1.14 ಲಕ್ಷ ಫಲಾನುಭವಿಗಳಿಗೆ 900 ಕೋಟಿ ರೂ. ಹಣ ಬಿಡುಗಡೆ
ಬೆಂಗಳೂರು: ಹಿಂದುಳಿದವರ ಬದುಕು ಹಸನಾದಾಗ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ. ಸಮಯ ಬಂದಾಗ ನಿಮ್ಮ ಪರವಾದ ನಿರ್ಣಯ ತೆಗೆದುಕೊಳ್ಳುವವರೇ ನಿಜವಾದ ಹಿಂದುಳಿದ ವರ್ಗಗಳ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ವತಿಯಿಂದ 1.14 ಲಕ್ಷ ಫಲಾನುಭವಿಗಳಿಗೆ 900 ಕೋಟಿ ರೂ.ಗಳನ್ನು ಇಂದು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಸರ್ಕಾರ ಜನರಿಂದ ಸ್ಥಾಪಿತವಾಗಿದ್ದು, ಇದರ ಅರಿವಿನಿಂದ ಈ ಸೌಧದಲ್ಲಿ ಕೆಲಸ ಮಾಡಬೇಕು. ನ್ಯಾಯ ಕೊಡುವ ಭ್ರಮೆ ಹುಟ್ಟಿಸುವುದರಿಂದ ಬದುಕು ಬಂಗಾರವಾಗೋಲ್ಲ. ಹುಸಿ ಭರವಸೆಯನ್ನ ಕೊಟ್ಟು ನ್ಯಾಯವನ್ನು ನೀಡಲಾಗದು. ವಸ್ತುನಿಷ್ಠವಾಗಿ ಬದುಕಿನಲ್ಲಿ ಸ್ವಾಭಿಮಾನ ಬದುಕನ್ನ ಬದಕಲು ಸಾಧ್ಯವೆಂದು ಮನಗಂಡು ಸರ್ಕಾರ ಕಾರ್ಯಕ್ರಮ ರೂಪಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.
ಸ್ಪಂದನಾಶೀಲ ಸರ್ಕಾರ
ಇಂದು ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡುತ್ತಿದ್ದು, ಇದನ್ನ 75 ವರ್ಷಗಳಿಂದ ಮಾಡಿದ್ದರೆ ಇಂದು ಇದರ ಅವಶ್ಯಕತೆ ಇರಲಿಲ್ಲ. ದೊಡ್ಡ ಪ್ರಮಾಣದ ಉನ್ನತ ಶಿಕ್ಷಣಕ್ಕೆ ಈ ಅನುದಾನ ಬಳಕೆ ಮಾಡಬಹುದಿತ್ತು. ಎಲ್ಲರಿಗೂ ಸೂರು ಸಿಕ್ಕಿದ್ದರೆ ಮನೆ ಕಟ್ಟುವ ಅವಕಾಶವಿರುತ್ತಿರಲಿಲ್ಲ. ಸ್ವಯಂ ಉದ್ಯೋಗ ಸಿಕ್ಕಿದ್ದಾರೆ ಇತರರಿಗೆ ಸಹಾಯ ಮಾಡಬಹುದಿತ್ತು. ಇದ್ಯಾವುದು ಆಗಲಿಲ್ಲ. ಇನ್ನು ಮುಂದಾದರೂ ಬದಲಾವಣೆಯಾಗಬೇಕು. ನಾವು ನೀಡುವ ಕಾರ್ಯಕ್ರಮಗಳು ನಿಮ್ಮ ಹಕ್ಕು. ನಾವು ಯಾವುದೇ ಉಪಕಾರ ಮಾಡುತ್ತಿಲ್ಲ. ಒಂದು ಸರ್ಕಾರ ಸ್ಪಂದನಾಶೀಲ ಹಾಗೂ ಸೂಕ್ಷ್ಮವಾಗಿದ್ದರೆ ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸರಿಯಾದ ಕಾರ್ಯಕ್ರಮ ಕೊಡಬಹುದು ಎಂದರು.
ಐದು ತಿಂಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ
ಗಂಗಾ ಕಲ್ಯಾಣ ಯೋಜನೆಯಡಿ 19 ಸಾವಿರ ಫಲಾನುಭವಿಗಳಿಗೆ ಬೇರೆ ಬೇರೆ ನಿಗಮಗಳ ವತಿಯಿಂದ ಕೊಳವೆಬಾವಿ ಮಂಜೂರು ಮಾಡಲಾಗಿದೆ. ಪಂಚವಾರ್ಷಿಕ ಯೋಜನೆಯಂತೆ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದರು. ಐದು ತಿಂಗಳಲ್ಲಿ ಆಗೋದನ್ನು ಐದು ವರ್ಷ ಮಾಡುತ್ತಿದ್ದರು. ನಾವು ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನವನ್ನು ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಗುತ್ತಿಗೆದಾರನಿಗೆ ಸಹಾಯ ಮಾಡೋ ಕೆಲಸ ನಾವು ಮಾಡಿಲ್ಲ. ಒಬ್ಬ ಗುತ್ತಿಗೆದಾರ ಸಾವಿರಾರು ಜನರ ಬದುಕನ್ನು ಮುಷ್ಟಿಯಲ್ಲಿ ಇಟ್ಟಿಕೊಳ್ಳೋದು ಯಾವ ನ್ಯಾಯ. ಅದಕ್ಕಾಗಿ ನಾವು ಡಿಬಿಟಿ ಜಾರಿಗೆ ತಂದು, ಮೊದಲ ಕಂತಿನಲ್ಲಿ 75 ಸಾವಿರ ಹಣವನ್ನು ನೇರವಾಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ಡಿಬಿಟಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ. ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ತಂತ್ರಜ್ಞಾನ ಬಳಕೆ ಮಾಡಬೇಕು ಎಂದು ಡಿಜಿಟಲ್ ವ್ಯವಸ್ಥೆ ಕಾರಿಗೆ ತಂದಿದ್ದಾರೆ. ಅದರ ಮೂಲಕ ನೇರವಾಗಿ ರೈತರ ಖಾತೆಗೆ ಎಲ್ಲಾ ನಿಗಮಗಳಿಂದ ನೀಡುತ್ತಿದ್ದೇವೆ. ಗಂಗಾ ಕಲ್ಯಾಣ ಯೋಜನೆಯಡಿ ೧೯ ಸಾವಿರ ಫಲಾನುಭವಿಗಳಿಗೆ ಅನುದಾನ ಒದಗಿಸಲಾಗಿದೆ. ಹದಗೆಟ್ಟಿದ್ದ ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ. ಕೇವಲ ಐದು ತಿಂಗಳಲ್ಲೇ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.
ಸರಳ ಆಡಳಿತ ಮಾಡಬೇಕು
ಬಡವರ ಬದುಕು ಸರಳವಾಗಿರುತ್ತದೆ. ಸರಳವಾಗಿ ಅವರ ಸವಲತ್ತುಗಳನ್ನು ಮುಟ್ಟಿಸಿದರೆ ಸಂತೋಷದಿಂದ ಅದರ ಉಪಯೋಗ ಮಾಡಿ ಅವರ ಬದುಕಿನ ಗುಣಮಟ್ಟದಲ್ಲಿ ಉತ್ತಮಗೊಂಡು ರಾಜ್ಯದ ಆದಾಯವನ್ನೂ ಹೆಚ್ಚಿಸುತ್ತಾರೆ. ಸರಳವಾಗಿ ಆಡಳಿತ ನಡೆಸಿದಾಗ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ. ಜನ ಫಲಾನುಭವಗಳಲ್ಲ ನಮ್ಮ ಸರ್ಕಾರದ ಪಾಲುದಾರರು. ನಿಮ್ಮ ಮೇಲೆ ಹೂಡಿಕೆ ಮಾಡಿದರೆ ರಾಜ್ಯಕ್ಕೆ ಆದಾಯ ಹೆಚ್ಚಾಗುತ್ತದೆ. ಮಾನವ ಸಂಪನ್ಮೂಲದ ಮೇಲೆ ಹಣ ತೊಡಗಿಸಿದರೆ ರಾಜ್ಯದ ಆದಾಯ ಹೆಚ್ಚಾಗುತ್ತದೆ. ಕೊಳ್ಳುವ ಶಕ್ತಿ ಹೆಚ್ವಾಗಿ ತೆರಿಗೆ ಸರ್ಕಾರಕ್ಕೆ ಬರುತ್ತದೆ. ಅಕ್ಷಯ ಪಾತ್ರೆಯಂತೆ. ಹಿಂದುರುಗುತ್ತದೆ. ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗಗಳ ಮೇಲೆ ಹಣ ತೊಡಗಿಸಿದರೆ ಅದು ಎರಡುಪಟ್ಟು ಹೆಚ್ಚಾಗಿ ಅಕ್ಷಯ ಪಾತ್ರೆಯಾಗುತ್ತದೆ. ಸಂವೇದನಾಶೀಲ ನಾಯಕರಿಂದ ಮಾತ್ರ ಈ ಕೆಲಸ ಸಾಧ್ಯ ಎಂದರು
ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ
ಗಂಗಕಲ್ಯಾಣ, 50 ಕನಕದಾಸ ಹಾಸ್ಟೆಲ್, ಸ್ವಯಂ ಉದ್ಯೋಗ, ಹೊಲಿಗೆ ತರಬೇತಿ ಸೇರಿದಂತೆ ಹಲವು ವಿತರಣೆ, ವಿದ್ಯಾಸಿರಿ ಯೋಜನೆ ಹಾಗೂ ಹಾಸ್ಟೆಲ್ ಮೂಲಕ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರು ಆಗಬೇಕು. ಅವರು ಇತರರಂತೆ ಮುಂದೆ ಬರಬೇಕು. ಹಳ್ಳಿಗಳಲ್ಲಿ ಹಿಂದುಳಿದ ವರ್ಗದವರಿಗೆ ಕಾಯಕ ಕಾರ್ಯಕ್ರಮದ ಮೂಲಕ 50 ಸಾವಿರದವರೆಗೂ ನೀಡಲಾಗುತ್ತಿದೆ. ಅವಶ್ಯಕತೆಗೆ ಅನುಸಾರವಾಗಿ 33 ಸಾವಿರ ಮಕ್ಕಳಿಗೆ ವಿದ್ಯಾರ್ಥಿನಿಲಯದ ಸೌಕರ್ಯ ಕಲ್ಪಿಸಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ರೈತ ಕಾರ್ಮಿಕರಿಗೆ ವಿದ್ಯಾ ನಿಧಿ ವಿಸ್ತರಿಸಲಾಗಿದೆ. ಸಫಾಯಿ ಕರ್ಮಚಾರಿಗಳಿಗೆ 11, 141 ಜನರೊಗೆ ಖಾಯಂ ಗೊಳಿಸಿ ಒಟ್ಟು 24 ಸಾವಿರ ಪೌರ ಕಾರ್ಮಿಕರಿಗೆ ಖಾಯಂ ಮಾಡಿದಲಾಗಿದೆ. ಸ್ಮಶಾನ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡಿದೆ. ಕುರಿಗಾಹಿಗಳಿಗೆ ೩೫೦ ಕೋಟಿ ವೆಚ್ಚದಲ್ಲಿ ಸಹಾಯ, ಲಮಾಣಿ ಜನಾಂಗಕ್ಕೆ ಹಕ್ಕು ಪತ್ರ ನೀಡಿದೆ. ೫೦ ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. ಕುರುಬರಹಟ್ಟಿ ಗೊಲ್ಲರ ಹಟ್ಟಿ ಲಮಾಣಿ ಸಮುದಾಯಕ್ಕೆ ಒಂದು ವಾರದೊಳಗೆ 1.ಲಕ್ಷ ಜನರಿಗೆ ಹಕ್ಕು ಪತ್ರ ನೀಡಲಾಗುವುದು. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ೧ ಸಾವಿರ ರೂಪಾಯಿ ಕೊಡುತ್ತೇವೆ. ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ನೀಡುವ ಕಾರ್ಯಕ್ರಮ ಜಾರಿಯಾಗಿದೆ ಬಜೆಟ್ ನಂತರ 850 ಕೋಟಿ ರೂಪಾಯಿ ಎಲ್ಲಾ ನಿಗಮಗಳಿಗೆ ನೀಡಲಾಗಿದೆ ಎಂದರು.