ರಾಜ್ಯದಲ್ಲಿ ಡೆಂಗ್ಯು ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸುಮೊಟೊ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯು ಪ್ರಕರಣಗಳು ಮಿತಿ ಮೀರುತ್ತಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆದಿದ್ದು, ಜುಲೈ 23 ರೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಆಗಿದೆ. ಡೆಂಗ್ಯು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ನಲ್ಲಿ ಸೂಚನೆ ಕೊಡಲಾಗಿದೆ.
ಬೆಂಗಳೂರು ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಡೆಂಗ್ಯು ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳೇನು..? ಬೆಂಗಳೂರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆಯೇ..? ಸಾರ್ವಜನಿಕರಿಗೆ ಒದಗಿಸಿರುವ ಮೂಲಸೌಕರ್ಯಗಳ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.
ಡೆಂಗ್ಯು ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಹಾಗೂ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚನೆ ಕೊಡಲಾಗಿದೆ. ಈ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಂಪೂರ್ಣ ಮಾಹಿತಿ ಒದಗಿಸುವುದಾಗಿ ಹೈಕೋರ್ಟ್ಗೆ ಉತ್ತರ ಕೊಟ್ಟಿದ್ದಾರೆ.