ಬಿಜೆಪಿ ಸರ್ಕಾರ ಬೆಂಗಳೂರು ನಗರಕ್ಕಿರುವ ಘನತೆ, ಗೌರವವನ್ನು ಉಳಿಸಿಕೊಳ್ಳಬೇಕು. ಬಹಳ ಹಿಂದಿನಿಂದಲೂ ಬೇರೆ ರಾಜ್ಯ ಹಾಗೂ ದೇಶಗಳಿಂದ ಉದ್ದಿಮೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಡೆ ಗಮನಹರಿಸದೇ, ಸಮಾಜದ ಧೃವೀಕರಣ, ಕೋಮುವಾದದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರ ತಾನು ಸರ್ವ ಸ್ಪರ್ಶಿ ಹಾಗೂ ಸರ್ವ ವ್ಯಾಪಿ ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಂಡರು. ಆದರೆ ತಾವು ಘೋಷಿಸಿದ ಬಜೆಟ್ ಅನ್ನೇ ಸರಿಯಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹೊಣೆಯಾರು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು ನಗರ ಅಥವಾ ರಾಜ್ಯಕ್ಕೆ ಏನಾದರೂ ಕೊಡುಗೆ ಬಂತಾ? ಇಲ್ಲ. ಇನ್ನು ರಾಜ್ಯದಿಂದ ಆಯ್ಕೆಯಾಗಿ ಹಣಕಾಸು ಸಚಿವೆಯಾದ ನಿರ್ಮಲಾ ಸೀತರಾಮನ್ ಅವರು ಮತ್ತೊಮ್ಮೆ ರಾಜ್ಯದಿಂದ ಆಯ್ಕೆಯಾಗುತ್ತಿದ್ದಾರೆ. ಅವರು ರಾಜ್ಯದಿಂದ ಆಯ್ಕೆ ಯಾಗಿರುವುದಕ್ಕೆ ಜನರಿಗೆ, ಬೆಂಗಳೂರಿಗೆ ಅಥವಾ ಕರ್ನಾಟಕಕ್ಕೆ ವಿಶೇಷ ಕೊಡುಗೆ, ಉಡುಗೊರೆ ನೀಡಿದ್ದಾರಾ? ಯಾವುದಾದರೂ ಯೋಜನೆ ಕೊಟ್ಟಿದ್ದಾರಾ? ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.
ಈಗ ಮಳೆ ಬಂದು ಅವಾಂತರವಾದ ನಂತರ ಬಿಜೆಪಿಯವರು ಛತ್ರಿ ಹಿಡಿದುಕೊಂಡು ಸಿಟಿ ರೌಂಡ್ಸ್ ಹಾಕುತ್ತಿದ್ದೇನೆ ಎಂದರೆ ಹೇಗೆ? ನಮ್ಮ ಬಡಾವಣೆಯಲ್ಲಿ ಚೆನ್ನಾಗಿರುವ ರಸ್ತೆಯನ್ನು ಕಿತ್ತು ಮತ್ತೆ ಬೇರೆ ರಸ್ತೆ ಹಾಕುತ್ತಿದ್ದಾರೆ. ಆದರೆ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸುತ್ತಿಲ್ಲ.
ಬೆಂಗಳೂರು ನಗರದ ಘನತೆ ಉಳಿಸಲು ಶಾಸಕರ ಸಭೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸರ್ಕಾರ ಎಲ್ಲ ಶಾಸಕರ ಸಭೆ ಮಾಡಿದರೆ ಕಾಂಗ್ರೆಸ್ ಶಾಸಕರೂ ಭಾಗವಹಿಸುತ್ತಾರಲ್ಲವೇ, ಭಾಗವಹಿಸಿದರೆ ಅವರು ಧ್ವನಿ ಎತ್ತುತ್ತಾರೆ ಅವರಿಗೆ ಅಪಮಾನವಾಗುತ್ತದೆಯಲ್ಲ. ಹಿಗಾಗಿ ಸಭೆ ಮಾಡಲು ಹಿಂಜರಿಯುತ್ತಿದ್ದಾರೆ’ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಆರೋಪ ಮಾಡುತ್ತಲೇ ಇರುತ್ತಾರೆ, ನಾವು ಕೇಳಿಸಿಕೊಳ್ಳೋಣ. ನಮ್ಮ ಕೆಲಸ ನಾವು ಮೋಡೋಣ. ಬೆಂಗಳೂರಿನ ಜನರಿಗಾಗಿಯೇ ನಾವು ಮೇಕೆದಾಟು ಹೋರಾಟ ಮಾಡಿದೆವು. ನಾವು ನಮ್ಮ ಕರ್ತವ್ಯವನ್ನು ಹಿಂದೆಯೂ ಮಾಡಿದ್ದು, ಈಗಲೂ ಮಾಡುತ್ತಿದ್ದು, ಮುಂದೆಯೂ ಮಾಡುತ್ತೇವೆ. ಮುಂದಿನ ಚುನಾವಣೆಗೆ ನಾವು ಬೆಂಗಳೂರಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದವನು. ನನಗೆ ಬೆಂಗಳೂರಿನ ಬಗ್ಗೆ ನನ್ನದೇ ಆದ ಕಲ್ಪನೆ ಇದೆ. ಬೆಂಗಳೂರಿನ ಪ್ರಾಮುಖ್ಯತೆ, ಒಂದೂವರೆ ಕೋಟಿ ಜನ ಕಟ್ಟುತ್ತಿರುವ ತೆರಿಗೆ, ಇಲ್ಲಿ ಬಂಡವಾಳ ಹೂಡಲು ಎಷ್ಟು ಜನ ಮುಂದಾಗಿದ್ದರು, ಅವರನ್ನು ಹೇಗೆ ಉಳಿಸಿಕೊಳ್ಳಬೇಕು, ಇಲ್ಲಿ ಸಂಪಾದನೆ ಮಾಡಿದರೆ ಮಾತ್ರವೇ ನಾವು ಹಳ್ಳಿಗಳಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯ ಎಂಬುದು ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕ್ರಮಗಳು’ ಎಂದು ಉತ್ತರಿಸಿದರು.
ಪಠ್ಯ ಪುಸ್ತಕ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಮಗೆ ನಮ್ಮ ಇತಿಹಾಸ ಮುಖ್ಯ. ಹಿಂದೆ ಇದ್ದ ನಮ್ಮ ಪಠ್ಯ ಪುಸ್ತಕವನ್ನು ತಜ್ಞರುಗಳು ಸೇರಿ ಸಿದ್ಧಪಡಿಸಿದ್ದರು. ರಾಮಾಯಣ, ಮಹಾಭಾರತ, ಬುದ್ಧ, ಟಿಪ್ಪು ಬಗ್ಗೆ ಪಠ್ಯದಲ್ಲಿ ಸೇರಿಸಲಾಗಿತ್ತು. ರಾಷ್ಟ್ರಪತಿಗಳು ಕೂಡ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾರಾಯಣ ಗುರುಗಳ ಪಠ್ಯ ತೆಗೆಯಲು ಷಡ್ಯಂತ್ರ ರೂಪಿಸಿದ್ದಾರೆ. ಈಗ ಅವರು ಯಾವುದನ್ನೂ ತೆಗೆದಿಲ್ಲ ಎಂದು ಹೇಳುತ್ತಿದ್ದಾರೆ. ನಾರಾಯಣ ಗುರುಗಳ ವಿಚಾರಕ್ಕೆ ಮಹತ್ವವಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದಾಗ ಸುನಿಲ್ ಕುಮಾರ್ ಅವರ ಧ್ವನಿ ಏನಾಗಿತ್ತು? ಈ ಹಿಂದೆ ಇದ್ದ ಎಲ್ಲಾ ಅಂಶಗಳು ಪಠ್ಯ ಪುಸ್ತಕದಲ್ಲಿ ಇರಬೇಕು ಎಂಬುದು ನಮ್ಮ ಆಗ್ರಹ’ ಎಂದು ಉತ್ತರಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೊಂದು ಸುತ್ತು ಚರ್ಚೆ ಮಾಡುತ್ತೇವೆ. ನಮಗೆ ಕೇವಲ 2 ಸ್ಥಾನಗಳಿಗೆ ಮಾತ್ರ ಅವಕಾಶವಿದ್ದು, ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಚರ್ಚೆ ಮಾಡಿ ವರಿಷ್ಠರು ತೀರ್ಮಾನ ಮಾಡುತ್ತಾರೆ’ ಎಂದರು.
ರಾಜ್ಯಸಭೆ ಚುನಾವಣೆ ಸಂಬಂಧ ಕೇಳಿದ ಪ್ರಶ್ನೆಗೆ, ‘ರಾಜ್ಯ ಸಭೆ ವಿಚಾರದಲ್ಲಿ ನಮ್ಮಲ್ಲಿ ಒಂದು ಪದ್ಧತಿ ಇದೆ. ಕೇಂದ್ರ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದನ್ನು ಪಾಲಿಸುತ್ತೇವೆ. ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುತ್ತದೆ’ ಎಂದರು.