ಜಗತ್ತಿನ ರಾಜಕೀಯ ಇತಿಹಾಸದಲ್ಲಿ ವ್ಯಕ್ತಿಪೂಜೆˌ ರಾಜಕೀಯ ನಾಯಕನ ವೈಭವೀಕರದ ಪ್ರಯತ್ನಗಳು ಆಯಾ ದೇಶದ ಘನತೆಮನ್ನು ಗೌಣವಾಗಿಸಿದ್ದು ನಾವು ಓದಿ ತಿಳಿದಿದ್ದೇವೆ. ಇಟಲಿಯ ಮುಸಲೇನಿˌ ಜರ್ಮನಿಯ ಹಿಟ್ಲರ್ˌ ಇರಾಕ್ ನ ಸದ್ದಾಮ್ ಹುಸೇನ್ ಮುಂತಾದ ರಾಜಕಾರಣಿಗಳು ತಮ್ಮ ಭಟ್ಟಂಗಿಗಳ ವಿಜ್ರಂಭಿಸುವಿಕೆಗೆ ತಾಳ ಹಾಕುತ್ತಾ ಸರ್ವಾಧಿಕಾರಿಗಳು ಹಾಗು ಪ್ರಜಾಪೀಡಕರಾಗಿ ಅವಸಾನ ಹೊಂದಿದ್ದಾರೆ. ಎಪ್ಪತ್ತು ˌ ಎಂಬತ್ತರ ದಶಕದಲ್ಲಿ ಭಾರತದಲ್ಲಿ ಶ್ರೀಮತಿ ಇಂದಿರಾ ಕೂಡ ಕೆಲವೊಮ್ಮೆ ಸರ್ವಾಧಿಕಾರಿಯಂತೆ ವರ್ತಿಸುವುದರ ಮೂಲಕ ದೇಶದ ಜನತಂತ್ರವನ್ನು ದುರ್ಬಲಗೊಳಿಸಲು ಯತ್ನಿಸಿದ್ದರು. ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ಇಂದಿರಾರಿಗಿಂದ ಮುಂದೆ ಹೋಗಿದ್ದನ್ನು ನಾವು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ ಕೂಡ. ವ್ಯತ್ಯಾಸವೆಂದರೆ ಇಂದಿರಾರಲ್ಲಿ ಸ್ವಂತಿಕೆ ಇದ್ದರೆ ಮೋದಿಯವರು ಫ್ಯಾಸಿಷ್ಟ್ ಸಂಘಟನೆ ಹಾಗು ಕಾರ್ಪೋರೇಟ್ ಉದ್ಯಮಿಗಳ ನಿಯಂತ್ರಣದಲ್ಲಿದ್ದು ಅವರ ಅಣತಿಯಂತೆ ವರ್ತಿಸುತ್ತಾರೆ.
ಮೋದಿಯವರು ಸ್ವತಃ ಅನ್ಯ ಶಕ್ತಿಗಳ ನಿಯಂತ್ರಣದಲ್ಲಿರುವ ವ್ಯಕ್ತಿಯಾಗಿದ್ದರೂ ಅವರು ತಮ್ಮದೆಯಾದ ಹೊಗಳು ಭಟ್ಟರ ಪಡೆಯೊಂದನ್ನು ಕಟ್ಟಿದ್ದಾರೆ. ಇಡೀ ಮಾಧ್ಯಮಗಳನ್ನು ನಿಯಂತ್ರಿಸುವ ಮೋದಿ ಸೋಷಯಲ್ ಮಿಡಿಯಾಗಳ ಮೂಲಕ ತಮ್ಮ ಪಕ್ಷದ ಐಟಿ ಸೆಲ್ಲನ್ನು ಸುಳ್ಳು ನೆರೇಟಿವ್ಸ್ ಮತ್ತು ಪಾಲ್ಸ್ ಪ್ರಪೊಗೊಂಡಾಗಳ ಮೂಲವಾಗಿ ರೂಪಿಸಿದ್ದು ವಿಶೇಷ. ಆ ಮೂಲಕ ಅವರು ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳುತ್ತ ವಿರೋಧಿಗಳ ವಿರುದ್ಧ ಸದಾ ಅಪಪ್ರಚಾರಕ್ಕೆ ಇಂಬು ನೀಡಿದ್ದಾರೆ. ಮೋದಿಯವರಿಂದಲೆ ಭಾರತದ ಅಭಿವೃದ್ಧಿ ಸಾಧ್ಯ ˌ ಮತ್ತು ಮೋದಿಯವರು ಭಾರತಕ್ಕೆ ಅನಿವಾರ್ಯ ಎನ್ನುವ ಅರ್ಥದಲ್ಲಿ ಅವರನ್ನು ಆವರಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳು ಹಾಗು ಐಟಿ ಸೆಲ್ಗಳು ಕಾರ್ಯ ಮಾಡುತ್ತವೆ. ಈ ದಿಶೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ನಾನು ಒಂದು ಬರಹವನ್ನು ಗಮನಿಸಿದೆ. ಆ ಇಡೀ ಲೇಖನದಲ್ಲಿ ತುಂಬಿರುವ ವ್ಯಕ್ತಿಪೂಜೆ ಮತ್ತು ಮೋದಿಯ ಸೈದ್ಧಾಂತಿಕ ವಿರೋಧಿಗಳ ಬಗ್ಗೆ ಮೋದಿ ಭಕ್ತರಲ್ಲಿ ತುಂಬಿದ ವಿಷವನ್ನು ನಾವು ಗಮನಿಸಬೇಕಿದೆ.
ಆ ಲೇಕನವು ಮೋದಿಯವರು ಭಾರತಕ್ಕೆ ಅಮೃತವೋ ಅಥವಾ ವಿಷವೋ ಎನ್ನುವ ಪ್ರಶ್ನೆಯ ಮೂಲಕ ಆರಂಭಗೊಂಡು ಮೋದಿ ವಿರೋಧಿಗಳನ್ನು ಕ್ರಿಮಿˌ ಕೀಟ ಹಾಗು ಪ್ರಾಣಿಗಳಿಗೆ ಹೋಲಿಸಿ ವಿಕೃತಿಯನ್ನು ಮೆರೆಯುತ್ತದೆ. ಈ ಲೇಖನವು ಯಾವುದೇ ಲೇಖಕನ ಹೆಸರಿಲ್ಲದೆ ಹರಿದಾಡುತ್ತಿದೆ ಅಂದರೆ ಇದು ಮೋದಿ ಪ್ರಣೀತ ಫ್ಯಾಸಿಷ್ಟ್ ಸಂಘಟನೆಯ ಸುಳ್ಳು ಸುದ್ದಿ ಪ್ರಸಾರದ ಘಟಕವೆ ತಯ್ಯಾರಿಸಿದ ಉತ್ಪನ್ನವಾಗಿದೆ ಎಂದು ಸುಲಭವಾಗಿ ಊಹಿಸಬಹುದಾಗಿದೆ. ಸಾಮಾನ್ಯವಾಗಿ ಈ ಫ್ಯಾಸಿಷ್ಟ್ ರು ಹರಡುವ ಸುಳ್ಳು ಸುದ್ದಿಗಳಿಗೆ ಕೈˌ ಕಾಲುˌ ತಲೆˌ ಬುಡˌ ಹೆಸರುˌ ಆಧಾರಗಳು ಇರುವುದಿಲ್ಲ ಮತ್ತು ಲೇಖನದ ಕೊನೆಯಲ್ಲಿ ಇದನ್ನು ಎಲ್ಲ ದೇಶಭಕ್ತರಿಗೆ ಮುಟ್ಟುವಂತೆ ಹಂಚಿಕೊಳ್ಳಿ ಎನ್ನುವ ಒಕ್ಕಣಿ ಕಡ್ಡಾಯವಾಗಿ ಇರುತ್ತದೆ. ಚುನಾವಣೆಗಳು ಹತ್ತಿರ ಬಂದಾಗˌ ಬಿಜೆಪಿ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಾಗˌ ಕೋಮು ಗಲಭೆಯ ಮುನ್ಸೂಚನೆಗಳು ಗೋಚರಿಸುವಾಗ ಸಾಮಿನ್ಯವಾಗಿ ಫ್ಯಾಸಿಷ್ಟರು ಈ ತರಹದ ತಳ ಬುಡವಿಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಡುವುದು ವಾಡಿಕೆ. ಆ ಲೇಖನಳನ್ನು ನಾನು ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಗಳ ಸಮೇತ ವಿಮರ್ಶಿಸಿದ್ದೇನೆ.
ಮೋದಿಯವರು ಭಾರತಕ್ಕೆ ಅಮೃತವೊ ವಿಷವೊ?
೧. ಆಯುರ್ವೇದದಲ್ಲಿ ಜೇನುತುಪ್ಪವನ್ನು ಅಮೃತಕ್ಕೆ ಸಮಾನ ಅಂತ ಹೋಲಿಸಲಾಗಿದೆ. ವೈದ್ಯಕೀಯ ವಿಜ್ಞಾನ ಸಹ ಇದನ್ನು ರೋಗನಿರೋಧಕ ಶಕ್ತಿಯಾಗಿ ಹಲವು ಕಡೆ ಬಳಸಿದೆ. ಆದರೆ ಆಶ್ಚರ್ಯದ ವಿಚಾರ ಏನು ಅಂದರೆ ಇದರ ಒಂದೇ ಒಂದು ಹನಿಯನ್ನು ನಾಯಿ ತಿಂದರೆ ಮರಣ ಹೊಂದುತ್ತದೆ ಅಂತ ಹೇಳ್ತಾರೆ. ಅಂದರೆ ಜೇನುತುಪ್ಪ ನಾಯಿಗೆ ವಿಷದ ಸಮಾನ.
೨. ಎರಡನೆಯದ್ದು ದೇಶೀ ಆಕಳಿನ ಶುದ್ಧ ತುಪ್ಪ. ಜೇನುತುಪ್ಪದ ನಂತರ ಈ ತುಪ್ಪಕ್ಕೆ ಆಯುರ್ವೇದದಲ್ಲಿ ಅದರದ್ದೇ ಆದ ಮಾನ್ಯತೆ ಇದೆ ಅಷ್ಟೇ ಅಲ್ಲ ವೈದ್ಯಕೀಯ ವಿಜ್ಞಾನ ಸಹ ಇದರಲ್ಲಿನ ಔಷಧೀಯ ಗುಣಗಳನ್ನು ಒಪ್ಪುತ್ತದೆ. ಆದರೆ ಆಶ್ಚರ್ಯದ ವಿಚಾರ ಅಂದರೆ ಒಂದು ನೊಣ ಅಪ್ಪಿ ತಪ್ಪಿ ಇದರ ಮೇಲೆ ಕುಳಿತು ಅದನ್ನು ತಿಂದರೆ ತಕ್ಷಣ ಮರಣ ಖಚಿತ. ಅಂದರೆ ನೊಣಕ್ಕೆ ತುಪ್ಪವೆ ವಿಷ.
೩. ಜೋನಿ ಬೆಲ್ಲ ಇದಕ್ಕೂ ಸಹ ಆಯುರ್ವೇದದಲ್ಲಿ ಅಷ್ಟೇ ಮಹತ್ವ ಇದೆ. ಇದರಿಂದ ತಯಾರಿಸಿದ ಸಿಹಿ ತಿಂಡಿಗಳು ಯಾವತ್ತೂ ಅಪಾಯಕಾರಿ ಅಲ್ಲ. ಆದರೆ ಒಂದು ಬಕೆಟ್ ನಲ್ಲಿ ಇದೆ ಜೋನಿ ಬೆಲ್ಲವನ್ನು ಹಾಕಿ ಅದನ್ನು ನೀವು ಕತ್ತೆಗೆ ತಿನ್ನಿಸಿದರೆ ಸ್ವಲ್ಪ ಸಮಯದ ನಂತರ ಕತ್ತೆ ಒದ್ದಾಡಿ ಸಾಯತ್ತದೆ. ಅಂದರೆ ಕತ್ತೆಗೆ ಇದು ವಿಷ.
೪. ನಿಂಬೆ ಹಣ್ಣು; ಇದಕ್ಕೂ ಆಯುರ್ವೇದದಲ್ಲಿ ಅಷ್ಟೇ ಮಹತ್ವ ಇದೆ ಹಾಗೂ ವಿಜ್ಞಾನ ಸಹ ಒಪ್ಪಿದೆ.ಆದರೆ ನಿಮಗೆ ಆಶ್ಚರ್ಯ ಆಗಬಹುದು. ದಿನವಿಡೀ ನಿಂಬೆ ಗಿಡದ ಹತ್ತಿರ ಇರುವ ಕಾಗೆ ಅಕಸ್ಮಾತ್ ರಾತ್ರಿ ವೇಳೆ ಅದೇ ನಿಂಬೆ ಹಣ್ಣನ್ನು ತಿಂದರೆ ಸತ್ತು ಹೋಗುತ್ತದೆ. ನಮಗೆ ಔಷಧಿ ಕಾಗೆಗೆ ವಿಷ.
ಈ ಭೂಮಿಯಲ್ಲಿ ಹೀಗೆ ಔಷಧಿಗೆ ಸಮಾನವಾದ, ಹಾಗು ಅಮೃತಕ್ಕೆ ಸಮಾನವಾದ ಸಾಕಷ್ಟು ವಸ್ತುಗಳು ಇವೆ. ಆದರೆ ಇವನ್ನು ಅನುಭವಿಸುವ ಅದೃಷ್ಟ ಎಲ್ಲರ ಹಣೆಯಲ್ಲೂ ಬರೆದಿರುವದಿಲ್ಲ. ನನ್ನ ಪ್ರಕಾರ ಮೋದಿಯವರು ಭಾರತಕ್ಕೆ ಅಮೃತ ಸಮಾನರು. ನಾನು ಮೇಲೆ ತಿಳಿಸಿದಂತೆ ಭಾರತದಲ್ಲಿ ಸಾಕಷ್ಟು ಕತ್ತೆಗಳು, ನೊಣಗಳು, ಕಾಗೆಗಳು, ಹಾಗು ನಾಯಿಗಳು ಇವೆ. ಅವುಗಳಿಗೆಲ್ಲ ಮೋದಿಯವರು ವಿಷದ ಸಮಾನ. ಹಾಗಾಗಿ ಅಂತಹ ಜೀವಿಗಳಿಗೆಲ್ಲ ಅಷ್ಟಾಗಿ ಮಹತ್ವ ಕೊಡುವ ಅಗತ್ಯ ಇಲ್ಲ. ನಾವು ಅಮೃತ ಸವಿಯುವದನ್ನ ಮುಂದುವರಿಸೋಣ. ಏನಂತೀರಾ? ಈ ಮೇಲೆ ಹೇಳಲಾದ ಫ್ಯಾಸಿಷ್ಟ್ ರ ಸುಳ್ಳಿನ ಕಾರ್ಖಾನೆಯಲ್ಲಿ ತಯ್ಯಾರಿಸಲ್ಪಟ್ಟ ವಿಷವನ್ನು ಕೋಮುವಾದಿಗಳು ತಮ್ಮ ಹೆಸರನ್ನು ನಮೂದಿಸದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಚಿದ್ದಾರೆ. ಈ ಕಾಳಕೂಟ ವಿಷಕ್ಕೆ ವಿಷಹಾರಿ(Antidote) ಉತ್ತರ ಇಲ್ಲಿದೆ ನೋಡಿ.
೧. ಜೇನು ತುಪ್ಪ ನಾಯಿಗೆ ವಿಷ. ಆದರೆ ನಾಯಿ ಒಂದು ಅತ್ಯಂತ ನಿಯತ್ತಿನ ಪ್ರಾಣಿ. ಮನುಷ್ಯನ ಬದುಕಿಗೆ ಹಲವು ವಿಧದಲ್ಲಿ ಸಹಕಾರಿ. ಹಾಗಾಗಿ ಮನುಷ್ಯನ ಬದುಕಿಗೆ ಸಹಕಾರಿಯಾಗಬಲ್ಲ ನಾಯಿಗೆ ವಿಷವಾಗುವ ಜೇನು ಕೂಡ ಒಂದರ್ಥದಲ್ಲಿ ವಿಷವೆ.
೨. ಹಸುವಿನ ತುಪ್ಪ ನೊಣಕ್ಕೆ ವಿಷ. ನೋಣ ಒದು ಕೀಡೆ. ಸಕಲ ಜೀವಾತ್ಮರಿಗೆ ಲೇಸು ಬಯಸುವ ಶರಣ ಧರ್ಮವು ನೋಣವನ್ನು ಕೊಲ್ಲುವ ವಿಷವನ್ನು ಸಾರ್ವತ್ರಿಕ ವಿಷವೆಂದೇ ಪರಿಗಣಿಸುತ್ತದೆ.
೩. ಜೋನಿ ಬೆಲ್ಲ ಕತ್ತೆಗೆ ವಿಷ. ಕತ್ತೆ ಭಾರತಿಯ ಶ್ರಮ ಸಂಸ್ರ್ಕ್ರತಿಯ ಜನರ ಸಂಕೇತ. ಈ ದೇಶ ಉಳಿದು ಬೆಳೆದದ್ದು ಶ್ರಮ ಸಂಸ್ಕ್ರತಿಯ ಜನರಿಂದಲೇ ಹೊರತು ಅನುತ್ಪಾದಕ ಪರಾವಲಂಬಿ ಪುರೋಹಿತರಿಂದಲ್ಲ. ಹಾಗಾಗಿ ಜೋನಿ ಬೆಲ್ಲ ಕೂಡ ಈ ದೇಶದ ಬೆನ್ನೆಲುಬಾಗಿರುವ ಶ್ರಮ ಸಂಸ್ಕ್ರತಿಯ ಜನರಿಗೆ ವಿಷವೆಂದು ತಿಳಿಯಬೇಕು.
೪. ನಿಂಬೆ ಹಣ್ಣು ಕಾಗೆಗೆ ವಿಷ. ಕಾಗೆ ನಿಸ್ವಾರ್ಥಿ ಪಕ್ಷಿ. ಒಂದಗುಳು ಆಹಾರ ಕಂಡರೆ ತನ್ನ ಬಳಗವನ್ನು ಕೂಗಿ ಕರೆಯುವ ಉದಾತ್ ಗುಣವುಳ್ಳದ್ದೇ ಹೊರತು ಪುರೋಹಿತರಂತೆ ಸಮಾಜದ ಸಕಲ ಸೌಲಭ್ಯ ನನಗೆ ಇರಲಿ ಎನ್ನುವ ಅಲ್ಪತನ ಉಳ್ಳದಲ್ಲ. ಹಾಗಾಗಿ ಕಾಗೆ ನಿಸ್ವಾರ್ಥತೆಯ ಸಂಕೇತ. ಅಂತಹ ನಿಸ್ವಾರ್ಥ ಕಾಗೆಗೆ ವಿಷವಾಗಬಲ್ಲ ಬೋನಿ ಬೆಲ್ಲ ಕೂಡ ಈ ದೇಶದ ನಿಸ್ವಾರ್ಥ ಜನಗಳಿಗೆ ವಿಷವಾಗಬಲ್ಲುದು.
ಹೀಗೆ ನಿಯತ್ತುಳ್ಳ ಮತ್ತು ಅತ್ಯಂತ ವಿಶ್ವಾಸಾರ್ಹ ಪ್ರಾಣಿ ನಾಯಿˌ ನಿಸ್ಪಾಪಿ ನೋಣˌ ಶ್ರಮದಿಂದ ದುಡಿತು ತಿನ್ನುವ ಕತ್ತೆ ˌ ಹಾಗು ನಿಸ್ವಾರ್ಥ ಕಾಗೆಗಳು ಭಾರತೀಯ ಬಹುಸಂಖ್ಯಾತ ಶ್ರಮಸಂಸ್ಕ್ರತಿಯ ಬಹುಜನರನ್ನು ಪ್ರತಿನಿಧಿಸುತ್ತವೆ. ಜೇನುˌ ತುಪ್ಪ ˌ ಜೋನಿ ಬೆಲ್ಲ ಮತ್ತು ನಿಂಬೆ ಹಣ್ಣು ಇವು ಸ್ವಾರ್ಥಿಗಳುˌ ಪರಾವಲಂಬಿಗಳು ಆಗಿರುವ ಪುರೋಹಿತಶಾಹಿಗಳನ್ನು ಪ್ರತಿನಿಧಿಸುತ್ತಿದ್ದು ˌ ಈ ಜೀವವಿರೋಧಿ ಹಾಗು ಜನಕಂಟಕರಿಗೆ ಅಮೃತ ಸಮಾನವೆಂದು ಅವನ್ನು ಸಾರ್ವತ್ರಿಕವಾಗಿ ಸ್ವೀಕರಿಸಲಾಗದು. ಪುರೋಹಿತಶಾಹಿಗಳು ಶ್ರಮಸಂಸ್ಕ್ರತಿಯ ಪ್ರಾಣಿˌ ಪಕ್ಷಿ ˌ ಮತ್ತು ಜನರನ್ನು ಹೇಗೆಲ್ಲ ಕೀಳಾಗಿ ಕಾಣುತ್ತಾರೆ ಎನ್ನುವುದಕ್ಕೆ ಫ್ಯಾಸಿಷ್ಟರು ಹರಿಬಿಟ್ಟ ಈ ವಿಷಪೂರಿತ ಲೇಖನವೇ ಸಾಕ್ಷಿಯಾಗಿದೆ. ಇದು ಕೇವಲ ಮೋದಿಯನ್ನು ವೈಭವೀಕರಿಸುವ ಲೇಖನವಷ್ಟೆ ಆಗಿರದೆˌ ಶಮ್ರ ಸಂಸ್ಕೃತಿಯನ್ನು ಹಿಯಾಳಿಸುವ ಹಾಗು ಮೋದಿ ಒಬ್ಬ ಪುರೋಹಿತರ ಹಿತ ಕಾಯುವ ನಾಯಕ ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತದೆ.
ಆದ್ದರಿಂದ ಮೋದಿಯವರು ಕೇವಲ ಪುರೋಹಿತಶಾಹಿಗಳಿಗೆ ಅಮೃತ ಸಮಾನರು ಎಂದಾದರೆ ಅವರು ಇಡೀ ಭಾರತಿಯ ಶ್ರಮಸಂಸ್ಕ್ರತಿಯ ಶೂದ್ರ ವರ್ಗಕ್ಕೆ ˌ ಶ್ರಮಿಕ ವರ್ಗಕ್ಕೆ ˌರೈತರಿಗೆ ವಿಷವೆಂದೇ ಪರಿಗಣಿಸಬಹುದಾಗಿದೆ. ಕೇವಲ ಪುರೋಹಿತಶಾಹಿಗಳ ಹಿತಾಸಕ್ತಿಗೆ ದುಡಿಯುತ್ತಿರುವ ಮೋದಿಯವರು ಭಾರತದ ಬಹುಜನರ ಪಾಲಿನ ವಿಷವೆಂದು ಪರೋಕ್ಷವಾಗಿ ಫ್ಯಾಸಿಷ್ಟರು ಈ ಲೇಖನದಲ್ಲಿ ಪ್ರತಿಪಾದಿಸಿದ್ದನ್ನು ಗಮನಿಸಬೇಕಾಗಿದೆ.
~ ಡಾ. ಜೆ ಎಸ್ ಪಾಟೀಲ.