ಜನವರಿ 26 ರಂದು ಗಣರಾಜೋತ್ಸವ ದಿನದಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಟ್ರಾಕ್ಟರ್ ಪರೇಡ್ ವೇಳೆ, ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಮುಖ್ಯ ರುವಾರಿ ಪಂಜಾಬಿ ನಟ ದೀಪ್ ಸಿಧು ಎಂದು ತಿಳಿದುಬಂದಿತ್ತು. ಇದರ ಬೆನ್ನಿಗೆ ದೀಪ್ ಸಿಧು ಬಿಜೆಪಿ ಬೆಂಬಲಿಗ ಎಂಬ ಅಂಶ ಬಹಿರಂಗಗೊಂಡಿತ್ತು. ಇದು ರೈತರ ಮೇಲೆ ಸುಳ್ಳು ಆಪಾದನೆ ಹೊರಿಸಿ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ತನ್ನ ಬೆಂಬಲಿಗರನ್ನು ಛೂ ಬಿಟ್ಟಿದೆ ಎಂಬ ರೈತ ಮುಖಂಡರು ಆರೋಪಕ್ಕೆ ಪುಷ್ಟಿ ನೀಡಿತ್ತು.
ದೀಪ್ ಸಿಧು ಮೇಲೆ ಘಟನೆ ನಡೆದ ಮರುದಿನವೇ ಎಫ್ಐಆರ್ ದಾಖಲಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದರು. ಇದೀಗ ಆತನ ಬಗ್ಗೆ ಸಂಪೂರ್ಣ ಮಾಹಿತಿ ನೀಡಬಲ್ಲವರಿಗೆ ನಗದು ಬಹುಮಾನವನ್ನು ದೆಹಲಿ ಪೊಲೀಸ್ ಘೋಷಿಸಿದೆ.
ಸಿಖ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನಟ ದೀಪ್ ಸಿಧು ಮತ್ತು ಮೂವರು ಆರೋಪಿಗಳ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುತ್ತದೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ ನಾಲ್ಕು ಜನ ಆರೋಪಿಗಳಾದ ಜಗ್ಬೀರ್ ಸಿಂಗ್, ಬುಟಾ ಸಿಂಗ್, ಸುಖದೇವ್ ಸಿಂಗ್, ಮತ್ತು ಇಕ್ಬಾಲ್ ಸಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ಬಹುಮಾನವನ್ನು ಘೋಷಿಸಲಾಗಿದೆ.
ಆರೋಪಿತರು, ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ನಡೆಸಿದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಒಪ್ಪಿದ ಮಾರ್ಗ ಮತ್ತು ನಿಗದಿತ ಸಮಯವನ್ನು ಪಾಲಿಸದೆ ಕೆಂಪು ಕೋಟೆಯ ಕಮಾನನ್ನು ಹತ್ತಿ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಲು ಪ್ರಚೋದನೆ ನೀಡಿದ್ದರು.
ಇದರಿಂದ ಪ್ರತಿಭಟನೆ ತೀವ್ರ ಸ್ವರೂಪ ತಾಳಿ. ಪೊಲೀಸರಿಗೆ ನಿಯಂತ್ರಣ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಪೊಲೀಸರು 40 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. 122 ಜನರನ್ನು ಬಂಧಿಸಲಾಗಿದೆ. ಮತ್ತು ಘಟನೆಯಲ್ಲಿ 100 ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆಂದು ಇಲಾಖೆ ತಿಳಿಸಿತ್ತು.
ದೆಹಲಿ ಪೊಲೀಸ್ ಅಪರಾಧ ವಿಭಾಗವು ಜನವರಿ 26 ರ ಹಿಂಸೆಯ ತನಿಖೆಯ ಭಾಗವಾಗಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳನ್ನು ನೋಡಿ, ಸಂಬಂಧ ಪಟ್ಟ ತಜ್ಞರ ಸಹಾಯ ಪಡೆದು ಹಿಂಸೆಯಲ್ಲಿ ಭಾಗಿಯಾದ 12 ಜನ ಆರೋಪಿಗಳ ಪೋಟೋವನ್ನು ಬಿಡುಗಡೆಗೊಳಿಸಿದೆ. ಈ ಆರೋಪಿಗಳು ದೊಣ್ಣೆ ಮತ್ತು ಲಾಠಿಗಳನ್ನು ಹಿಡಿದು ಕೆಂಪುಕೋಟೆ ಹಿಂಸಾಚಾರದಲ್ಲಿ ಭಾಗಿಯಾಗುವುದರ ಜೊತೆಗೆ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.