ಸುಗ್ಗಿ ಮುಗಿಸಿ ಬೇಸಿಗೆಯಲ್ಲಿ ಖಾಲಿಯಾಗಿರುವ ಹೊಲದಲ್ಲಿ ದೇಸಿ ಗೋವುಗಳನ್ನು ನಿಲ್ಲಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತ ಸಮುದಾಯ ಮುಂದಾಗಿದೆ. ಹೋಬಳಿಯ ಹೊಲಗಳಲ್ಲಿ ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದ 600 ಕ್ಕೂ ಹೆಚ್ಚು ದೇಸಿ ಗೋವುಗಳ ಹಿಂಡು 22 ದಿನಗಳಿಂದ ಬೀಡು ಬಿಟ್ಟಿದೆ.
ರಾಸಾಯನಿಕ ಗೊಬ್ಬರದಿಂದ ಬೇಸತ್ತಿದ್ದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿ 12 ವರ್ಷಗಳಿಂದ ಸಾವಯವ ಕೃಷಿಯ ಕಡೆಗೆ ಮುಖ ಮಾಡಿದ್ದಾರೆ. ಪ್ರತಿ ವರ್ಷ ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿಸುತ್ತಿದ್ದರು ಆದರೆ ಅದರ ಬೆಲೆಗೂ ಹೆಚ್ಚಾಗಿದೆ. ಅಧಿಕ ಹಣ ನೀಡಿದರೂ ಉತ್ತಮ ಸೆಗಣಿ ಗೊಬ್ಬರ ಸಿಗುತ್ತಿಲ್ಲ. ಆದ್ದರಿಂದ ರೈತರು ದೇಸಿ ಗೋವುಗಳ ಗುಂಪಿಗೆ ಮೊರೆ ಹೋಗಿದ್ದಾರೆ.
10 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುರಗಡ್ಡಿ ಹಾಗೂ ಕೆರಳ್ಳಿ ಗೋಪಾಲಕರ ಗೆಳತನ ಮಾಡಿದ ನಿವೃತ್ತ ಸೇನಾಧಿಕಾರಿ ನಂತರ ದಿನಗಳಲ್ಲಿಅವುಗಳನ್ನು ಆಹ್ವಾನಿಸಿ ತಮ್ಮ ಹೊಲದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಭೂಮಿ ಫಲವತ್ತತೆ ಹೆಚ್ಚಾಗಿ ಮಣ್ಣಿನ ರೋಗ ನಿರೋಧಕ ಶಕ್ತಿ ಬಲಗೊಂಡಿದೆ. ಇಳುವರಿಯೂ ಉತ್ತಮವಾಗಿ ಬಂದಿದೆ. ಅಂದಿನಿಂದ ಇಲ್ಲಿಯವರೆಗೆ 3 ವರ್ಷಕ್ಕೊಮ್ಮೆ ತಮ್ಮ ಜಮೀನಿನಲ್ಲಿ ದೇಸಿ ಗೋವುಗಳ ಬೀಡಾರಕ್ಕೆ ಆದ್ಯತೆ ನೀಡಿದ್ದಾರೆ. ನೂರಾರು ಗೋವುಗಳನ್ನು ಕಂಡ ಇಲ್ಲಿನ ರೈತರು ತಮ್ಮ ಜಮಿನುಗಳಿಗೆ ದನಗಳ ಬೀಡಾರು ಹೂಡುವಂತೆ ಬೇಡಿಕೆ ಇಡುತ್ತಿದ್ದಾರೆ.
ಆದರೆ ಗೋವುಗಳನ್ನು ನಿಲ್ಲಿಸಲು ಎರಡು ವರ್ಷ ಮುಂಚಿತವಾಗಿ ಬುಕಿಂಗ್ ಮಾಡಬೇಕು. ಮಳೆಗಾಲ ಆರಂಭವಾಗುವ ಮೊದಲು ಬಳ್ಳಾರಿ, ಗಂಗಾವತಿ, ಬಾಗಲಕೋಟ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ವಿವಿಧ ಭಾಗದ ರೈತರ ಜಮೀನುಗಳಿಗೆ ಹೋಗುತ್ತೇವೆ. ನೀರು, ಮೇವು ಸಿಗುವ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಮಳೆಗಾಲದಲ್ಲಿ ಸೊಂಡುರು ಗುಡ್ಡ, ಕೊಪ್ಪಳ ಗುಡ್ಡದಲ್ಲಿ ವಾಸ ಮಾಡುತ್ತೇವೆ. ಗೋವಿನ ಹಿಂಡಿನ ಜೊತೆಯಲ್ಲೇ ನಮ್ಮ ಸಂಸಾರ ಇರುತ್ತದೆ. ಕಾಲಕ್ಕನುಗುಣವಾಗಿ ಔಷಧೋಪಚಾರ, ರಕ್ಷಣೆ ಮಾಡುತ್ತೇವೆ ಎಂದು ಬಾಳಪ್ಪ ಕುರಗಡ್ಡಿ, ಹೊನ್ನಪ್ಪ ಕೆರಳ್ಳಿ ತಿಳಿಸಿದರು.
ಹೋರಿ ಕರುಗಳ ವ್ಯಾಪರ ಬಲು ಜೋರು
ಪೂರ್ವಜರ ಕಾಲದಿಂದಲೂ ಸಾವಿರಾರು ದೇಸಿ ಗೋವುಗಳ ಸಂರಕ್ಷಣೆ ಮಾಡಿಕೊಂಡು ಬಂದಿರುವ ಹೊನ್ನಪ್ಪ ಕೆರಳ್ಳಿ ಅವರ 200 ಹಾಗೂ ಬಾಲಪ್ಪ ಕುರಗಡ್ಡಿಯವರ 400 ಗೋವುಗಳನ್ನು ಹೊಲದಲ್ಲಿ ನಿಲ್ಲಿಸಿದ್ದಾರೆ. 600 ಗೋವುಗಳನ್ನು ಒಂದು ರಾತ್ರಿ ನಿಲ್ಲಿಸಿದರೆ 4 ಸಾವಿರ ರೂಪಾಯಿ ಸಿಗುತ್ತದೆ. ದಿನಕ್ಕೆ ಒಂದು ಎಕರೆ ಪ್ರದೇಶ ಗೋವಿನ ಸೆಗಣಿ ಹಾಗೂ ಗಂಜಲುನಲ್ಲಿರುವ ಪೋಷಕಾಂಶಗಳಿಂದ ಗೋಮಾಳವಾಗುತ್ತದೆ.
60ಕ್ಕೂ ಹೆಚ್ಚು ದೇಸಿ ತಳಿ ಹೋರಿ ಕರುಗಳಿದ್ದು ಅವುಗಳ ಖರೀದಿ ಜೋರು ನಡೆದಿದೆ. ಉಳಿಮೆಗೆ ಉಪಯುಕ್ತವಾಗುವ ಹೋರಿ ಕರುಗಳಿಗೆ ಬೆಳವಣಿಗೆಗೆ ತಕ್ಕಂತೆ ರೂ. 10 – 12 ಸಾವಿರ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹೊಲದ ಮಾಲಿಕರು ಹಣ, ಜೋಳ, ಮೇವು ನೀಡುತ್ತಿರುವುದರಿಂದ ಹೋಬಳಿಯ ರೈತರಿಂದ ಗೋಪಾಲಕರು ಖುಷಿಯಾಗಿದ್ದಾರೆ.
ರಾಸಾಯನಿಕ ಗೊಬ್ಬರ ಬಳಸಿ ಭೂ ತಾಯಿಗೆ ವಿಷ ಉಣಿಸುವ ಬದಲು ದೇಸಿ ಗೋವುಗಳನ್ನು ನಿಲ್ಲಿಸಿ ಸೆಗಣಿ ಹಾಗೂ ಗಂಜಲು ಮೂಲಕ ಭೂಮಿಯ ಶಕ್ತಿ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ.
– ರಾಮಣ್ಣ ಸಕ್ರೋಜಿ, ನಿವೃತ್ತ ಸೇನಾಧಿಕಾರಿ