ಕೂಡಲಸಂಗಮ: ವಿಶ್ವಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ ಧರ್ಮ ಪೀಠ ಸ್ಥಾಪನೆಯಾಗಬೇಕು ಎಂದು ಸ್ವಾಭಿಮಾನಿ ಶರಣ ಮೇಳದ ಉತ್ಸವ ಸಮಿತಿ ಅಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಹುನಗುಂದ ತಾಲೂಕಿನ ಹೂವನೂರ ಗ್ರಾಮದ ಹೊರ ವಲಯದಲ್ಲಿ ನಡೆಯುತ್ತಿರುವ ದ್ವಿತೀಯ ಸ್ವಾಭಿಮಾನಿ ಶರಣ ಮೇಳದಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ೧೧೫೫ರ ಜನೇವರಿ ೧೪ರಂದು ಇಷ್ಟಲಿಂಗ ಕಂಡು ಹಿಡಿದರು. ಅಂದೇ ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದರು.
ಪೂಜ್ಯ ಮಾತೆ ಮಹಾದೇವಿ ಅವರು ೧೯೮೮ ರಿಂದ ಸುಮಾರು ೩೫ ವರ್ಷಗಳ ಕಾಲ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಮತ್ತು ವಚನ ಪಠಣ, ಸಮುದಾಯ ಪ್ರಾರ್ಥನೆ ಮಾಡಿಕೊಂಡು ಬಂದಿದ್ದಾರೆ.
ಕೂಡಲ ಸಂಗಮವು ವ್ಯಾಟಿಕನ್ ಸಿಟಿಯಂತೆ ಪವಿತ್ರ ಸ್ವತಂತ್ರ ಧರ್ಮ ಕ್ಷೇತ್ರವಾಗಿ ಹೊರ ಹೊಮ್ಮಬೇಕು. ಕೂಡಲ ಸಂಗಮ ಮತ್ತು ಬಸವಕಲ್ಯಾಣ ರಾಜಧಾನಿ ಯಾಗಬೇಕು. ಏಕೆಂದರೆ ಬಸವೇಶ್ವರರು ಪ್ರಧಾನ ಮಂತ್ರಿಯಾಗಿದ್ದರು ಎಂದು ಪ್ರತಿಪಾದಿಸಿದರು.
ಭಾರತದಲ್ಲಿ ಹುಟ್ಟಿದ ಜೈನ, ಬೌದ್ಧ, ಇಸ್ಲಾಂ, ಸಿಖ್ ಧರ್ಮಗಳು ಸ್ವತಂತ್ರ ಧರ್ಮದ ಮಾನ್ಯತೆ ಪಡೆದಿವೆ. ಆದರೆ, ಲಿಂಗಾಯತ ಧರ್ಮ ಇವುಗಳಿಗಿಂತ ಮೊದಲೇ ಬಸವೇಶ್ವರರಿಂದ ಜನಿಸಿದರೂ ಐಕ್ಯತೆಯ ಕೊರತೆಯಿಂದ ಸ್ವತಂತ್ರ ಧರ್ಮದ ಮಾನ್ಯತೆ ದೊರೆಯದಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮವರೇ ನಮ್ಮನ್ನು ಅಪ್ಪಿಕೊಳ್ಳದಿರುವುದು ಮಾನ್ಯತೆಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ಧರ್ಮಕ್ಷೇತ್ರ ಕೂಡಲ ಸಂಗಮವನ್ನು ಸಂದರ್ಶಿಸಿ, ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡು ಧಾರ್ಮಿಕ ಅನುಯಾಯಿತ್ವವನ್ನು ಸ್ವೀಕರಿಸಿ ಕೊಳ್ಳಬೇಕು ಎಂದು ಚನ್ನಬಸವಾನಂದ ಶ್ರೀಗಳು ಕರೆ ನೀಡಿದರು.
- ನಿರ್ಣಯಗಳು :
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿಬೇಕು.
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವಣೆ ಸಲ್ಲಿಸಬೇಕು.
ಕೂಡಲ ಸಂಗಮ ಬಸವಣ್ಣನವರ ಐಕ್ಯ ಸ್ಥಳ ಸಂದರ್ಶನಕ್ಕೆ ಉಚಿತ ಪ್ರವೇಶ ನೀಡಬೇಕು.
ಐಕ್ಯ ಸ್ಥಳದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.
ಬಸವ ಕಲ್ಯಾಣದಿಂದ ಮಲೇಮಹಾದೇಶ್ವರ ಬೆಟ್ಟದವರಗೆ ಲಿಂಗಾಯತ ಧರ್ಮ ಜನಜಾಗೃತಿ ಅಭಿಯಾನ ನಡೆಯಬೇಕು.







