಉಂಟುಮಾಡುತ್ತವೆಯೇ ಹೊರತು, ವಿಷಯವನ್ನು ಮನದಟ್ಟುಮಾಡಲು ನೆರವಾಗುವುದಿಲ್ಲ.

ಈ ತಾರ್ಕಿಕ ಹಿನ್ನೆಲೆಯಲ್ಲಿ ಕನ್ನಡದ ಮಾಧ್ಯಮ ವಲಯ ಬಿತ್ತರಿಸುತ್ತಿರುವ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ರಾಜಕೀಯ ಸುದ್ದಿಗಳು ಸದಾ ಆಕರ್ಷಣೀಯವಾಗಿರುವುದು ಸಹಜ. ಜನರಿಗೆ ಇದು ಇಷ್ಟವಾಗುವುದೂ ಹೌದು. ಆದರೆ ಅಧಿಕಾರ ರಾಜಕಾರಣದ ಸುತ್ತಲಿನ ವಿದ್ಯಮಾನಗಳನ್ನು ದಾಟಿ ನೋಡುವ ವಿವೇಚನೆ-ವ್ಯವಧಾನ ಸಂವಹನ ಮಾಧ್ಯಮಗಳಿಗೆ ಇರಬೇಕಾಗುತ್ತದೆ. ಆಗ ಚಿತ್ತಾಪುರ, ಆರೆಸ್ಸೆಸ್ ಪಥಸಂಚಲನ, ನವಂಬರ್ ಕ್ರಾಂತಿ ಇತ್ಯಾದಿ ವಿಷಯಗಳನ್ನೂ ಮೀರಿ ನೋಡಬೇಕಾದ ಹಲವು ವಿದ್ಯಮಾನಗಳನ್ನು ರಾಜ್ಯದಲ್ಲಿ ಗುರುತಿಸಲು ಸಾಧ್ಯ. ಸುದ್ದಿಪತ್ರಿಕೆಗಳು ಸೀಮಿತವಾಗಿ ಪ್ರಕಟಿಸುವ ಇಂತಹ ಸುದ್ದಿಗಳನ್ನು ಒಳಹೊಕ್ಕು ನೋಡಿ, ಅಲ್ಲಿನ ಘಟನೆಗಳ ಹಿಂದಿನ ಕಾರಣ, ಅದರ ಪರಿಣಾಮಗಳನ್ನು ಸಾಮಾಜಿಕ ಸೂಕ್ಷ್ಮತೆಯಿಂದ ನೋಡುವ ವಿವೇಕ, ವ್ಯವಧಾನ ಸಂವಹನ ಮಾಧ್ಯಮಗಳಿಗೆ ಇರಬೇಕಾಗುತ್ತದೆ. ಇದು ಕಾಣದಿರುವುದು ವಿಪರ್ಯಾಸ.
ಇದನ್ನೂ ಮೀರಿದ ಜವಾಬ್ದಾರಿ ಡಿಜಿಟಲ್-ಯು ಟ್ಯೂಬ್ ಮಾಧ್ಯಮಗಳ ಮೇಲಿರುವುದನ್ನು ಈ ವೃತ್ತಿಯಲ್ಲಿರುವವರು ಗಮನಿಸಬೇಕಿದೆ. ಮುಖ್ಯವಾಹಿನಿಗಳು ಮಾರುಕಟ್ಟೆ-ಟಿಆರ್‌ಪಿ ದೃಷ್ಟಿಯಿಂದ ನಿರ್ಲಕ್ಷಿಸುವ ಅಥವಾ ನೆಪಮಾತ್ರಕ್ಕೆ ಪ್ರಸಾರ ಮಾಡುವ, ಜ್ವಲಂತ ಸಾಮಾಜಿಕ ಸಮಸ್ಯೆಗಳನ್ನು , ಆರ್ಥಿಕ ಸಂಕಟಗಳನ್ನು ಮತ್ತು ಸಮಾಜದಲ್ಲಿ ನಿತ್ಯ ಸಂಭವಿಸುತ್ತಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯಗಳು, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮುಂತಾದ ಘಟನೆಗಳನ್ನು ಈ ಡಿಜಿಟಲ್ ವೇದಿಕೆಗಳು ಸಮಾಜದ ಮುಂದಿಡಬೇಕಾಗಿದೆ. ಕೇವಲ ʼ ಸುದ್ದಿಗಾಗಿ ಸುದ್ದಿ ʼ ಎನ್ನುವ ಸಂಕುಚಿತ ಭಾವನೆಯನ್ನು ಬಿಟ್ಟು, ಈ ಘಟನೆಗಳ ಹಿಂದೆ ಇರಬಹುದಾದ ಸಾಮಾಜಿಕ ಕಾರಣಗಳು, ಅಪರಾಧಿಕ ಜಗತ್ತಿನ ಒಳನೋಟಗಳು ಹಾಗೂ ಇಂತಹ ಅಪರಾಧಗಳಿಗೆ ನಿರಂತರ ಬಲಿಯಾಗುತ್ತಿರುವ ದುರ್ಬಲ ವರ್ಗಗಳ ಬದುಕಿನ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲುವಂತಹ ಚರ್ಚೆಗಳನ್ನು ಡಿಜಿಟಲ್ ವೇದಿಕೆಗಳು ಸಾರ್ವಜನಿಕರಿಗೆ ಮನದಟ್ಟಾಗುವಂತೆ ನಡೆಸಬೇಕಿದೆ.

ವಾಸ್ತವದ ದುರಂತ ಸನ್ನಿವೇಶ
ಇತ್ತೀಚೆಗೆ ಆರೆಸ್ಸೆಸ್ ಪಥಸಂಚಲನದ ಸುತ್ತ ವಿವಾದಗಳು ಮುಖ್ಯವಾಹಿನಿಗಳನ್ನು ಆವರಿಸಿಕೊಂಡಿದ್ದು, ಅನೇಕ ಡಿಜಿಟಲ್ ವೇದಿಕೆಗಳೂ, ಯು ಟ್ಯೂಬರ್‌ಗಳೂ ಸಹ ಇದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತಿರುವುದನ್ನು ಗಮನಿಸಿದಾಗ, ಈ ವಾಹಿನಿಗಳೂ ಸಹ ಜನಾಕರ್ಷಣೆಗಾಗಿಯೇ ಕಾರ್ಯನಿರ್ವಹಿಸುತ್ತಿವೆ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಈ ವಿಷಯವೂ ಜನಸಾಮಾನ್ಯರ ನಡುವೆ ಚರ್ಚೆಗೊಳಗಾಗಬೇಕು ಎನ್ನುವುದು ದಿಟ, ಆದರೆ ಇದನ್ನೂ ಮೀರಿದ ಸಾಮಾಜಿಕ ವ್ಯಾಧಿಗಳು ನಮ್ಮನ್ನು ಕಾಡುತ್ತಿರುವಾಗ, ಅವುಗಳನ್ನು ಚರ್ಚೆ ಮಾಡುವುದು ಯಾರು ? ಎಲ್ಲಿ ? ಹೇಗೆ ? ಈ ಪ್ರಶ್ನೆಗಳು ಪತ್ರಿಕೋದ್ಯಮ ( Journalism) ಎಂಬ ಹೆಸರಿನಲ್ಲಿ ಸಕ್ರಿಯವಾಗಿರುವ ಯಾರಿಗೇ ಆದರೂ ಕಾಡಬೇಕಲ್ಲವೇ ? ಇಲ್ಲಿ ಮುಖ್ಯವಾಹಿನಿಗಳಿಗೆ ಪೈಪೋಟಿ ನೀಡುವುದಕ್ಕಿಂತಲೂ ಮುಖ್ಯವಾದದ್ದು ಸಮಾನಾಂತರ ಸಂವಹನ ಮಾಧ್ಯಮವಾಗಿ ಬೆಳೆಯಬೇಕಿರುವುದು.
ಈ ನಿಟ್ಟಿನಲ್ಲಿ ಕನ್ನಡದ ಖಾಸಗಿ ಯು ಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ವೇದಿಕೆಗಳು (Social media platforms) ಬಹುಮಟ್ಟಿಗೆ ವಿಫಲವಾಗಿವೆ. ಕೆಲವು ಅಪವಾದಗಳು ಇರಬಹುದು. ಆದರೆ ಒಟ್ಟಾರೆಯಾಗಿ ನೋಡಿದಾಗ, ಈ ವೈಫಲ್ಯ ಎದ್ದು ಕಾಣುತ್ತದೆ. ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ಮುಖ್ಯಮಂತ್ರಿಗಳ ಬದಲಾವಣೆ, ಚಿತ್ತಾಪುರದ ಪಥ ಸಂಚಲನ ಇಂತಹ ಜನಾಕರ್ಷಕ ಸುದ್ದಿಗಳು ಮುಖ್ಯವಾಗುತ್ತವೆ. ಧರ್ಮಸ್ಥಳದ ಅಸಹಜ ಸಾವುಗಳ, ಮಹಿಳಾ ದೌರ್ಜನ್ಯಗಳ ವಿಷಯ ಈ ವಾಹಿನಿಗಳಿಗೆ ʼಬುರುಡೆ ಪುರಾಣʼ ಎನಿಸುತ್ತದೆ. ಎಲ್ಲ ವಾಹಿನಿಗಳಲ್ಲೂ ಚರ್ಚೆಗಳು ʼ ಧರ್ಮಸ್ಥಳ ʼ ಕೇಂದ್ರಿತವಾಗಿದೆಯೇ ಹೊರತು, ಅಲ್ಲಿ ಅತ್ಯಾಚಾರ, ಹತ್ಯೆಗೊಳಗಾದ ಹೆಣ್ಣು ಮಕ್ಕಳಾಗಲೀ, ಅವರ ಕುಟುಂಬದ ನೊಂದ ಸದಸ್ಯರಾಗಲೀ ಕೇಂದ್ರ ಬಿಂದು ಆಗಿಲ್ಲ. ಇದು ಮಾಧ್ಯಮ ಲೋಕದ ಅಸೂಕ್ಷ್ಮತೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ವರ್ತಮಾನದ ತಲ್ಲಣಗಳ ನಡುವೆ
ಈ ಸಮಸ್ಯೆಯನ್ನೂ ಮೀರಿ ರಾಜ್ಯ ಎಂತೆಂತಹ ಆಘಾತಕಾರಿ ಸಮಸ್ಯೆಗಳನ್ನು ಎದುರಿಸುತ್ತಿದೆ ?
ರಾಜ್ಯದಲ್ಲಿ ಬಾಲ ಗರ್ಭಿಣೀಯರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರು ವರ್ಷಗಳಲ್ಲಿ 80,813 ಪ್ರಕರಣಗಳು ದಾಖಲೆಯಾಗಿವೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಮಹಿಳಾ ದೌರ್ಜನ್ಯಗಳ ಸಂಖ್ಯೆ 43,052. ಪೋಕ್ಸೋ ಪ್ರಕರಣಗಳು ( ಅಪ್ರಾಪ್ತರ ವಿರುದ್ಧ ಲೈಂಗಿಕ ದೌರ್ಜನ್ಯ) ಮೂರು ವರ್ಷಗಳಲ್ಲಿ 10,510 ದಾಖಲಾಗಿವೆ. ಮಕ್ಕಳ ಅಪಹರಣದ ಪ್ರಕರಣಗಳು ಕಳೆದ ಆರು ವರ್ಷಗಳಲ್ಲಿ 14,878 ದಾಖಲಾಗಿವೆ. ರಾಜ್ಯದಲ್ಲಿ ಲಿಂಗಾನುಪಾತದ ಕುಸಿತ ನಿರಂತರವಾಗಿ ಸಾಗಿದ್ದು 2025ರಲ್ಲಿ 915 ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ 2,819 ದಾಖಲಾಗಿವೆ. ಇವುಗಳಲ್ಲಿ ತಡೆಗಟ್ಟಿರುವುದನ್ನು ಪರಿಗಣಿಸಬೇಕಿಲ್ಲ. ಏಕೆಂದರೆ ಬಾಲ್ಯ ವಿವಾಹ ಪದ್ಧತಿ ಜೀವಂತವಾಗಿದೆ ಎಂದು ಈ ಅಂಕಿ ಸಂಖ್ಯೆಗಳು ಸೂಚಿಸುತ್ತವೆ. ಈ ದೌರ್ಜನ್ಯಗಳನ್ನು ಹೊರತುಪಡಿಸಿ, ರೈತರ ಆತ್ಮಹತ್ಯೆ, ಕೃಷಿಕರ ಸಮಸ್ಯೆಗಳು, ಯುವ ಜನರ ಆತ್ಮಹತ್ಯೆ ಪ್ರಕರಣಗಳು ರಾಜ್ಯವನ್ನು ಕಾಡುತ್ತಿವೆ. ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದ್ದು 8000ಕ್ಕೂ ಹೆಚ್ಚು ಶಾಲೆಗಳಲ್ಲಿ ಶೂನ್ಯ ದಾಖಲಾತಿ ವರದಿಯಾಗಿದೆ.

ಸಾಮಾಜಿಕ ಮಾಧ್ಯಮ ಎಂಬ ಹಣೆಪಟ್ಟಿ ಹೊಂದಿರುವ ಡಿಜಿಟಲ್ ವೇದಿಕೆಗಳು ʼ ಸಾಮಾಜಿಕ ʼ ಎಂಬ ಪದದ ಅರ್ಥವನ್ನೇ ಅರ್ಥಮಾಡಿಕೊಳ್ಳದೆ ಇರುವುದು ದುರಂತ ಅಲ್ಲವೇ ? Subscribe ಮಾಡಿ, ಬೆಲ್ ಬಟನ್ ಒತ್ತಿ ಎಂದು ನೋಡುಗರಿಗೆ ಸಂದೇಶಗಳನ್ನು ನೀಡುವ ಮುನ್ನ, ಸಾಮಾಜಿಕ ಪ್ರಜ್ಞೆ ಇರುವ ಜನಸಮೂಹ ಯಾತಕ್ಕಾಗಿ ? ಎಂದು ಕೇಳುವ ಸಾಧ್ಯತೆಗಳಿರುತ್ತವೆ ಎಂಬ ಪರಿವೆಯಾದರೂ ಈ ವೇದಿಕೆಗಳಿಗೆ ಇರಬೇಕು. ನಾಡು ಎದುರಿಸುತ್ತಿರುವ , ಮಾನವ ಸಮಾಜವನ್ನೇ ತಲ್ಲಣಗೊಳಿಸುವ ಘಟನೆಗಳು ನಡೆಯುತ್ತಿದ್ದರೂ, ಈ ಘಟನೆಗಳ ಆಳ ಮತ್ತು ವ್ಯಾಪ್ತಿಯನ್ನು, ಅವುಗಳ ಹಿಂದಿನ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಹಾಗೂ ನೊಂದ ಜನತೆಗೆ ಸಾಂತ್ವನ ನೀಡುವಂತಹ ಪರಿಹಾರೋಪಾಯಗಳನ್ನು, ಸಾರ್ವಜನಿಕ ಚರ್ಚೆಗಳ ಮೂಲಕ ಜನರ ಮುಂದಿಡುವುದು ಡಿಜಿಟಲ್ ವೇದಿಕೆಗಳ ನೈತಿಕ ಕರ್ತವ್ಯ ಅಲ್ಲವೇ ?
ಈ ಕರ್ತವ್ಯವನ್ನು ಎಷ್ಟು ಯು ಟ್ಯೂಬರ್‌ಗಳು, ಇತರ ವೇದಿಕೆಗಳು ನಿಭಾಯಿಸಿವೆ ? ಸಮಾಜದಲ್ಲಿ ಅಪಾರ ಸಂಖ್ಯೆಯಲ್ಲಿರುವ ವಿಷಯ ತಜ್ಞರ, ಬುದ್ಧಿಜೀವಿಗಳ, ಕಾರ್ಯಕರ್ತರ ಹಾಗೂ ಕಾಳಜಿಯುಳ್ಳ ಹಿರಿಯ ನಾಗರಿಕರ ಜೊತೆ ಸಂವಾದಗಳನ್ನು ನಡೆಸಿವೆ ? ಇದು ನಮ್ಮ, ಅಂದರೆ ನಾಗರಿಕ ಪ್ರಜ್ಞೆ ಇರುವ ಜನರ ಹಾಗೂ ಇವರನ್ನು ಪ್ರತಿನಿಧಿಸುವ ಡಿಜಿಟಲ್ ವೇದಿಕೆಗಳ, ಆದ್ಯತೆ ಆಗಬೇಕಲ್ಲವೇ ? 1 ರಿಂದ 3 ನಿಮಿಷಗಳ ರೀಲ್ಸ್‌ಗಳನ್ನು ವಾಟ್ಸಾಪ್ ಮೂಲಕ, ಹಂಚುವುದರಲ್ಲೇ ಕಾಲ ಕಳೆಯುತ್ತಿರುವ ಸಮಾಜದಲ್ಲಿ ಸಾಮಾಜಿಕ ಅರಿವು ಮೂಡಿಸುವ ಒಂದು ಸಾಂವಿಧಾನಿಕ ಜವಾಬ್ದಾರಿ ಈ ವೇದಿಕೆಗಳ ಮೇಲಿದೆ ಅಲ್ಲವೇ ? ಈ ಪ್ರಶ್ನೆಗಳಿಗೆ ಕೇವಲ ಈ ವೇದಿಕೆಗಳು ಮಾತ್ರ ಉತ್ತರಿಸಿದರೆ ಸಾಲದು, ಇಡೀ ಸಮಾಜವೇ ಉತ್ತರಿಸಬೇಕಿದೆ.

ಏಕೆಂದರೆ ಅಂತಿಮವಾಗಿ ಭವಿಷ್ಯದ ಆರೋಗ್ಯಕರ , ಸೌಹಾರ್ದಯುತ, ಮಾನವೀಯ ಸಮಾಜ ಕಟ್ಟುವುದರಲ್ಲಿ ನಾವೆಲ್ಲರೂ ಜವಾಬ್ದಾರರಾಗಿರುತ್ತೇವೆ.
-೦-೦-೦-






