ಬೆಂಗಳೂರಿಗೆ (Bengaluru) ಮತ್ತೊಂದು ವಿಮಾನ ನಿಲ್ದಾಣ (Airport) ಮಂಜೂರಾತಿ ಮತ್ತು ಸ್ಥಳ ಅಂತಿಮಗೊಳಿಸುವ ಕಾರ್ಯದ ಬಗ್ಗೆ ಬಹಳ ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರದ ಉನ್ನತ ಮೂಲಗಳ ಪ್ರಕಾರ ರಾಮನಗರದ ಕಗ್ಗಲಿಪುರದ (Kaggalipura) ಸಮೀಪ ಮತ್ತೊಂದು ಏರ್ ಪೋರ್ಟ್ ಸ್ಥಾಪನೆಯಾಗಲಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಇಂದು ಮಾಜಿ ಪ್ರಧಾನಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡರು (HD Devegowda) ಇಂದು ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇದರ ಜೊತೆಗೆ ತಮ್ಮ ಅವಧಿಯಲ್ಲಿ ಮಂಜೂರಾಗಿದ್ದ, ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪ್ರಯಾಣಿಕರ ಒತ್ತಡ ಹೆಚ್ಚಾಗಿ, ಮತ್ತೊಂದು ವಿಮಾನ ನಿಲ್ದಾಣ ಅವಶ್ಯಕತೆ ಇದೆ ಎಂಬುದನ್ನು ಸದನಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಈ ಪ್ರಸ್ತಾವನೆಗೆ ಸ್ಪಂದಿಸಿದ ಕೇಂದ್ರ ವಿಮಾನ ಖಾತೆ ಸಚಿವರಾದ ರಾಮ್ ಅವರು, ಕರ್ನಾಟಕ ಸರ್ಕಾರ ಜಾಗವನ್ನು ಗುರುತಿಸಿದರೆ, ನಾವು ಮತ್ತೊಂದು ವಿಮಾನ ನಿಲ್ದಾಣಕ್ಕೆ ಅನುಮತಿ ಕೊಡುತ್ತೇವೆ ಎಂದು ಉತ್ತರಿಸಿದ್ದಾರೆ.