ಕನ್ನಡ ನಾಡಿನ ಮಕ್ಕಳ ಬಿಸಿಯೂಟಕ್ಕೂ ಕೈ ಹಾಕಿ ಆ ಮೂಲಕವೇ ವಿದೇಶಗಳಿಂದ ಡೊನೇಷನ್ ಪಡೆಯುತ್ತಿರುವ ಇಸ್ಕಾನ್ ಎಂಬ ಸಂಸ್ಥೆಗೆ 125 ವರ್ಷ ತುಂಬಿತಂತೆ! ಅದಕ್ಕೇ ನಮ್ಮ ಘನ ಪ್ರಧಾನಿಗಳು ಕಳೆದ ವಾರ ಇಸ್ಕಾನ್ ಹೆಸರಲ್ಲಿ 125 ರೂ. ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ್ದಾರೆ.
ಇದು ಒಂದು ರೀತಿಯಲ್ಲಿ ಅಸಂಬದ್ಧತೆ. ಮಕ್ಕಳ ತಟ್ಟೆಗೂ ಕೈ ಹಾಕಿ ಲಾಭ ಮಾಡಿಕೊಂಡ ಸಂಸ್ಥೆಗೆ ಮನ್ನಣೆ ನೀಡಿದ್ದು ಒಂದು ಅಸಂಬದ್ಧತೆಯಾದರೆ, 125 ರೂ. ಮೌಲ್ಯದ ನಾಣ್ಯ ಎಂಬುದಂತೂ ಮಹಾನ್ ಅಸಂಬದ್ಧತೆ. ಡಿನಾಮೇಷನ್ ಲೆಕ್ಕದಲ್ಲಿ ನೋಡುವುದಾದರೆ 100 ರೂ ಅಥವಾ 200 ರೂ ನಾಣ್ಯ ಒಪ್ಪಬಹುದೇನೋ? ಆದರೆ, ಅಸಂಬದ್ಧ ಎಕಾನಮಿಯನ್ನೇ ಪಾಲಿಸಿಕೊಂಡು ಬಂದಿರುವ ಮೋದಿ ಸರ್ಕಾರ 125 ರೂ ಅಷ್ಟೇ ಅಲ್ಲ ಮುಂದೆ 75 ರೂ ಅಥವಾ 97 ರೂ ನಾಣ್ಯಗಳನ್ನೂ ಬಿಡುಗಡೆ ಮಾಡಬಹುದು.
ಅಷ್ಟಕ್ಕೂ ಈ ಇಸ್ಕಾನ್ ಸಾಧನೆಯಾದರೂ ಏನು? ಸಾಧನೆ ಮಾತು ಹಾಳಾಗಿ ಹೋಗಲಿ, ಅದರಿಂದ ಆದ ನಷ್ಟವೇ ಹೆಚ್ಚು. ಆಸ್ತಿಗಾಗಿ ಅದರ ಟ್ರಸ್ಟಿಗಳ ನಡುವೆ ನಡೆದ ಕಿತ್ತಾಟದ ಕುರಿತು ಕನ್ನಡದಲ್ಲಿ ಮೊದಲು ವರದಿ ಮಾಡಿದ್ದೇ ನಮ್ಮ ‘ಪ್ರತಿಧ್ವನಿ’. ಆಗ ನಾಲ್ಕು ಸರಣಿ ವರದಿಗಳ ಮೂಲಕ ಇಸ್ಕಾನ್ ಅನ್ನು ಪ್ರತಿಧ್ವನಿ ಎಕ್ಸ್‍ಪೋಸ್ ಮಾಡಿತ್ತು.
ಈಗ ಮತ್ತೆ ‘ಪ್ರತಿಧ್ವನಿ’ಯೇ ಧ್ವನಿ ಎತ್ತುತ್ತಿದೆ. ಶರಣ ಪರಂಪರೆಯ ಈ ನೆಲದಲ್ಲಿ ದಾಸೋಹ ಎಂಬುದು ಕೇವಲ ಪದವಲ್ಲ. ಅದು ಕಾಯಕದ ಪರಿಕಲ್ಪನೆಯಲ್ಲಿ ಒಡಮೂಡಿ ಬಂದ ಒಂದು ಶ್ರೇಷ್ಠ ಕಾರ್ಯ., ಆ ಕಾರಣಕ್ಕೇ ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕೆ ‘’ಅಕ್ಷರ ದಾಸೋಹ’ ಎಂಬ ಅರ್ಥಪೂರ್ಣ ಹೆಸರನ್ನು ಇಟ್ಟಿತು. ಆದರೆ ಮುಂದೆ ಈ ಯೋಜನೆಯೊಳಕ್ಕೆ ತೂರಿಕೊಂಡ ಇಸ್ಕಾನ್ ಸರ್ಕಾರದ ಅನುದಾನ ಪಡೆಯುತ್ತಲೇ ಅದಕ್ಕೆ ಅಕ್ಷಯ ಪಾತ್ರೆ ಎಂದು ಹೆಸರು ಇಟ್ಟುಕೊಂಡಿತು. ದಾಸೋಹ ಎಂಬುದು ವಾಸ್ತವವಾದರೆ, ಅಕ್ಷಯ ಪಾತ್ರೆ ಎಂಬುದು ಊಹಾತ್ಮಕವಾದುದು. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಬಹುಷಃ ಇದು ಇಸ್ಕಾನ್ ಪಾಲಿಗೆ ವಿದೇಶಿ ದೇಣಿಗೆ ತಂದು ಕೊಡುವ ಅಕ್ಷಯ ಪಾತ್ರೆ ಅಷ್ಟೇ.
Also Read: ಇಸ್ಕಾನ್ ‘ಅಕ್ಷಯ ಪಾತ್ರೆ’ಯಲ್ಲಿ ಅಕ್ರಮದ ಬಿರುಗಾಳಿ: ಟ್ರಸ್ಟಿಗಳ ರಾಜೀನಾಮೆ!
ಒಂದೇ ಒಂದು ಶಾಲೆ, ಆಸ್ಪತ್ರೆ, ಅನಾಥಾಶ್ರಮ ಕಟ್ಟದ ಇಸ್ಕಾನ್, ಬೆಂಗಳೂರಿನಲ್ಲಿ ಹಲವಾರು ಸರಣಿ ಹೊಟೇಲ್‍ಗಳನ್ನು ಆರಂಭಿಸಿದೆ, ಒಂದು ಅಪಾರ್ಟ್‍ಮೆಂಟನ್ನೂ ಕಟ್ಟಿದೆ ಎನ್ನಲಾಗಿದೆ.
ಸರ್ಕಾರದಿಂದ ಅನುದಾನ ಪಡೆಯುವ ಇಸ್ಕಾನ್ ತಾನು ಉಚಿತ ಊಟ ನೀಡುತ್ತಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದೆ. ಅಷ್ಟಕ್ಕೂ ಅದು ಒದಗಿಸುವ ಆಹಾರ ಪೌಷ್ಟಿಕತೆಯ ಕೊರತೆ ಹೊಂದಿದೆ. ಅದರ ಆಹಾರದಲ್ಲಿ ಈರುಳ್ಳಿ ಇಲ್ಲ, ಬೆಳ್ಳುಳ್ಳಿಯೂ ಇಲ್ಲ. ಈ ಕುರಿತು ಪ್ರತಿಧ್ವನಿ ಜೊತೆ ಮಾತನಾಡಿದ ಖ್ಯಾತ ಆಹಾರ ತಜ್ಞ ಡಾ. ಕೆಸಿ. ರಘು ಅವರು ‘ಮುಠ್ಠಾಳರು ಕಣ್ರೀ. ಈರುಳ್ಳಿ, ಬೆಳ್ಳುಳ್ಳಿ ದೇಹ ಸೇರಿದ ನಂತರ ಅಲ್ಲಿ ಮೆಟಾಬಾಲಿಕಲ್ ಪ್ರಕ್ರಿಯೆ ಜರುಗಿ ಆಲಿಸಿನ್ ಎಂಬ ರಾಸಾಯನಿಕ ಉತ್ಪಾದನೆಯಾಗುತ್ತದೆ. ಇದು ದೇಹದ ಕೊಲೆಸ್ಟೊರಾಲ್ ಅನ್ನು ನಿಯಂತ್ರಣ ಮಾಡುತ್ತದೆ. ನಾವು ಅದನ್ನು ತಿನ್ನಲ್ಲ, ಇದನ್ನು ತಿನ್ನಲ್ಲ, ನಾವು ಪ್ಯೂರ್ ಎಂಬ ಪರಿಕಲ್ಪನೆಯೇ ಮೂರ್ಖತನದ್ದು. ಇಸ್ಕಾನ್ ತನ್ನ ಅಡುಗೆಯಲ್ಲಿ ಬಳಸುವ ಡಾಲ್ಡಾದಿಂದ ದೇಹಕ್ಕೆ ನಷ್ಟವೇ ಹೊರತು ಲಾಭವಂತೂ ಇಲ್ಲ. ಇಂತಹ ಸಂಸ್ಥೆಯ ಹೆಸರಲ್ಲಿ ನಾಣ್ಯ ಬಿಡುಗಡೆ ಮಾಡಿರುವುದು ಮೂರ್ಖತನವಷ್ಟೇ ಅಲ್ಲ, ವ್ಯಾಪಾರಿ ಸಂಸ್ಥೆಯೊಂದಕ್ಕೆ ಸರ್ಕಾರವೇ ಮನ್ನಣೆ ನೀಡಿದ ಅಸಹ್ಯದ ಪರಮಾವಧಿ’ ಎಂದಿದ್ದಾರೆ..
‘ತಮಿಳುನಾಡಿನಲ್ಲಿ ಎಂ.ಜಿ ರಾಮಚಂದ್ರನ್ ಅವಧಿಯಲ್ಲಿ ಆರಂಭವಾದ ಮಧ್ಹಾಹ್ಬದ ಊಟಕ್ಕೆ ವಿವಿಧ ಆಯಾಮಗಳಿವೆ. ಬಡ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಮಾಡುವುದು ಮೂಲ ಉದ್ದೇಶ. ಶಾಲೆಯ ಆವರಣದಲ್ಲೇ ನಡೆಯುವ ಆಹಾರ ತಯಾರಿಕೆಯ ಪ್ರಕ್ರಿಯೆಯಲ್ಲಿ ಮಕ್ಕಳು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಾರೆ. ಇದಕ್ಕೆ ಒಂದು ಸಾಮಾಜಿಕ ಆಯಾಮವೂ ಇದೆ. ಎಲ್ಲೋ ತಯಾರಿಸಿ ಸುರಿದು ಹೋಗುವ ಇಸ್ಕಾನ್‍ನ ಆಹಾರದಿಂದ ಮಕ್ಕಳ ಪೌಷ್ಟಿಕತೆ ಹೆಚ್ಚಲಾರದು’ ಎಂದು ಡಾ ರಘು ಹೇಳಿದ್ದಾರೆ.
ಬಿಸಿಯೂಟ ಕೆಲಸಗಾರರ ಸಂಘಟನೆಯ ಮುಂದಾಳತ್ವ ವಹಿಸಿರುವ ವರಲಕ್ಷ್ಮಿ, ಸುನಂದಾ ಮತ್ತು ಮಾಲಿನಿಯವರ ಪ್ರಕಾರ, ಇಸ್ಕಾನ್ ಮತ್ತು ಇತರ ಎನ್‍ಜಿಒಗಳಿಗೆ ಅವಕಾಶ ನೀಡುವ ಮೂಲಕ ಸರ್ಕಾರ ತನ್ನ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದೆ. ಇದರಿಂದ ಲಕ್ಷಾಂತರ ಬಡ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಈ ಕೇಂದ್ರೀಕೃತ ಅಡುಗೆ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು. ಎಲ್ಲ ಶಾಲೆಗಳಲ್ಲೂ ಅಲ್ಲಿಯೇ ಆಹಾರ ತಯಾರಿಕೆ ನಡೆಯಬೇಕು. ಬಿಸಿಯೂಟ ಕಾರ್ಯಕರ್ತೆಯರಿಗೆ ನ್ಯಾಯಯುತ ಸಂಭಾವನೆ ದೊರಕಬೇಕು. ಮುಂದಿನ ಹಂತದಲ್ಲಿ ಅವರನ್ನು ಖಾಯಂ ನೌಕರರನ್ನಾಗಿ ಮಾಡಬೇಕು’ ಎಂದಿದ್ದಾರೆ.
Also Read: ISKCON ಅಕ್ರಮಕ್ಕೆ ಸಾಥ್ ನೀಡಿದ ಸಂಸದ ತೇಜಸ್ವಿ ಸೂರ್ಯ?
ಈ ಕುರಿತು ನಮ್ಮೊಂದಿಗೆ ಮಾತನಾಡಿದ ಬಂಡಾಯ ಸಾಹಿತಿ, ಪ್ರಕಾಶಕ ಬಸವರಾಜ ಸೂಳಿಭಾವಿ ಮತ್ತು ಕಮ್ಯುನಿಸ್ಟ್ ಹಿನ್ನೆಲೆಯ ಭೀಮನಗೌಡ ಕಾಶಿರೆಡ್ಡಿ, ‘’ದೇಶದಲ್ಲಿ ಸಾವಿರಾರು ಸಮಾಜಮುಖಿ ಸಂಸ್ಥೆಗಳಿವೆ. ಅದನ್ನೆಲ್ಲ ಬಿಟ್ಟು ಈ ಇಸ್ಕಾನ್ ಎಂಬ ಸಂಸ್ಥೆಯ ಹೆಸರಲ್ಲಿ ನಾಣ್ಯ ಬಿಡುಗಡೆ ಮಾಡಿರುವುದು ಮೋದಿ ಸರ್ಕಾರದ ಧೋರಣೆಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲೇ ಎಷ್ಟೊಂದು ಲಿಂಗಾಯತ ಮಠಗಳು ಶತಮಾನಗಳಿಂದ ದಾಸೋಹ ಪರಂಪರೆ ಮೂಲಕ ನಾಡು ಕಟ್ಟುವ ಕೆಲಸ ಮಾಡಿವೆ. ಸಿದ್ದಗಂಗಾ ಮಠ, ವಿಜಯಪುರದ ಇಂಚಿಗೇರಿ ಮಠ, ಗದಗ-ಹುಬ್ಬಳ್ಳಿ-0ಬೆಳಗಾವಿ-ಕಲಬುರ್ಗಿಯ ಹಲವಾರು ಮಠಗಳು ಅನ್ನ ಮತ್ತು ಜ್ಞಾನ ದಾಸೋಹದ ಪರಂಪರೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ನಡೆಸಿಕೊಂಡು ಬಂದಿವೆ. ಆದರೆ ಇಸ್ಕಾನ್ ಎಂಬ ವಂಚಕ ಸಂಸ್ಥೆ ಹೆಸರಲ್ಲಿ ನಾಣ್ಯ ಬಿಡುಗಡೆ ಮಾಡಿರುವುದು ಮೋದಿ ಸರ್ಕಾರದ ವೈದಿಕ ಮನೋಭಾವಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಜೆ.ಎಸ್ ಪಾಟೀಲ್,’ ದಾನ ಮತ್ತು ದಾಸೋಹ ಎರಡೂ ತದ್ವಿರುದ್ಧ. ದಾನ ಎಂಬುದು ವೈದಿಕ ಪರಂಪರೆಯದ್ದು. ಅಲ್ಲಿ 16 ಬಗೆಯ ದಾನಗಳನ್ನು ವೈದಿಕರಿಗೆ ನೀಡಬೇಕು. ಇದು ಒಂದು ಅಸಹ್ಯದ ವಿಧಾನ. ಆದರೆ, ದಾಸೋಹ ಪರಿಕಲ್ಪನೆಯಲ್ಲಿ ಭೇದಭಾವವಿಲ್ಲ. ಅಲ್ಲಿ ಪ್ರಾಮಾಣಿಕ ಕಾಯಕದಿಂದ ದುಡಿದ ಸಂಪತ್ತಿನ ಹಂಚಿಕೆಯಾಗುತ್ತದೆ. ಅಲ್ಲಿ ನೀಡುವಾತನೂ ಸಾಮಾನ್ಯ, ಪಡೆದುಕೊಳ್ಳುವಾತನೂ ಸಾಮಾನ್ಯ’ ಎಂದಿದ್ದಾರೆ.
Also Read: ʼಹರೇ ಕೃಷ್ಣʼ ಎನ್ನುತ್ತಲೇ ಕೈಗಾರಿಕಾ ಜಮೀನು ದುರ್ಬಳಕೆ ಮಾಡಿದ ಇಸ್ಕಾನ್
ಒಟ್ಟಿನಲ್ಲಿ ಕನ್ನಡದ ಸರ್ಕಾರಿ ಶಾಲೆಗಳ ಮಕ್ಕಳ ಬಿಸಿಯೂಟದ ತಟ್ಟೆಗೂ ಕೈ ಹಾಕಿ ವಿದೇಶಗಳಿಂದ ದೇಣಿಗೆ ಪಡೆಯುತ್ತಿರುವ ಸಂಸ್ಥೆಯ ಹೆಸರಲ್ಲಿ ಮೋದಿ ಸರ್ಕಾರ 125 ರೂ. ನಾಣ್ಯ ಬಿಡುಗಡೆ ಮಾಡಿದ್ದು ಈ ಸರ್ಕಾರದ ವೈದಿಕ ಮತ್ತು ಬಂಡವಾಳಶಾಹಿ ಧೋರಣಗೆ ಒಂದು ಸಂಕೇತವಾಗಿದೆ.
ಕೃಷ್ಣ ಕೃಷ್ಣ ಹರಿಕೃಷ್ಣ!
Also Read: ಅಕ್ಷಯಪಾತ್ರಾ ಅವ್ಯವಹಾರ: ಅನುಮಾನ ಹುಟ್ಟಿಸಿದ ಸಚಿವ ಈಶ್ವರಪ್ಪ ಟ್ವೀಟ್ !