ದೆಹಲಿಯಲ್ಲಿ ಜ26 ಗಣರಾಜೋತ್ಸವ ನಡೆಸದ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ ನಡೆದಿದೆ. ರೈತರ ಟ್ರ್ಯಾಕ್ಟರ್ ಮೆರವಣಿಗೆಗೆ ಸಂಬಂಧಿಸಿದಂತೆ ಹಿಂಸಾಚಾರದ ಮೇಲೆ – ಈ ಘಟನೆಗೆ ಸಂಬಂಧಿಸಿದಂತೆ 22 ಎಫ್‌ಐಆರ್ ದಾಖಲು ಮಾಡಲಾಗಿದೆ ಮತ್ತು 100 ಪೊಲೀಸರು ಗಾಯಗೊಂಡಿದ್ದಾರೆಂದು ದೆಹಲಿಯ ಹೆಚ್ಚುವರಿ ಪೊಲೀಸ್ ಪಿಆರ್‌ಒ ಅನಿಲ್ ಮಿತ್ತಲ್ ತಿಳಿಸಿದ್ದಾರೆ.
ಜನವರಿ26 ಗಣರಾಜೋತ್ಸವ ದಿನದಂದು ದೆಹಲಿಯ ಗಡಿಭಾಗಗಳಲ್ಲಿ ರೈತರು 8 ಗಂಟೆಯ ಸುಮಾರಿಗೆ ಟ್ರ್ಯಾಕ್ಟರ್ ಮೆರವಣಿಗೆಯನ್ನು ಆರಂಭಿಸಿದ್ದಾರೆ. ಮೆರವಣಿಗೆಯ ವೇಳೆ ರೈತರ ಒಂದು ಗುಂಪು ಮಾರ್ಗವನ್ನು ಬದಲಾಯಿಸಿದ್ದು, ಗೊಂದಲಕ್ಕೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ನಿಗದಿತ ಸಮಯಕ್ಕಿಂತ ಮುಂಚೆಯೇ ರೈತರು ಹೋರಾಟವನ್ನು ನಡೆಸಿದ್ದು, ದೆಹಲಿಯ ಗಡಿಭಾಗಗಳಲ್ಲಿ ಜನಸಂದಣಿ ಅಧಿಕವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಮಾಡಿದ್ದರು. ಈ ಸಂದರ್ಭದಲ್ಲಿ 8 ಬಸ್‌ಗಳು ಮತ್ತು 17 ಖಾಸಗಿ ವಾಹನಗಳನ್ನು ಪ್ರತಿಭಟನಾಕಾರರ ಒಂದು ಗುಂಪು ಧ್ವಂಸ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿಯ ಚೌಕ್, ಗಾಝೀಪುರ, ಐಟಿಒ, ಸೀಮಾಪುರಿ, ನಂಗ್ಲೋಯಿ, ಟೀ ಪಾಯಿಂಟ್, ಟಿಕ್ರಿ ಸಿಂಘು ಗಡಿ ಭಾಗಗಳಲ್ಲಿ, ಮತ್ತು ಕೆಂಪುಕೋಟೆಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ನಿಯಂತ್ರಿಸಲು ಹೋದ 80ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಟಿಕ್ರಿ, ಸಿಂಘು, ಗಾಝೀಪುರ, ಸಿಂಘು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯಲಾಗಿದೆ ಎಂದು ತಿಳಿಸಿದ್ದಾರೆ.
ಜನವರಿ26 ರ ಟ್ರ್ಯಾಕ್ಟರ್ ಮೆರವಣಿಗೆ ಕುರಿತು ಪೊಲೀಸರು ಮತ್ತು ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಸಭೆ ನಡೆಸಲಾಗಿತ್ತು. ಈ ವೇಳೆ ಶಾಂತಿಯುತ ಪ್ರತಿಭಟನೆಗೆ ರೈತರು ಒಪ್ಪಿದ್ದರು. ಆದರೆ ನಿಗದಿತ ಸಮಯಕ್ಕಿಂತ ಮುಂಚೆಯೇ ಮೆರವಣಿಗೆ ಆರಂಭಿಸಿ, ಮಾರ್ಗ ಬದಲಾಯಿಸಿದ್ದಾರೆಂದು ಪೊಲೀಸ್ ಇಲಾಖೆ ಹೇಳಿದೆ.
ಬೆಳಿಗ್ಗೆ 8.30 ರ ಸುಮಾರಿಗೆ 6 ರಿಂದ 7 ಸಾವಿರ ಟ್ರ್ಯಾಕ್ಟರ್‌ಗಳು ಸಿಂಘು ಗಡಿಯಲ್ಲಿ ಬೀಡುಬಿಟ್ಟಿದ್ದವು, ನಂತರ ನವದೆಹಲಿಯ ಸುತ್ತ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ್ದಾರೆ. ನಂತರ ದೆಹಲಿಯ ಕೆಂಪುಕೋಟೆಯನ್ನು ಮುತ್ತಿ, ಕೋಟೆಯ ಗುಮ್ಮಟಗಳ ಮೇಲೆ ಹತ್ತಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದಾರೆ. ಕಾನೂನುಬದ್ಧ ನಿರ್ದೇಶನಗಳ ಉಲ್ಲಂಘನೆ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ಮಾರಕ ಆಯುಧಗಳಿಂದ ಹಲ್ಲೆ ಆರೋಪದಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆಯ ಸಂಧರ್ಭದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸರೇ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠೀ, ಆಶ್ರುವಾಯು, ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡಿನ ದಾಳಿ ನಡೆಸುವ ವೇಳೆ ಟ್ರಾಕ್ಟರ್ ಒಂದು ಮಗುಚಿದ್ದು, ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಪ್ರತಿಭಟನಾಕಾರರೊಬ್ಬರು ಮೃತಪಟ್ಟಿದ್ದಾರೆ. ಶಾಂತಿಯುತ ಪ್ರತಿಭಟನೆಯ ದಿಕ್ಕು ತಪ್ಪಿಸಲು ಸಾಮಾಜಿಕ ವಿರೋಧಿ ಶಕ್ತಿಗಳು ಚಳವಳಿಯಲ್ಲಿ ನುಸುಳಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಕೃಷಿಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ 60 ಕ್ಕೂ ಹೆಚ್ಚು ದಿನಗಳ ಕಾಲ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ಮತ್ತು ರೈತರ ನಡುವೆ 10 ಕ್ಕೂ ಹೆಚ್ಚು ಬಾರಿ ಸಭೆ ನಡೆದರು ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಅದಾಗ್ಯೂ ಪ್ರತಿಭಟನೆಯನ್ನು ಇನ್ನು ಮುಂದುವರೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ತಿಳಿಸಿದ್ದಾರೆ.