ಗೋವು ಮತ್ತು ಅದರ ಸಂತತಿಯ ಪ್ರಾಣಿಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ ಎಂದು ಮಂಗಳವಾರ (ಆಗಸ್ಟ್ 1) ವರದಿಯಾಗಿದೆ.
ಗೋ ಹತ್ಯೆ ನಿಷೇಧ ಸಂಬಂಧ ಸಂಬಂಧಿತ ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಬೃಹ್ಮನ್ ವರ್ಮಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ದೆಹಲಿಯಲ್ಲಿ ಗೋಹತ್ಯೆಗೆ ನಿಷೇಧ ಹೇರಿರುವ ಕಾನೂನನ್ನು ಇಲ್ಲಿನ ಸರ್ಕಾರ ಜಾರಿಗೆ ತಂದಿದೆ ಎಂದು ಪೀಠ ಉಲ್ಲೇಖಿಸಿತು.
ಇತರ ರಾಜ್ಯಗಳಿಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಅರ್ಜಿದಾರರಿಗೆ ಸ್ವಾತಂತ್ರ್ಯ ಇದೆ. ನಿರ್ದಿಷ್ಟ ಕಾನೂನು ಜಾರಿಗೆ ತರುವಂತೆ ಶಾಸಕಾಂಗಕ್ಕೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
“ಇಂಥ ತೀರ್ಮಾನಗಳನ್ನು ಶಾಸಕಾಂಗ ಮಾತ್ರ ತೆಗೆದುಕೊಳ್ಳಬಹುದು. ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಸೇರಿದಂತೆ ಯಾವುದೇ ನ್ಯಾಯಾಲಯ ನಿರ್ದಿಷ್ಟ ಕಾನೂನು ರೂಪಿಸಲು ಶಾಸಕಾಂಗವನ್ನು ಒತ್ತಾಯಿಸಲು ಸಾಧ್ಯವಿಲ್ಲ, ಅಂತಿಮವಾಗಿ ಶಾಸಕಾಂಗವನ್ನು ಸಂಪರ್ಕಿಸಲು ಪ್ರಕರಣದ ಮೇಲ್ಮನವಿದಾರರಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿದೆ” ಎಂದು ದೆಹಲಿ ಹೈಕೋರ್ಟ್ ಪೀಠ ಕಳೆದ ವಾರ ಹೊರಡಿಸಿದ ಆದೇಶದಲ್ಲಿ ಹೇಳಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಚಲಿಸುವ ರೈಲಿನ ಮೇಲೆ ಗುಂಡು ಹಾರಿಸಿ ಹಿರಿಯ ಅಧಿಕಾರಿ ಸೇರಿ ನಾಲ್ವರ ಹತ್ಯೆಗೈದ ಆರ್ಪಿಎಫ್ ಪೇದೆ
ಅರುಣಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಈ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಹೊರತುಪಡಿಸಿ, ಉಳಿದೆಡೆ ಗೋವು ಮತ್ತು ಅದರ ಸಂತತಿಯ ಹತ್ಯೆ ನಿರ್ಬಂಧಿಸಲು, ನಿಷೇಧಿಸಲು ಕಾನೂನುಗಳು ಜಾರಿಯಲ್ಲಿವೆ ಎಂಬುದನ್ನು ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ವಕೀಲೆ ಮೋನಿಕಾ ಅರೋರಾ ಅವರು ಪೀಠದ ಗಮನಕ್ಕೆ ತಂದರು.
ದೆಹಲಿ ಹೈಕೋರ್ಟ್ ಪೀಠದ ಮುಂದೆ ದೆಹಲಿ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ಸಂತೋಷ್ ಕುಮಾರ್ ತ್ರಿಪಾಠಿ, ದೆಹಲಿಯಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಕಾನೂನು ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.