“500 ರೈತರು ನನಗಾಗಿ ಸತ್ತಿದ್ದಾರಾ?” ಎಂದು ಮೋದಿಯವರು ತಾತ್ಸಾರದಲ್ಲಿ ಹೇಳಿದರು ಎಂದು ಮೇಘಾಲಯದ ರಾಜ್ಯಪಾಲರಾಗಿರುವ ಭಾಜಪದ ಹಿರಿಯ ನಾಯಕ ಸತ್ಯಪಾಲ ಮಲ್ಲಿಕ್ ಹೇಳಿರುವ ಸಂಗತಿಗೆ ಭಾಜಪ ನಾಲಗೆಗೆ ಲಕ್ವಾ ಹೊಡೆದಂತೆ ಕೂತಿದೆ.
ಮೋದಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಲ್ಲಿಕ್ ಅವರನ್ನು ಮೋದಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ನೇಮಿಸಿದ್ದರು. ಬಳಿಕ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ರೈತ ಚಳವಳಿ ಆರಂಭವಾದಾಗಿಂದ ಸತ್ಯಪಾಲ ಮಲ್ಲಿಕ್ ಅವರು ರೈತರ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು, ಹಠ, ತಾತ್ಸಾರ ಮಾಬಾರದು ಎಂದು ಹೇಳುತ್ತಲೇ ಬಂದಿದ್ದರು.
ಮೊನ್ನೆ ಮೊನ್ನೆ ಮೋದಿ ರೈತ ಸತ್ಯಾಗ್ರಹಕ್ಕೆ ಬೆದರಿ ಏಕಾಏಕಿ ಈ ಮೂರೂ ವಿವಾದಿತ ಕಾಯಿದೆಗಳನ್ನು ಹಿಂತೆಗೆದುಕೊಂಡರಷ್ಟೇ. ಸತ್ಯಪಾಲ್ ಮಲ್ಲಿಕ್ ಅವರ ಈಗಿನ ಹೇಳಿಕೆ ಯನ್ನು ಭಾಜಪದ ಒಳಜಗಳ, ರೈತಚಳವಳಿಯ ಅಪ್ಪಳಿಸುವ ಅಲೆಯ ಮಾದರಿ ಎಂದೆಲ್ಲಾ ನೋಡುವುದು ಇದ್ದೇ ಇದೆ.
ಈ ಮಧ್ಯೆ ಗಮನಿಸಬೇಕಾದ್ದು ಮೋದಿಯ ಮಾನಸಿಕ ಸ್ಥಿತಿ!
ಜನಪ್ರಿಯ ಮತದಾನದ ಮೂಲಕ ಅಧಿಕಾರಕ್ಕೆ ಬಂದು ಬಳಿಕ ಸರ್ವಾಧಿಕಾರಿ ಧೋರಣೆ ಬೆಳೆಸಿಕೊಂಡ ಬಹುತೇಕ ಅಧಿಕಾರಸ್ಥರಲ್ಲಿ ಈ ಒಂದು ಆತ್ಮರತಿಯ ರೋಗಿಷ್ಠ ಎಳೆ ಇದ್ದೇ ಇದೆ. ತಾನು ಮೊದಲು ಪಕ್ಷವನ್ನು, ಬಳಿಕ ದೇಶವನ್ನು ಸಮ್ಮೋಹನದಲ್ಲಿಇಡಬಲ್ಲ; ತನ್ನ ಕಣ್ಸನ್ನೆ ಗೆ ಎದ್ದು ಬರುವ ಸಾವಿರಾರು ಮಂದಿ ಇದ್ದಾರೆ ಎಂಬ ವಿಚಿತ್ರ ಜಂಬ ಇವರಿಗಿರುತ್ತದೆ. ಈ ಅಹಂಕಾರದ ಕಾರಣಕ್ಕೇ ಅವರಿಗೆ ವಿವೇಕದ ಮಾತು ಹೇಳುವವರೂಇರುವುದಿಲ್ಲ. ಹೇಳಿದರೆ ಕೇಳಿಸಿಕೊಳ್ಳುವ ಮನಃ ಸ್ಥಿತಿಯಂತೂ ಇರುವುದೇ ಇಲ್ಲ. ಯಾರೋ ಅಡನಾಡಿಗಳು ಹೇಳುವ ಮಾತಷ್ಟೇ ತನಗೆ ಪ್ರಿಯವಾಗಿ ಕೇಳಿಸಿದರೆ ಅದನ್ನೇ ಜಾರಿಗೊಳಿಸುವ ಹುಂಬತನ ಈ ಅಧಿಕಾರಸ್ಥರಿಗಿರುತ್ತದೆ. ಅಮಿತ್ ಶಾ ಹೇಳಿದ್ದು ಇದನ್ನೇ.
ನೋಟು ಬಂದಿಯಂಥ ಮೂರ್ಖ ನಿರ್ಧಾರಕ್ಕೆ ಕಾರಣವಾಗಿದ್ದು ಆರೆಸ್ಸೆಸ್ ಮೂಲದ ಒಂದು ಆರ್ಥಿಕ ಥಿಂಕ್ ಟ್ಯಾಂಕ್. ಆರೆಸ್ಸೆಸ್ಸನ ಥಿಂಕ್ ಟ್ಯಾಂಕ್ ಅನ್ನುವುದೇ ವೈರುಧ್ಯ!
ಮೋದಿಯಂಥ ಸ್ವಮೋಹಿ ಅಧಿಕಾರಸ್ಥರಿಗೆ ಇನ್ನೊಂದು ಸಮಸ್ಯೆ ಇದೆ. ಸದಾ ಇಮೇಜ್ ಮತ್ತು ಅಧಿಕಾರ ಉಳಿಸಿ ವಿಸ್ತರಿಸುವ ಧ್ಯಾನದಲ್ಲಿರುವ ಇವರಿಗೆ ಸಂಕೀರ್ಣವಾದ ಆಡಳಿತಾತ್ಮಕ ವಿಚಾರಗಳು ಅರ್ಥವಾಗುವುದೇ ಇಲ್ಲ. ಸರಳವಾದ ಮೊದ್ದು ಐಡಿಯಾಗಳು ಅರ್ಥವಾಗುತ್ತವೆ.
ಶ್ರೀಲಂಕಾದ ಅಧ್ಯಕ್ಷ ಸಾವಯವ ಕೃಷಿಯ ಘೋಷಣೆ ಮಾಡಿದ್ದೂ ಹೀಗೆ; ಅದರ ಸೂಕ್ಷ್ಮ ವಿವರಗಳನ್ನು ಅರ್ಥ ಮಾಡಿಕೊಳ್ಳದೇ ತಕ್ಷಣ ದೊರಕಬಹುದಾದ ಹೆಗ್ಗಳಿಕೆ ಪಡೆಯುವ ಆತುರ ಈ ಮಂದಿಗೆ ಜಾಸ್ತಿ. ಅವರತೇನು ನನಗಾಗಿ ಸತ್ತಿದ್ದಾರೆಯೇ? ಎಂಬ ಮೋದಿಯ ತಾತ್ಸಾರ ಯಾವ ಮಟ್ಟದ ಅಹಂಕಾರದಿಂದ ಹುಟ್ಟಿರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ.
ಇಂಥಾ ದರ್ಪಣ ಮೋಹಿಗಳನ್ನುಇತಿಹಾಸ ಕಸದ ಬುಟ್ಟಿಗೆ ಎಸೆದಿದೆ ಎಂಬುದನ್ನು ಗಮನಿಸಲು ಇವರು ನಿರಾಕರಿಸುತ್ತಾರೆ. ಅರ್ಜೆಂಟೈನಾದಲ್ಲಿ ಪೆರಾನ್ ಎಂಬ ಸರ್ವಾಧಿಕಾರಿ ಅಧ್ಯಕ್ಷ ಇದ್ದ. ಅವನು ವೇದಿಕೆಯಿಂದ ಕೈ ಬೀಸಿದರೆ ಸಮೂಹ ಸನ್ನಿಯ ಸಮ್ಮೋಹನಕ್ಕೊಳಗಾದಂತೆ ಸಾವಿರಾರು ಮಂದಿ ಹುಚ್ಚೆದ್ದುಕುಣಿಯುತ್ತಿದ್ದರು. ಅಂಥವನನ್ನೂ ಒಂದಷ್ಟು ವರ್ಷ ಕಳೆದ ಮೇಲೆ ರೋಸಿ ಹೋದ ಜನ ಅಧಿಕಾರದಿಂದ ಇಳಿಸಿದರು. ಅಲ್ಲಿಂದ ಓಡಿ ಹೋಗಿ ಪ್ಯಾರಿಸ್ಸಿನಲ್ಲಿ ನೆಲೆಸಿದ ಆತ ಕೊನೆವರೆಗೂ ನನ್ನ ದೇಶದ ಜನ ಎಂಥಾ ಕೃತಘ್ನರು ಎಂದು ಗೊಣಗುತ್ತಿದ್ದನಂತೆ!
ಅವನ ಇಳಿಗಾಲದಲ್ಲಿ ಅವನನ್ನು ಸಂದರ್ಶಿಸಲು ಹೋದ ಪತ್ರಕರ್ತನೊಬ್ಬನಲ್ಲಿ ಪೆರಾನ್, “ ನನ್ನ ನಗುವಿಗೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು, ನಿಂಗೆ ನನ್ನ ನಗು ಬೇಕಾ?” ಎಂದು ಕೇಳಿದನಂತೆ. ಗಲಿಬಿಲಿಗೊಂಡ ಪತ್ರಕರ್ತ ಬೆರಗಾಗಿ ನೋಡುತ್ತಿದ್ದಂತೆ ಪೆರಾನ್ ತನ್ನ ಹಲ್ಲು ಸೆಟ್ ತೆಗೆದು ಪತ್ರಕರ್ತನ ಕೈಗೆ ತುರುಕಿ ಬೊಚ್ಚು ಬಾಯಲ್ಲಿ ವಿಕೃತ ನಗೆ ನಕ್ಕನಂತೆ!
ಮೋದಿ ಹೀಗೆ ಇತಿಹಾಸದ ಕಸದ ಬುಟ್ಟಿಯಿಂದ ಗೊಣಗುವ ದಿನ ಬರುತ್ತದೆ ಎಂಬುದು ನಮಗೆ ಗೊತ್ತು. ಮೋದಿಯನ್ನು ಆರಾಧಿಸುವಂತೆ ನಟಿಸುತ್ತಾ ಇರುವ ಭಾಜಪಕ್ಕೂ ಗೊತ್ತು. ಆರೆಸ್ಸೆಸ್ಸಿಗೂ ಗೊತ್ತು. (ಇದೇ ಪಕ್ಷ ಮತ್ತು ಸಂಘಟನೆ ಅಡ್ವಾನಿಯನ್ನು ಆರಾಧಿಸಿತ್ತು. ಮೋದಿ ಬೆಟರ್ ಅನ್ನಿಸಿದ್ದೇ ಅಡ್ವಾಣಿಯನ್ನು ಎಲ್ಲಿಗೆಸೆಯಿತು ಎಂಬುದು ನಮಗೆ ಗೊತ್ತು!) ಮೋದಿಗೆ ಗೊತ್ತಾಗಿಲ್ಲ ಅನ್ನಿಸುತ್ತೆ!
ನಾವು ಎಚ್ಚರವಿರಬೇಕಾದ್ದು ಈ ದರ್ಪಣ ಮೋಹಿ ರೋಗಿಷ್ಠ ಆಡಳಿತಗಾರನಿಗಷ್ಟೇ ಅಲ್ಲ, ಇವನ ಪ್ರಭೆ ಮಾಸಿದರೆ ಇವನಿಗಿಂತ ಘೋರಚಿಂತನೆಯ ಇನ್ನೊಬ್ಬನನ್ನು ತಂದು ಕೂರಿಸುವ ಆರೆಸ್ಸೆಸಿನ ಬಗ್ಗೆ. ಕೊನೆಗೂ ಮೋದಿ, ಚದುರಂಗದ ದೊರೆ, ನಡೆಸುವ ಕೈಗಳು ಬೇರೆಯೇ ಇವೆ!