ಅವಿಭಜಿತ ಧಾರವಾಡ ಜಿಲ್ಲೆಯಿಂದ (ಧಾರವಾಡ, ಗದಗ, ಹಾವೇರಿ ಜಿಲ್ಲೆಗಳು) 2 ಎಂಎಲ್‍ಸಿ ಸ್ಥಾನಗಳಿಗೆ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಲಿದೆ. ಆದರೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಚುನಾವಣಾ ತಯಾರಿ ನಡೆದಿದೆ. ಬಸವಕಲ್ಯಾಣ. ಹಾನಗಲ್ ಮತ್ತು ಸಿಂದಗಿಯ ವಿಧಾನಸಭೆ ಉಪ ಚುನಾವಣೆಗಳಲ್ಲಿ ಥಟ್ಟಂತ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕುವ ಜೆಡಿಎಸ್ ಈ ವಿಧಾನಪರಿಷತ್ ಚುನಾವಣೆಯಲ್ಲಿ ಲೆಕ್ಕಕ್ಕೇ ಇಲ್ಲ. ಏಕೆಂದರೆ ಇಲ್ಲಿ ವ್ಯವಹಾರ ಕುದುರಲಾರದು ಅಲ್ಲವೇ?
ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಮತ್ತು ಹುಬ್ಬಳ್ಳಿ ನಗರದ ಶಾಸಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಮತ್ತೆ ಅಖಾಡಕ್ಕೆ ಇಳಿಯುವುದು ಪಕ್ಕಾ ಆಗಿದೆ. ಹಾವೇರಿ ಜಿಲ್ಲೆಯ ಮಾಜಿ ಶಾಸಕ ಶಿವರಾಜ್ ಸಜ್ಜನ್ ಎರಡನೇ ಅಭ್ಯರ್ಥಿಯಾಗಲು ಹರಸಾಹಸ ಮಾಡುತ್ತಿದ್ದಾರೆ. ಆದರೆ ಪಕ್ಷಗಳ ಒಳ ಒಪ್ಪಂದದ ಪ್ರಕಾರ ಯಾವ ಪಕ್ಷವೂ ಎರಡು ಅಭ್ಯರ್ಥಿಗಳನ್ನು ಹಾಕುತ್ತಿಲ್ಲ. ಇದು ದಶಕಗಳಿಂದ ನಡೆದು ಬಂದ ‘ಪರಂಪರೆ’!

ಕಾಂಗ್ರೆಸ್‍ನಿಂದ ಗೆದ್ದಿದ್ದ ಶ್ರೀನಿಚಾಸ್ ಮಾನೆ ಈ ಸಲ ಸ್ಪರ್ಧಿಸುತ್ತಿಲ್ಲ. ಅವರು ಹಾನಗಲ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಈ ಸ್ಥಾನ ತುಂಬಲು ಕಾಂಗ್ರೆಸ್‍ನಲ್ಲಿ 28 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಾಜಿ ಸಚಿವರು, ಮಾಜಿ ಎಂಎಲ್‍ಸಿ ಒಬ್ಬರು ಮತ್ತು ಮೂವರು ಮಾಜಿ ಕಾಂಗ್ರೆಸ್ ಶಾಸಕರ, ಪುತ್ರರು ಇದ್ದಾರೆ. 12 ಆಕಾಂಕ್ಷಿಗಳು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರು.
ಈಗ ಕಾಂಗ್ರೆಸ್ ರೇಸ್‍ನಲ್ಲಿ ಧಾರವಾಡದ ಇಸ್ಮಾಯಿಲ್ ತಮಟಾಗಾರ್ ಮತ್ತು ಮಾಜಿ ಸಂಸದ ಐ. ಜಿ ಸನದುಯವರ ಪುತ್ರ ಶಾಕೀರ್ ಸನದಿ ಮುಂಚೂಣಿಯಲ್ಲಿ ಇದ್ದಂತೆ ಕಂಡುಬರುತ್ತಿದೆ. ಹಾವೇರಿ ಜಿಲ್ಲೆಯಿಂದ ಮಾಜಿ ಶಾಸಕ ಶಿವರಾಜ್ ಸಜ್ಜನ್ ಬಿಜೆಪಿಯ ಎರಡನೇ ಅಭ್ಯರ್ಥಿಯಾಗಲು ಬಯಸಿದ್ದಾರೆ, ಆದರೆ ಅದು ಒಳ ಒಪ್ಪಂದದ ಪ್ರಕಾರ ಅಸಾಧ್ಯದ ಮಾತು. ಹಾವೇರಿ ಜಿಲ್ಲೆಯಿಂದ ಮಾಜಿ ಸಚಿವ ಕಾಂಗ್ರೆಸ್‍ನ ಬಸವರಾಜ ಶಿವಣ್ಣವರ್ ಕೂಡ ಆಕಾಂಕ್ಷಿ. ಹಾಗೆಯೇ ಬ್ಯಾಡಗಿಯ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್, ಹಾವೇರಿಯ ಸಂಜೀವ್ ನೀರಲಗಿ ಕೂಡ ಸ್ಪರ್ಧೆಯಲ್ಲಿ ಇದ್ದಾರೆ. ಮಾಜಿ ಎಂಎಲ್‍ಸಿ ಹುಬ್ಬಳ್ಳಿಯ ಹಿರಿಯ ಕಾಂಗ್ರೆಸ್ ನಾಯಕ ಎ.ಎಂ ಹಿಂಡಸಗೇರಿ ಕೂಡ ಲಿಸ್ಟ್‍ನಲ್ಲಿ ಇದ್ದು ಅವರಿಗೆ ಟಿಕೆಟ್ ಸಿಗಲಾರದು.

ಗದಗ ಜಿಲ್ಲೆಗೆ ಬಂದರೆ, ಇಲ್ಲಿ ಮೂವರು ಮಾಜಿ ಶಾಸಕರ ಪುತ್ರರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು. ಗದಗಿನ ಮಾಜಿ ಶಾಸಕ ಡಿ.ಆರ್ ಪಾಟೀಲರ ಪುತ್ರ ಸಚಿನ್ ಪಾಟೀಲ್, ರೋಣದ ಮಾಜಿ ಶಾಸಕ ಮತ್ತು ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್ ಪಾಟೀಲರ ಮಗ ಮಿಥುನ್ ಪಾಟೀಲ್ ಮತ್ತು ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್ ಗಡ್ಡದ್ದೇವರಮಠ ಪುತ್ರ ಆನಂದ್ ಗಡ್ಡದ್ದೇವರಮಠ ಕಾಂಗ್ರಸ್‍ನ ಪ್ರಬಲ ಆಕಾಂಕ್ಷಿಗಳು. ಇವರೆಲ್ಲ ಇನ್ನೂ ಯುವಕರು.
ಹೆಚ್ಚು ಗಮನ ಸೆಳೆಯುತ್ತಿರುವುದು ಮಾಜಿ ಸಂಸದ ಐ,ಜಿ ಸನದಿಯವರ ಪುತ್ರ ಶಾಕೀರ್ ಸನದಿ ಮತ್ತು ಧಾರವಾಡದ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ತಮಟಗಾರ್ . ಶಾಕೀರ್ ಸನದಿ ಕೋಮುವಾದದ ವಿರುದ್ಧ ಸ್ಪಷ್ಟ ನಿಲುವು ಹೊಂದಿದ್ದಾರೆ. ಮುಸ್ಲಿಂ ಮೂಲಭೂತವಾದದ ವಿರುದ್ಧವೂ ಶಾಕೀರ್ ಧ್ವನಿ ಎತ್ತುತ್ತ ಬಂದಿದ್ದಾರೆ. ಕಾಂಗ್ರೆಸ್‍ನ ಆಂತರಿಕ ವೇದಿಕೆಗಳಲ್ಲಿ ಅವರು ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸ್ಥಾನಮಾನದ ಬಗ್ಗೆ ಚರ್ಚೆ ಮಾಡಿದ್ದಾರೆ.
ಇಸ್ಮಾಯಿಲ್ ತಮಟಗಾರ್ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ. ಕಾಂಗ್ರೆಸ್‍ನಲ್ಲಿ ಬಹು ವರ್ಷಗಳಿಂದ ಇರುವ ತಮಟಗಾರ್ ಇತ್ತೀಚಿನ ನಗರ ಪಾಲಿಕೆ ಚುನಾವಣೆಯಲ್ಲಿ ಧಾರವಾಡ ಭಾಗದಿಂದ 8 ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ. ಮಾಜಿ ಶಾಸಕ ಗಡ್ಡದ್ದೇವರಮಠ ಪುತ್ರ ಆನಂದ್ ಮತ್ತು ಮಾಜಿ ಶಾಸಕ ಜಿ.ಎಸ್ ಪಾಟೀಲ್ ಪುತ್ರ ಮಿಥುನ್ ರಾಜಕೀಯವಾಗಿ ಇನ್ನೂ ಬೆಳೆದಿಲ್ಲ. ಗದಗ ಮಾಜಿ ಶಾಸಕ ಡಿ. ಆರ್ ಪಾಟೀಲ್ ಪುತ್ರ ಸಚಿನ್ (ಎಚ್ ಕೆ ಪಾಟೀಲ್ ಸಚಿನ್ ಚಿಕ್ಕಪ್ಪ) ಅವರ ತಂದೆ ಮತ್ತು ಚಿಕ್ಕಪ್ಪರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ‘ನಮ್ಮ ಅಜ್ಜ ಹುಲಕೋಟಿ ಹುಲಿ ದಿ. ಕೆ.ಎಚ್ ಪಾಟೀಲರ ತೊಡೆ ಮೇಲೆ ಆಡಿ ಬೆಳೆದವನು ನಾನು. ನಾನೂ ಮರಿಹುಲಿಯೇ’ ಎಂದು ಸಚಿನ್ ಉಡಾಫೆಯಾಗಿ ಮಾತನಾಡುತ್ತಿದ್ದಾರೆ.
ಬೊಮ್ಮಾಯಿ–ಹೊರಟ್ಟಿ–ಎಚ್ ಕೆ ಪಾಟೀಲ್
ಹಿಂದೆಲ್ಲ ಇಲ್ಲಿ ಸ್ಥಳೀಯ ಸಂಸ್ಥೆಗಳಿಂದ ಬೊಮ್ಮಾಯಿ , ಶಿಕ್ಷಕರ ಕ್ಷೇತ್ರದಿಂದ ಈಗಿನ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಪಧವೀಧರರ ಕ್ಷೇತ್ರದಿಂದ ಎಚ್.ಕೆ ಪಾಟೀಲ್ ಎಂಎಲ್‍ಸಿ ಆಗುತ್ತಿದ್ದರು. ಈ ಮೂವರ ನಡುವೆ ಒಳ ಒಪ್ಪಂದವಿತ್ತು ಮತ್ತು ಪರಸ್ಪರ ಸಹಕಾರ ನೀಡುತ್ತಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ-ಸವಣೂರು ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಎಚ್. ಕೆ ಪಾಟೀಲರು ಗದಗಿನ ಶಾಸಕರು.ಹೊರಟ್ಟಿ ಅಮೋಘ 7ನೇ ಸಲ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ದಾಖಲೆ ಬರೆದಿದ್ದಾರೆ.

ಈಗ ಹೊಸ ಬಗೆಯ ಅಲಿಖಿತ ಒಪ್ಪಂದ ಜಾರಿಯಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಅಭ್ಯರ್ಥಿಗಳನ್ನು ಹಾಕುವುದಿಲ್ಲ. ನಮಗೊಂದು, ನಿಮಗೊಂದು ಎಂಬ ನೀತಿ ಜಾರಿಯಲ್ಲಿದೆ.
ಹಾವೇರಿ, ಗದಗ ಮತ್ತು ಧಾರವಾಡದ ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆಯಬೇಕಿದೆ. ಹಲವು ನಗರಸಭೆಗಳಿಗೂ ಚುನಾವಣೆ ನಡೆಯಬೇಕಿದೆ. ಅಂದರೆ ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಮತದಾರನಿಲ್ಲ. ಕೇವಲ ಗ್ರಾಮ ಪಂಚಾಯತಿ ಸದಸ್ಯರೇ ಇಲ್ಲಿ ನಿರ್ಣಾಯಕ.

ಬಿಜೆಪಿಯಿಂದ ಪ್ರದೀಪ್ ಶೆಟ್ಟರ್ ಮತ್ತೆ ಎಂಎಲ್‍ಸಿಯಾಗಿ ತಮ್ಮ ರಿಯಲ್ ಎಸ್ಟೇಟ್ ದಂಧೆ ಮುಂದುವರೆಸಲಿದ್ದಾರೆ. ಜಗದೀಶ್ ಶೆಟ್ಟರ್ ಅವರ ಬೇನಾಮಿಯಾಗಿ ಅವರು ವ್ಯವಹಾರ ಮಾಡಲಿದ್ದಾರೆ. ಕಾಂಗ್ರೆಸ್‍ನಿಂದ ಯಾರಿಗೇ ಟಿಕೆಟ್ ಸಿಕ್ಕರೂ ಅವರೇ ಎಂಎಲ್‍ಸಿ ಆಗಲಿದ್ದಾರೆ.






