ಮಂಡ್ಯ: ʼಬೆನ್ನು ಇಲ್ಲ, ಮೂಳೆಯೂ ಇಲ್ಲದʼ ರಾಜ್ಯ ಸರ್ಕಾರಕ್ಕೆ ಮಹಾರಾಷ್ಟ್ರದ ನಾಯಕರ ಚಿತಾವಣೆಗೆ ತಿರುಗೇಟು ನೀಡುವ ಶಕ್ತಿ ಸಹ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ನಾಯಕರ ಚಿತಾವಣೆಗೆ ತಿರುಗೇಟು ನೀಡುವ ಶಕ್ತಿ ಈ ಬಿಜೆಪಿ ಸರಕಾರಕ್ಕೆ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ. ಬೆಳಗಾವಿ ವಿಷಯದಲ್ಲಿ ಧಮ್, ತಾಕತ್ ಅನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ ಎಂದು ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.
ದೆಹಲಿಯ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದವರನ್ನು ಲೆಕ್ಕಕ್ಕೆ ಇಟ್ಟಿಲ್ಲ. 25 ಜನ ಲೋಕಸಭಾ ಸದಸ್ಯರು ಇದ್ದಾರೆ, ಅವರನ್ನು ಮೋದಿ, ಅಮಿತ್ ಶಾ ಎಲ್ಲಿಟ್ಟಿದ್ದಾರೆ ಗೊತ್ತಿದೆ. ಧಮ್, ತಾಕತ್ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡ್ತಾರೆ. ಈ ವಿಷಯದಲ್ಲಿ ಧಮ್, ತಾಕತ್ ಅನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ. ವೃಥಾ ಮಾತನಾಡುವುದನ್ನು ನಿಲ್ಲಿಸಿ. ಅಮಿತ್ ಶಾ ಅವರನ್ನು ಭೇಟಿಯಾಗಿ ನಿಮ್ಮ ಧಮ್, ತಾಕತ್ ಬಗ್ಗೆ ಹೇಳಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು.
ಇತ್ತೀಚಿಗೆ ಮಹಾರಾಷ್ಟ್ರದ ಹಲವು ಪಕ್ಷಗಳು ಮತ್ತು ಸರ್ಕಾರದ ಜೊತೆಗೆ ಬಿಜೆಪಿ ಸಹ ಬೆಳಗಾವಿ ಜಿಲ್ಲೆಯನ್ನ ಮಹಾರಾಷ್ಟ್ರ ಸೇರ್ಪಡೆಗೆ ಒತ್ತಾಯ ಮಾಡುತ್ತಿರುವುದು ದೊಡ್ಡ ಕುತಂತ್ರ. ಇದು ದೇಶದ ಒಕ್ಕೂಟದ ವ್ಯವಸ್ಥೆಯನ್ನೆ ಹಾಳು ಮಾಡುವಂತ ಅನಾಹುತ. ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಚುನಾವಣೆ ಎನ್ನುವ ಬಿಜೆಪಿ ನಾಯಕರು ಬೆಳಗಾವಿಯನ್ನು ಲಪಟಾಯಿಸಿ ಮಹಾರಾಷ್ಟ್ರಕ್ಕೆ ಕೊಡಲು ಹೊರಟಿದ್ದಾರೆ. ಆ ಮೂಲಕ ಗಡಿ ವಿಷಯದಲ್ಲಿ ಬಿಜೆಪಿ ಎರಡು ರೀತಿ ಮಾತನಾಡುತ್ತಿದೆ. ಮುಂಬೈಗೆ ಹೋದರೆ ಒಂದು ರೀತಿ, ಬೆಂಗಳೂರಿಗೆ ಬಂದರೆ ಇನ್ನೊಂದು ರೀತಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಮಹಾರಾಷ್ಟ್ರ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸಾಮಾನ್ಯ ಪ್ರಜ್ಞೆ ಇರುವ ಯಾವೊಬ್ಬ ವ್ಯಕ್ತಿಯೂ ಹೀಗೆ ಮಾತನಾಡುವುದಿಲ್ಲ. ಸ್ವಲ್ಪ ಕಾಮನ್ ಸೆನ್ಸ್ ಇದ್ದವರು ಇಂತಹ ವಿಷಯಗಳನ್ನು ಇಟ್ಟುಕೊಂಡು ಪ್ರಚೋದನೆ ಮಾಡುವುದು ಸೂಕ್ತವಲ್ಲ. ಈಗಾಗಲೇ ಬೆಳಗಾವಿ ಕರ್ನಾಟಕದ ಸ್ವತ್ತು, ನಮ್ಮ ಅವಿಭಾಜ್ಯ ಅಂಗ. ಇಲ್ಲಿ ಯಾವುದೇ ವಿವಾದ ಇಲ್ಲ. ನಮ್ಮ ಮುಖ್ಯಮಂತ್ರಿ ಪದೇ ಪದೆ ಬೆಳಗಾವಿ ವಿವಾದ ಅಂತ ಪದ ಬಳಸಿದ್ದಾರೆ. ತಕ್ಷಣವೇ ಅವರು ವಿವಾದ ಎನ್ನುವ ಪದವನ್ನು ವಾಪಸು ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಒತ್ತಾಯ ಮಾಡಿದರು.
ಇದು ಬೆಳಗಾವಿ ವಿವಾದ ಅಲ್ಲ, ಬೆಳಗಾವಿ ವಿಷಯವಷ್ಟೆ. ಬೆಳಗಾವಿ ವಿಷಯವನ್ನು ಮಹಾರಾಷ್ಟ್ರದವರು ಎತ್ತಿಕೊಂಡಿದ್ದಾರೆ. ಅವರು ವಿವಾದ ಸೃಷ್ಟಿ ಮಾಡಿ ಕುತಂತ್ರ ಮಾಡಿದರೆ ನಾವು ಯಾಕೆ ವಿವಾದ ಎಂದುಕೊಳ್ಳೋಣ? ಕರ್ನಾಟಕದ ಏಕೀಕರಣದಲ್ಲಿ ಬೆಳಗಾವಿ ಕರ್ನಾಟಕದ ಭಾಗ ಎಂದು ತೀರ್ಮಾನವಾಗಿದೆ ಎಂದು ಅವರು ಹೇಳಿದರು.