
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆ ಎದುರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ಮಾಜಿ ಸಚಿವ ಬಿ ಶ್ರೀರಾಮುಲು, ನವೆಂಬರ್ 10 ರಂದು ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾವನ್ನಪ್ಪಿದ್ರು. ಆದ್ರೆ ತಿಂಗಳ ಬಳಿಕ ಆಸ್ಪತ್ರೆಗೆ ಆರೋಗ್ಯ ಸಚಿವರು ಬಂದಿದ್ದಾರೆ. ಕಳೆದ ಮಾರ್ಚ್‌ನಿಂದಲೇ ಬಾಣಂತಿಯರ ಸಾವು ಸಂಭವಿಸುತ್ತಿದೆ. ಆಗ ಗಮನಹರಿಸದ ಆರೋಗ್ಯ ಸಚಿವರು, ಈಗ ಅಧಿವೇಶನ ಇದೆ ಅಂತ ಬಳ್ಳಾರಿಗೆ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ನಾಯಕ ಪಿ. ರಾಜೀವ್, ಸಚಿವರ ಬಳ್ಳಾರಿ ಭೇಟಿ, ಮೊಸಳೆ ಕಣ್ಣೀರು ಅಷ್ಟೇ ಎಂದಿದ್ದಾರೆ. ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನರೀಪುರದಲ್ಲಿ ಮಾತನಾಡಿದ ಸಿಎಂ, ಈಗಾಗಲೇ ಡ್ರಗ್ ಕಂಟ್ರೋಲರ್ ಸಸ್ಪೆಂಡ್ ಮಾಡಲಾಗಿದೆ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಹಾಗು ಡ್ರಗ್ ಏಜೆನ್ಸಿಯಿಂದ ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಬಾಣಂತಿಯರ ಸಾವು ಆಕಸ್ಮಿಕವಾಗಿ ಆಗುತ್ತವೆ, ಆಗಲ್ಲ ಎಂದೇನಿಲ್ಲ. ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸ್ವಾಭಾವಿಕ ಎಂದಿದ್ದಾರೆ. ಈ ಕುರಿತು ಈಗ ತನಿಖೆ ನಡೆಯುತ್ತಿದೆ ವರದಿ ಬಂದ ಮೇಲೆ ನೋಡೋಣ. ತನಿಖೆಯಲ್ಲಿ ತಪ್ಪಿತಸ್ಥರು, ಕೆಳಗಿನವರಾ..? ಅಧಿಕಾರಿಗಳಾ..? ವೈದ್ಯರಾ..? ಅನ್ನೋದು ಗೊತ್ತಾಗುತ್ತದೆ. ವರದಿ ಬಂದ ನಂತರ ಅದರ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ.

ಇನ್ನು ಆರೋಗ್ಯ ಸಚಿವರ ರಾಜಿನಾಮೆಗೆ ಪಿ. ರಾಜೀವ್ ಒತ್ತಾಯ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಟ್ರೈನ್ ಆ್ಯಕ್ಸಿಡೆಂಟ್ ಎಷ್ಟು ಆಗ್ತವೆ ಎಂದು ಟಾಂಗ್ ನೀಡಿದ್ದಾರೆ. ಯಾರಾದ್ರೂ ಅವರ ರಾಜಿನಾಮೆ ಕೇಳಿದ್ದಾರಾ..? ಎಂದಿರುವ ಸತೀಶ್ ಜಾರಕಿಹೊಳಿ, ಸುಮ್ಮನೇ ರಾಜಿನಾಮೆ ಕೇಳಬೇಕು ಅಂತಾ ಕೇಳೋದಲ್ಲ. ಮೋದಿಯವರ ಕಾಲದಲ್ಲಿ ಸುಮಾರು 30 ರೈಲು ಅಪಘಾತವಾಗಿವೆ. ಯಾರಾದ್ರೂ ಅವರ ರಾಜಿನಾಮೆ ಕೇಳಿದ್ದಾರಾ..? ಎನ್ನುವ ಮೂಲಕ ಎಲ್ಲದಕ್ಕೂ ರಾಜಿನಾಮೆ ಮಾತ್ರ ಪರಿಹಾರ ಅಲ್ಲ. ತಪ್ಪನ್ನು ಸರಿ ಮಾಡುವ ಕೆಲಸ ಆಗಬೇಕು ಎಂದಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಗೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಸೇರಿ ಮಹಿಳಾ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಹೆರಿಗೆ ವಾರ್ಡ್, ಐಸಿಯು ಜೊತೆಗೆ ಔಷಧಿ ಉಗ್ರಾಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎಂಎಲ್ಸಿ ಹೇಮಲತಾ, ಮಾಜಿ ಶಾಸಕಿ ರೂಪಾಲಿ ನಾಯ್ಕ ಕೂಡ ಉಪಸ್ಥಿತರಿದ್ದರು. ಈ ನಡುವೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಸುಮೋಟೊ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ಮುಖ್ಯ ನ್ಯಾ. ಬಿಎಸ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ.