ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿಯನ್ನು ಪ್ರಧಾನಿಮಂತ್ರಿಗಳ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯ ಎಂದು ಮರುನಾಮಕರಣ ಮಾಡಿದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ಜೋರಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷವು ದೇಶದ ಮೊದಲ ಪ್ರಧಾನಿ ನೀಡಿದ ಕೊಡುಗೆಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

“ಯಾವುದೇ ಇತಿಹಾಸವಿಲ್ಲದವರು ಇತರರ ಇತಿಹಾಸವನ್ನು ಅಳಿಸಲು ಹೊರಟಿದ್ದಾರೆ, ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಾಯಿಸುವ ದುರಾದೃಷ್ಟಕರ ಪ್ರಯತ್ನವು ಆಧುನಿಕ ಭಾರತದ ವಾಸ್ತುಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರು ಅವರ ವ್ಯಕ್ತಿತ್ವವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ನಿರ್ಭೀತ ರಕ್ಷಕ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಇದು ಬಿಜೆಪಿ-ಆರ್‌ಎಸ್‌ಎಸ್‌ನ ಕೀಳು ಮನಸ್ಥಿತಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಮಾತ್ರ ತೋರಿಸುತ್ತದೆ ಎಂದು ಅವರು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವನ್ನು ಉಲ್ಲೇಖಿಸಿದ್ದಾರೆ.
ಭಾರತೀಯ ರಾಷ್ಟ್ರ-ರಾಜ್ಯಗಳ ವಾಸ್ತುಶಿಲ್ಪಿಯ ಹೆಸರು ಮತ್ತು ಅವರು ಹಾಕಿಕೊಟ್ಟ ಪರಂಪರೆಗಳನ್ನು ಅಳಿಸಿ ಹಾಕೋಕೆ , ಅವಹೇಳನ ಮಾಡೋಕೆ ಪ್ರಧಾನಿ ಮೋದಿ ಏನೆಲ್ಲ ಪ್ರಯತ್ನ ಮಾಡುತ್ತಿದ್ದಾರೆ..? ಅಭದ್ರತೆಯನ್ನೇ ತುಂಬಿಕೊಂಡಿರು ಸ್ವಯಂ ಘೋಷಿತ ವಿಶ್ವಗುರು ಪ್ರಧಾನಿ ಮೋದಿ ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ಇನ್ನು ನೆಹರೂ ಸಂಗ್ರಹಾಲಯಕ್ಕೆ ಮರುನಾಮಕರಣ ಮಾಡಿರೋದನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟಾಯಿಸಿದ್ದು ಒಂದು ರಾಜವಂಶ ಮಾತ್ರವಲ್ಲದೇ ನಮ್ಮ ದೇಶವನ್ನು ನಿರ್ಮಿಸೋಕೆ ಅನೇಕರು ಬಲಿದಾನ ಮಾಡಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಅಸಮರ್ಥವಾಗಿದೆ. ಪಿಎಂ ಸಂಗ್ರಹಾಲಯವು ರಾಜಕೀಯವನ್ನು ಮೀರಿದ ಪ್ರಯತ್ನವಾಗಿದೆ ಹಾಗೂ ಇದನ್ನು ಅರಿತುಕೊಳ್ಳುವ ದೂರದೃಷ್ಟಿ ಕಾಂಗ್ರೆಸ್ಗೆ ಇಲ್ಲ ಎಂದು ಟ್ವೀಟಾಯಿಸಿದ್ದಾರೆ.