ಚನ್ನಪಟ್ಟಣ/ರಾಮನಗರ: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆ ನಡೆಸಿದರು.
ಇಬ್ಬರೂ ಹಿರಿಯ ನಾಯಕರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರಲ್ಲದೆ, ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಅಭಿವೃದ್ಧಿಪರ ರಾಜಕಾರಣಕ್ಕೆ ಮಣೆ ಹಾಕಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ವೈಫಲ್ಯ ಎತ್ತಿಹಿಡಿದ ಮಾಜಿ ಪ್ರಧಾನಿಗಳು
ಪ್ರಚಾರ ಸಭೆಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳನ್ನು ಜನರ ಮುಂದೆ ಎತ್ತಿ ಹಿಡಿದ ದೇವೇಗೌಡರು; ರಾಜ್ಯ ಖಜಾನೆ ಖಾಲಿ ಆಗಿದೆ, ರಾಜ್ಯ ದಿವಾಳಿ ಆಗಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ; ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡ ಪ್ರಮಾಣದ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದರಲ್ಲಿ ನನಗೆ ಯಾವುದೇ ಸಂಶಯ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
2006ರಲ್ಲಿ ನಾನು ಮತ್ತು ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಇದೆಲ್ಲವನ್ನು ಜನತೆ ಮರೆಯಬಾರದು ಇಂದು ಅವರು ಮನವಿ ಮಾಡಿದರು.