ದೆಹಲಿ ಪೊಲೀಸರು ಪರಿಸರ ಹೋರಾಟಗಾರ್ತಿ ಗ್ರೇಟ್ಟಾ ಥನ್ಬರ್ಗ್ ಅವರು ಮಾಡಿರುವ ಟ್ವೀಟ್ನಲ್ಲಿ ಉಲ್ಲೇಖಿಸಿರುವ ಟೂಲ್ಕಿಟ್ನ್ನು ರಚಿಸಿರುವ ಅಪರಿಚಿತ ವ್ಯಕ್ತಿಯ ವಿರುದ್ದ ಎಫ್. ಐ.ಆರ್ ದಾಖಲಿಸಿದ್ದಾರೆ.
ಹದಿನೆಂಟರ ಹರೆಯದ ಗ್ರೇಟ್ಟಾ ಬುಧವಾರ ಭಾರತದ ರೈತರ ಪ್ರತಿಭಟನೆಗೆ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ರೈತರೊಂದಿಗೆ ತಾನು ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿರುವ ಅವರು ರೈತರ ಪ್ರತಿಭಟನಾ ಸ್ಥಳದ ಸುತ್ತಮುತ್ತ ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸಿರುವುದರ ಕುರಿತು ಸಿಎನ್ಎನ್ನ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಪಾಪ್ ಗಾಯಕಿ ರಿಹಾನ ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಥನ್ಬರ್ಗ್ ಅವರೂ ಟ್ಟೀಟಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಥನ್ಬರ್ಗ್ ಅವರು ಟೂಲ್ಕಿಟ್ ಒಂದನ್ನು ಹಂಚಿಕೊಂಡಿದ್ದು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವವರು ಈ ಟೂಲ್ಕಿಟ್ ಮೂಲಕ ಸಹಾಯ ಮಾಡಬಹುದು ಎಂದಿದ್ದರು. ಆ ಟೂಲ್ಕಿಟ್ ಟ್ವಿಟರ್ ಮೂಲಕ ಪ್ರತಿಭಟನೆ ದಾಖಲಿಸುವುದು, ಭಾರತೀಯ ರಾಯಭಾರ ಕಛೇರಿಗಳ ಹೊರಗಡೆ ಶಾಂತಿಯುತವಾಗಿ ಪ್ರತಿಭಟಿಸುವುದು ಮತ್ತು ಅಂಬಾನಿ, ಅದಾನಿ ಕಾರ್ಪೊರೇಟ್ ಕಂಪೆನಿಗಳ ಹೊರಗೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದರ ಕುರಿತಾಗಿನ ದಾಖಲೆಯಾಗಿತ್ತು. ಈಗ ಈ ಟೂಲ್ಕಿಟ್ ರಚಿಸಿದವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ಕ್ರಿಮಿನಲ್ ಪಿತೂರಿ ಮತ್ತು ರೈತ ಚಳವಳಿಯ ನೆಪದಲ್ಲಿ ದ್ವೇಷ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ ಎಫ್.ಐ.ಆರ್ ಥನ್ಬರ್ಗ್ ಅವರ ಟೂಲ್ಕಿಟ್ನ್ನು ಉಲ್ಲೇಖಿಸಿದೆ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ಥನ್ಬರ್ಗ್ ರೈತರರಿಗೆ ಈ ಸುದ್ದಿಗಳಿಗೆ ಪ್ರತಿಕ್ರಿಯಿಸುತ್ತಾ “ನಾನು ಇನ್ನೂ ರೈತರೊಂದಿಗೆ ನಿಲ್ಲುತ್ತೇನೆ, ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ನನ್ನ ನಿಲುವನ್ನು ಬದಲಿಸದು” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಥನ್ಬರ್ಗ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದಾದಾಗ ಜಾಗತಿಕ ವಿರೋಧ ವ್ಯಕ್ತವಾದವು. ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್ ಗುರುವಾರ ಸಂಜೆ ಎಫ್ಐಆರ್ “ಟೂಲ್ಕಿಟ್ ಸೃಷ್ಟಿಕರ್ತರಿಗೆ” ವಿರುದ್ಧವಾಗಿದೆ ಮತ್ತು ಗ್ರೇಟಾ ಥನ್ಬರ್ಗ್ ಅವರ ಹೆಸರನ್ನು ಹೊಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಬುಧವಾರ, ವಿದೇಶಾಂಗ ಸಚಿವಾಲಯವು (ಎಂಇಎ) ರೈತರ ಪ್ರತಿಭಟನೆಗೆ ದೊರೆತಿರುವ ಅಂತರರಾಷ್ಟ್ರೀಯ ಗಮನಕ್ಕೆ ಪ್ರತಿಕ್ರಿಯಿಸುತ್ತಾ, ಮುಖ್ಯವಾಗಿ ರಿಹಾನ್ನಾ ಮತ್ತು ಥನ್ಬರ್ಗ್ ಅವರ ಟ್ವೀಟ್ಗಳಿಗೆ ಪ್ರತಿಕ್ರಿಯಿಸುತ್ತಾ, ‘ಸಂವೇದನಾಶೀಲ’ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಜವಾಬ್ದಾರಿಯಿತವಾಗಿರುವುದಿಲ್ಲ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. #IndiaTogether ಮತ್ತು #IndiaAgainstPropaganda ಎಂಬ ಹ್ಯಾಶ್ಟ್ಯಾಗ್ಗಳನ್ನು ತನ್ನ ಹೇಳಿಕೆಗೆ ಬಳಸಿಕೊಂಡಿದೆ.
ಥನ್ಬರ್ಗ್ ಹಂಚಿಕೊಂಡ ಟೂಲ್ಕಿಟ್ ಅಲ್ಲಿ ಏನೇನಿದೆ?
ಥನ್ಬರ್ಗ್ ಹಂಚಿಕೊಂಡಿರುವ ಟೂಲ್ಕಿಟ್ ಹಿಡಿದುಕೊಂಡೇ, ಅಂತರಾಷ್ಟ್ರೀಯ ಷಡ್ಯಂತ್ರ ಇದೆ ಎಂದು ಸರ್ಕಾರದ ಪರ ಇರುವ ಮಾಧ್ಯಮ ಸಂಸ್ಥೆಗಳು ಸುದ್ದಿ ಮಾಡುತ್ತಿವೆ.
ಆದರೆ, ಈ ಟೂಲ್ಕಿಟ್ನಲ್ಲಿ ಚಳುವಳಿಯನ್ನು ಹೇಗೆ ಬೆಂಬಲಿಸಬಹುದು ಎಂಬ ಮಾಹಿತಿ ಹಾಗೂ ಪ್ರತಿಭಟನೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು, ಹೇಗೆ ಮತ್ತು ಎಲ್ಲಿ ಪ್ರತಿಭಟಿಸಿದರೆ ನೇರವಾಗಿ ಸರ್ಕಾರದ ಗಮನಕ್ಕೆ ಬರುತ್ತದೆ ಎಂಬ ಉದ್ದೇಶದಿಂದ ಈ ಟೂಲ್ಕಿಟ್ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಳವಳಿಯ ಟೈಂ ಟೇಬಲ್, ಬಳಸಲಾಗುವ ಹ್ಯಾಶ್ ಟ್ಯಾಗ್ ಗಳು, ಚಳವಳಿಯ ಉದ್ದೇಶ ಎಲ್ಲವೂ ಈ ಟೂಲ್ ಕಿಟ್ ನಲ್ಲಿ ಇದೆ. ಈ ಟೂಲ್ಕಿಟ್ ನಲ್ಲಿ ಚಳವಳಿಗೆ ಹೇಗೆ ಸಪೋರ್ಟ್ ಮಾಡಬಹುದು, ಬೇರೆ ದೇಶಗಳಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಅಥವಾ ಸಂಘಟಿಸುವ ಕುರಿತು ಮನವಿ ಇದೆ. ವಿಶೇಷವಾಗಿ ಭಾರತೀಯ ರಾಯಭಾರಿ ಕಚೇರಿಗಳ ಮುಂದೆ ಪ್ರತಿಭಟಿಸುವ ವಿಷಯವಿದೆ.