
ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಮುಂದಾಗಿರುವ ಜಾತಿ ಜನಗಣತಿ ಬಗ್ಗೆ ಒಕ್ಕಲಿಗ ಸಮುದಾಯ ಕೆರಳಿ ಕೆಂಡವಾಗಿದೆ. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಒಕ್ಕಲಿಗ ಶಾಸಕರು, ಸಚಿವರ ಜೊತೆ ತಡರಾತ್ರಿ ಸಭೆ ನಡೆಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿ ಕೊಟ್ಟಿದೆ, ಆಯೋಗದ ವರದಿ ಕ್ಯಾಬಿನೆಟ್‌ನಲ್ಲಿ ಮಂಡನೆ ಆಗಿದೆ. ಎಲ್ಲಾ ಸಚಿವರಿಗೂ ವರದಿ ಕೊಡಲಾಗಿದ್ದು, ಚರ್ಚೆ ಆಗಲಿ, ಏಪ್ರಿಲ್ 17ರಂದು ಕ್ಯಾಬಿನೆಟ್‌ನಲ್ಲೂ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಮಾಧ್ಯಮಗಳಲ್ಲಿ ಜಾತಿ ಜನಗಣತಿ ಬಗ್ಗೆ ವರದಿ ಬರ್ತಿದೆ, ಕೆಲವರು ಅಭಿಪ್ರಾಯಗಳನ್ನೂ ಹೇಳ್ತಿದ್ದಾರೆ. ಜಾತಿ ಜನಗಣತಿ ವರದಿಯ ಸಾರಾಂಶದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಿದೆ. ಸಚಿವ ಕೃಷ್ಣ ಬೈರೇಗೌಡ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಹಿರಿಯ ನಾಯಕ B.L ಶಂಕರ್ ಸಭೆಯಲ್ಲಿ ಮಾತನಾಡಿ ಮಾಹಿತಿ ನೀಡಿದ್ದಾರೆ. ಈ ಸರ್ವೇ ಆಗಬೇಕು ಅಂತ ನಾವೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಶಾಸಕರು ಡೀಟೇಲ್ಸ್ ಮಾಹಿತಿ ಬೇಕು ಅಂತ ಕೇಳಿದ್ದಾರೆ ಕೊಡ್ತೇವೆ ಎಂದಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಬಂದಿದೆ. ಮುಸ್ಲಿಮರು ಹೆಚ್ಚು ಇದ್ದಾರೆ ಅನ್ನೋ ತರ ವರದಿ ಬಂದಿವೆ. ಆದರೆ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇವೆ. ಕ್ಯಾಬಿನೆಟ್ ಸಭೆಯಲ್ಲಿ ಏನು ಅಭಿಪ್ರಾಯ ತಿಳಿಸಬೇಕು ಅಂತ ಚರ್ಚೆ ಮಾಡಿದ್ದೇವೆ. ಅದನ್ನ ಕ್ಯಾಬಿನೆಟ್ನಲ್ಲೇ ನಾವು, ಸಚಿವರು ಹೇಳುತ್ತೇವೆ. ಶಾಸಕರು ತಮ್ಮ ಅಭಿಪ್ರಾಯವನ್ನು ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಲು ಹೇಳಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಶಾಸಕರ ಅಭಿಪ್ರಾಯ ಕ್ಯಾಬಿನೆಟ್‌ನಲ್ಲಿ ಹೇಳುತ್ತೇವೆ ಎಂದಿದ್ದಾರೆ.
ನಮ್ಮ ಸಮುದಾಯದ ಬಗ್ಗೆ ನಾವು ಯೋಚನೆ ಮಾಡುತ್ತಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ, ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಬೇಕು. ಸುಮ್ಮನೆ ಈ ವರದಿ ಮಾಡಿಲ್ಲ. ಲಕ್ಷಾಂತರ ಜನರು ಸರ್ವೆಯ ಭಾಗವಾಗಿ ಕೆಲಸ ಮಾಡಿದ್ದಾರೆ. ಹಿಂದೆ ಯಾರಿಗೂ ಮಾಹಿತಿ ಇರಲಿಲ್ಲ. ಈಗ ಮಾಹಿತಿ ಹೊರ ಬಂದಿದೆ ಎನ್ನುವ ಮೂಲಕ ನಾನು ಕೇವಲ ಒಕ್ಕಲಿಗ ನಾಯಕ ಅಲ್ಲ, ನನಗೆ ಎಲ್ಲಾ ಸಮುದಾಯಗಳು ಮುಖ್ಯ ಎನ್ನುವ ಮೂಲಕ ಮುಖ್ಯಮಂತ್ರಿ ಕುರ್ಚಿ ಕಡೆಗೆ ಕಣ್ಣು ಹೊರಳಿಸಿದಂತೆ ಕಾಣ್ತಿದೆ. ಆದರೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ.ಕೆ ಶಿವಕುಮಾರ್ ಸಮುದಾಯದ ಭಾವನೆಗಳ ವಿರುದ್ಧ ಮಾತನಾಡಿದ್ರಾ..? ಅನ್ನೋ ಪ್ರಶ್ನೆ ಎದುರಾಗಿದೆ.
 
			 
                                 
                                 
                                