ಜನವರಿ 26 ರಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಬೃಹತ್ ಮಟ್ಟದ ಟ್ರ್ಯಾಕ್ಟರ್ ಮೆರವಣಿಗೆಯನ್ನು ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರ ಗುಂಪೊಂದು ಮಾರ್ಗ ಬದಲಾಯಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದ್ದು ಹಿಂಸಾಚಾರಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರು 22 ಪ್ರಕರಣಗಳನ್ನು ದಾಖಲಿಸಿದ್ದರು.
ಈ ವೇಳೆ ದೆಹಲಿಯ ಕೆಂಪುಕೋಟೆ ಬಳಿ ಸಿಖ್ ಧ್ವಜಹಾರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಾಗೂ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ರೈತರನ್ನು ಹೊಣೆಯಾಗಿ ಬಿಂಬಿಸಲಾಗಿತ್ತು. ಇಲ್ಲಿ ಸಿಖ್ ಧ್ವಜ ಹಾರಿಸಿದ ಪಂಜಾಬಿ ನಟ ದೀಪ್ ಸಿಧು ಕೇಂದ್ರದ ಆಡಳಿತ ಪಕ್ಷ ಬಿಜೆಪಿಯೊಂದಿಗೆ ಸಕಾರಾತ್ಮಕ ಸಂಬಂಧ ಹೊಂದಿರುವುದು, ಹಾಗೂ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಜೊತೆಗಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ದೆಹಲಿಯ ಪೊಲೀಸರು ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ 22 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಸಿಖ್ ಧ್ವಜ ಹಾರಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಸಿಧು ಹೆಸರು ದಾಖಲಾಗದೆ ಇರುವುದು ವಿರೋಧಕ್ಕೆ ಕಾರಣವಾಗಿತ್ತು. ಈ ಬಗ್ಗೆ ಜನವರಿ 27 ರಂದು ದೆಹಲಿಯ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಜನವರಿ 26 ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಪಂಜಾಬಿ ನಟ ದೀಪ್ ಸಿಧು ಮತ್ತು ಮಾಜಿ ಗ್ಯಾಂಗ್ ಲಖಾ ಸಿಧಾನ ಅವರ ಹೆಸರು ಸೇರಿಸಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.
ಗಣರಾಜೋತ್ಸವ ದಿನದಂದು ಕೆಲವು ರೈತ ಹೋರಾಟಗಾರರು ಟ್ರ್ಯಾಕ್ಟರ್ ಮೆರವಣಿಗೆಯ ವೇಳೆ ಮಾರ್ಗ ಬದಲಾವಣೆ ಮಾಡಿದ್ದಾರೆ, ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧವೇಕೆ ಕ್ರಮಕೈಗೊಳ್ಳಬಾರದೆಂದು ಜಿಲ್ಲಾ ಪೊಲೀಸ್ ಉಪಯುಕ್ತ ಚಿನ್ಮೋಯ್ ಬಿಸ್ವಾಲ್ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ನಾಯಕರಾದ ದರ್ಶನ್ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಹಾಗೂ ಮೂರು ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದೆಹಲಿಯ ಟ್ರ್ಯಾಕ್ಟರ್ ಮೆರವಣಿಗೆಗೆ ಸಂಬಂಧಿಸಿದಂತೆ ಈವರೆಗೂ 19 ಜನರನ್ನು ಬಂಧಿಸಲಾಗಿದೆ. ಮತ್ತು 25 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವಾಸ್ತವ ತಿಳಿಸಿದ್ದಾರೆಂದು ಎಎನ್ಐ ಬುಧವಾರ ವರದಿ ಮಾಡಿದೆ.