ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಸೋಂಕು, ಶೇಕಡಾ 80 ರಷ್ಟು ಹೊಸ ಪ್ರಕರಣಗಳಲ್ಲಿ ಪತ್ತೆಯಾಗಿದೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ ಸಹ-ಅಧ್ಯಕ್ಷ ಡಾ. NK ಅರೋರಾ ಹೇಳಿದ್ದಾರೆ. ಇನ್ನೂ ಹೆಚ್ಚು ಪ್ರಬಲವಾದ ರೂಪಾಂತರಿ ವೈರಾಣು ಬಂದರೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಡೆಲ್ಟಾ ರೂಪಾಂತರಿ ವೈರಾಣು ಅದರ ಹಿಂದಿನ ಆಲ್ಫಾ ರೂಪಾಂತರಿ ವೈರಾಣುಗಿಂತ ಶೇಕಡ 40-60 ರಷ್ಟು ಹೆಚ್ಚಿಗೆ ಹರಡಬಲ್ಲುವ ತಾಕತ್ತು ಹೊಂದಿದೆ. ಅಲ್ಲದೇ, ಈಗಾಗಲೇ ಅಮೆರಿಕಾ, ಇಂಗ್ಲೆಂಡ್ ಮತ್ತು ಸಿಂಗಾಪುರ ಸೇರಿದಂತೆ 80 ಕ್ಕೂ ಹೆಚ್ಚು ದೇಶಗಳಿಗೆ ಈ ರೂಪಾಂತರಿ ಕರೋನಾ ಹರಡಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಅದರ ಹರಡುವಿಕೆ, ವೈರಲೆನ್ಸ್ ಮತ್ತು ಲಸಿಕೆ ತಪ್ಪಿಸಿಕೊಳ್ಳುವ ಗುಣಲಕ್ಷಣಗಳ ಕುರಿತು ಇನ್ನೂ ಅಧ್ಯಯನ ಮಾಡಲಾಗುತ್ತಿದೆ ಎಂದು ಡಾ.ಅರೋರಾ ಹೇಳಿದ್ದಾರೆ.

ಡೆಲ್ಟಾ ರೂಪಾಂತರ ಎಂದು ಹೆಸರಾದ ಬಿ.1.617.2 ಕೋವಿಡ್-19 ರೂಪಾಂತರ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ದೇಶದಲ್ಲಿ ಎರಡನೇ ಅಲೆ ಹರಡಲು ಇದೇ ರೂಪಾಂತರಿ ವೈರಾಣು ಕಾರಣವಾಗಿತ್ತು. ಇಂದು ಶೇಕಡಾ 80 ರಷ್ಟು ಹೊಸ ಕೋವಿಡ್-19 ಪ್ರಕರಣಗಳಿಗೆ ಇದೇ ಕಾರಣವಾಗಿದೆ ಎಂದು ಡಾ.ಅರೋರಾ ತಿಳಿಸಿದ್ದಾರೆ.
ಇತರ ರೂಪಾಂತರಿ ವೈರಾಣುಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ರೂಪಾಂತರಿಯು ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆಯೇ ಎಂಬ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಡಾ. ಅರೋರಾ, ಸಿನ್ಸಿಟಿಯಮ್ ರಚನೆಯನ್ನು ಉತ್ತೇಜಿಸುವ ಕೆಲವು ರೂಪಾಂತರಗಳನ್ನು ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಮಾನವ ಜೀವಕೋಶದ ಮೇಲೆ ಆಕ್ರಮಣ ಮಾಡುವಾಗ, ಅದು ವೇಗವಾಗಿ ಪುನರಾವರ್ತಿಸುತ್ತದೆ. ಇದು ಶ್ವಾಸಕೋಶದಂತಹ ಅಂಗಗಳಲ್ಲಿ ಬಲವಾದ ಉರಿಯೂತದ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಆದಾಗ್ಯೂ ಡೆಲ್ಟಾ ರೂಪಾಂತರದಿಂದಾಗಿ ರೋಗವು ಹೆಚ್ಚು ತೀವ್ರವಾಗಿರುತ್ತದೆ ಎಂದು ಹೇಳುವುದು ಕಷ್ಟ ಎಂದು ತಿಳಿಸಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುವನ್ನು ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿ ಎದುರಿಸಲಾಗದು ಎಂಬ ಅನುಮಾನಗಳು ಹರಿದಾಡುತ್ತಿವೆ.