ವಿಧಾನ ಪರಿಷತ್‌ನಲ್ಲಿ ಮಹಿಳೆಯರ ವಿರುದ್ಧ ಮಾಜಿ ಸಚಿವ ಸಿ.ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪದ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಇದೇ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿಟಿ ರವಿ ಬಹಳ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ದೂರನ್ನ ಕೊಟ್ಟಿದ್ದಾರೆ. 10 ಬಾರಿ ಆಕ್ಷೇಪಾರ್ಹ ಪದ ಬಳಸಿದ್ದಾರಂತೆ. ಇದು ಒಂದು ರೀತಿ ಸೆಕ್ಷುವಲ್ ಹರಾಸ್ಮೆಂಟ್, ಯಾರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಅಂತ ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ MLC ಯತೀಂದ್ರ ಸಿದ್ದರಾಮಯ್ಯ, ನಾವು ಪ್ರತಿಭಟನೆ ಮಾಡ್ತಿದ್ವಿ. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ.ರವಿ ಮಧ್ಯೆ ವಾಗ್ವಾಧ ನಡೀತು. ಈ ವೇಳೆ ಸಿ.ಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದನ್ನು ನಾನು ಕೇಳಿಸಿಕೊಂಡೆ. ಆ ಸಂಧರ್ಭದಲ್ಲಿ ನನಗೆ ನಂಬಲು ಆಗಿರಲಿಲ್ಲ. ಈ ಬಗ್ಗೆ ಸ್ಪೀಕರ್ಗೆ ದೂರು ನೀಡಿದ್ದೇವೆ ಅಂತ ಹೇಳಿದ್ರು ಎಂದಿದ್ದಾರೆ.
ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ವಿಚಾರವಾಗಿ ಮಾತನಾಡಿರುವ ಸಿ.ಟಿ.ರವಿ, ನಾನು ಆಕ್ಷೇಪಾರ್ಹ ಪದ ಬಳಕೆ ಮಾಡಿಲ್ಲ. ನಾನೇನಾದ್ರೂ ಆ ಪದ ಬಳಕೆ ಮಾಡಿದ್ರೆ ಆನ್ ರೆಕಾರ್ಡ್ ಆಡಿಯೋ ಇರುತ್ತೆ. ನಾನು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ ಅಪಮಾನದ ಬಗ್ಗೆ ಹೇಳಿದ್ದೇನೆ. ಇಲ್ಲದೇ ಇರೋದನ್ನ ಕಲ್ಪನೆ ಮಾಡಿಕೊಂಡರೆ ನಾನು ಏನು ಹೇಳಲಿ..? ಅಂತ ಪ್ರಶ್ನೆ ಮಾಡಿದ್ದಾರೆ. ಸಿಎಂ ಪ್ರತಿಕ್ರಿಯೆ ವಿಚಾರವಾಗಿಯೂ ಮಾತನಾಡಿದ ಸಿ.ಟಿ ರವಿ, ಸಿದ್ದರಾಮಯ್ಯ ಅವರಷ್ಟು ನಾನು ಕಾನೂನು ತಜ್ಞ ಅಲ್ಲ. ಯಾವುದು ಕ್ರಿಮಿನಲ್ ಅಫೆನ್ಸ್ ಅಂತ ಅವರಷ್ಟು ಚೆನ್ನಾಗಿ ಗೊತ್ತಿಲ್ಲ. ಈ ದೇಶದಲ್ಲಿ ಸಂವಿಧಾನ ಇದೆ. ವಿಧಾನ ಮಂಡಲದ ನಿಯಮ ಇದೆ. ಸಭಾಪತಿಗಳು ನನ್ನಿಂದ ಸ್ಪಷ್ಟೀಕರಣ ಕೇಳಿಲ್ಲ ಎಂದಿದ್ದಾರೆ.
ಇನ್ನು ಬೆಂಗಳೂರಲ್ಲಿ ಮಾತನಾಡಿದ ಶಾಸಕ ವಿಜಯೇಂದ್ರ ಸದನದಲ್ಲಿ ಸಿಟಿ ರವಿ ಅವರು ಏನು ಹೇಳಿದ್ದಾರೆ ಅಂತ ನನಗೆ ತಿಳಿದಿಲ್ಲ. ಅವರು ಆಕ್ಷೇಪಾರ್ಹ ಪದ ಬಳಸಿದ್ದಾರೆ ಅನ್ನೋದನ್ನು ನಾನು ನಂಬುವುದಿಲ್ಲ ಎಂದಿದ್ದಾರೆ. MLC ಭಾರತಿ ಶೆಟ್ಟಿ ಮಾತನಾಡಿ ನನಗಂತೂ ಇಬ್ಬರ ಪದ ಪ್ರಯೋಗ ಕೇಳಿಸಲಿಲ್ಲ. ಹತ್ತು ಬಾರಿ ಆ ರೀತಿ ಪದ ಬಳಸಿದ್ದಾರೆ ಅಂದ್ರೆ ರೆಕಾರ್ಡ್‌ನಲ್ಲಿ ಇರಬೇಕಲ್ವ..? ನಾನು ಸಿ.ಟಿ.ರವಿ ಅವರನ್ನೇ ಕೇಳಿದೆ. ಆದ್ರೆ ಆ ರೀತಿ ಮಾತನಾಡಿಲ್ಲ ಅಂತ ಅವರು ಹೇಳಿದ್ರು. ಹೆಣ್ಣಾದರೂ ಸರಿ, ಗಂಡಾದರೂ ಸರಿ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ತಪ್ಪು ಮಾಡಿದ್ದರೆ ಸಭಾಪತಿ ಕ್ರಮ ಕೈಗೊಳ್ಳುತ್ತಾರೆ ಅಂತ ಹೇಳಿದ್ದಾರೆ.