
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್ ಪ್ರಕರಣದಲ್ಲಿ ಧನ್ವಿರ್ ಮೇಲೆ ಸಿಸಿಬಿ ಪೊಲೀಸರಿಗೆ ಅನುಮಾನ ಬರಲು ಕಾರಣ ಆತನ ಸಂಗಡಿಗರ ಜೈಲಿನ ಭೇಟಿ ಎನ್ನುವುದು ಗೊತ್ತಾಗಿದೆ. ಇದರಿಂದ ವಿಡಿಯೋ ಮಾಡಿದ್ದ ಜೈಲಿನ ಕೈದಿಗಳಿಗೂ ಧನ್ವೀರ್ ಗೂ ಪರೋಕ್ಷ ಲಿಂಕ್ ಇರುವುದು ತನಿಖೆ ವೇಳೆ ಗೊತ್ತಾಗಿದೆ.

ಇತ್ತೀಚೆಗೆ ಧನ್ವಿರ್ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಪರಿಚಯಸ್ಥ ಆರೋಪಿಗಳ ಭೇಟಿಗೆ ತೆರಳಿದ್ದರು. ಆದರೆ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಜೈಲಿಗೆ ಹೋಗಿದ್ದವರ ಫೋನ್ ನಂಬರ್ ಪಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾರು 10 ಜನರ ಮೇಲೆ ಅನುಮಾನ ವ್ಯಕ್ತಪಡಿಸಿದಾಗ ಹೆಚ್ಚಿನ ಪರಿಶೀಲನೆ ನಡೆಸಿದಾಗ, ಧನ್ವೀರ್ ಓರ್ವನ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ.

ಇದೇ ಕಾರಣಕ್ಕಾಗಿ ಧನ್ವಿರ್ ರನ್ನ ಕರೆತಂದು ಪೊಲೀಸದು ವಿಚಾರಣೆ ನಡೆಸಿದ್ದಾರೆ. ಸದ್ಯ ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಭಾನುವಾರ ಮಧ್ಯ ರಾತ್ರಿಯೇ ಧನ್ವೀರ್ ರನ್ನ ವಶಕ್ಕೆ ಪಡೆದಿದ್ದ ಪೊಲೀಸರು ಸೋಮವಾರ ಸಂಜೆಯವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಆತನ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ನ.13ರಂದು ಮತ್ತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಕಳಿಸಿದ್ದರು.












