ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್‌ಗೆ ಲಿಖಿತ ಕ್ಷಮೆಯಾಚಿಸುವಂತೆ ದೆಹಲಿ ನ್ಯಾಯಾಲಯವು ಗುರುವಾರ ಸಿಬಿಐ ನಿರ್ದೇಶಕರಿಗೆ ಆದೇಶಿಸಿದೆ. ಆದೇಶವನ್ನು ಜಾರಿಗೊಳಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್, ಕ್ಷಮೆಯಾಚನೆಯು ಸಿಬಿಐ ಮೇಲೆ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸವನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದ್ದಾರೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ ಉಲ್ಲಂಘನೆಗಾಗಿ ಆಕಾರ್ ಪಟೇಲ್ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆ (LOC) ಅನ್ನು ಹಿಂಪಡೆಯಲು ನ್ಯಾಯಾಲಯವು ಸಿಬಿಐಗೆ ಆದೇಶ ನೀಡಿದೆ. ಏಪ್ರಿಲ್ 6 ರಂದು, ಆಕಾರ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ ವಿಮಾನ ಹತ್ತುವಾಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲ್ಪಟ್ಟಿದ್ದರು.
ಏಪ್ರಿಲ್ 30 ರೊಳಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ನಿರ್ದೇಶಿಸಿದ್ದು, ಹಣಕಾಸಿನ ನಷ್ಟದ ಹೊರತಾಗಿ, ನಿಗದಿತ ಸಮಯದಲ್ಲಿ ಯೋಜಿತ ಕಾರ್ಯಕ್ರಮಗಳಿಗೆ ಭೇಟಿ ನೀಡಲು ಅವಕಾಶ ನೀಡದ ಕಾರಣ ಅರ್ಜಿದಾರರು ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
“ಅರ್ಜಿದಾರರು ವಿತ್ತೀಯ ಪರಿಹಾರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಈ ಪ್ರಕರಣದಲ್ಲಿ ಸಿಬಿಐ ಮುಖ್ಯಸ್ಥರು ಅಂದರೆ ಸಿಬಿಐ ನಿರ್ದೇಶಕರು ತಮ್ಮ ಅಧೀನ ಅಧಿಕಾರಿಯ ಲೋಪವನ್ನು ಅಂಗೀಕರಿಸಿ ಲಿಖಿತವಾಗಿ ಕ್ಷಮೆಯಾಚಿಸುವುದು, ಅರ್ಜಿದಾರರಿಗೆ ಆದ ನೋವನ್ನು ವಾಸಿಮಾಡುವುದು ಎಂದು ಈ ನ್ಯಾಯಾಲಯವು ಪರಿಗಣಿಸಿದೆ. ಮಾತ್ರವಲ್ಲದೆ, ಈ ಕ್ಷಮಾಪಣೆಯು (ಸಿಬಿಐ) ಸಂಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸವನ್ನು ಎತ್ತಿಹಿಡಿಯುತ್ತದೆ, ನ್ಯಾಯಾಧೀಶರು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಆಕಾರ್ ಪಟೇಲ್ ಅವರು ಈ ಹಿಂದೆಯೇ ತನಿಖೆಗೆ ಸ್ಪಂದಿಸಿದ್ದರು. ತನಿಖೆಗೆ ಹಾಜರಾಗಲು ಅವರ ವಿರುದ್ಧ ಯಾವುದೇ ವಾರಂಟ್ ಹೊರಡಿಸಲಾಗಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಅವರು ಭಾರತವನ್ನು ತೊರೆಯುವ ಪ್ರಯತ್ನವನ್ನು ತಡೆಯಲು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ ಎಂಬ CBI ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ತನಿಖಾ ಸಂಸ್ಥೆಯ ಕಲ್ಪನೆಗಳಿಂದ ಉಂಟಾಗುವ ಆತಂಕಗಳ ಆಧಾರದ ಮೇಲೆ ಲುಕ್ ಔಟ್ ನೋಟಿಸ್ ಅನ್ನು ನೀಡಬಾರದು” ಎಂದು ಹೇಳಿದ್ದಾರೆ.
“ಎಲ್‌ಒಸಿ ನೀಡುವ ಮೊದಲು, ಬಾಧಿತ ವ್ಯಕ್ತಿಯ ಹಕ್ಕುಗಳ ಮೇಲೆ ಪರಿಣಾಮಗಳನ್ನು ಮುಂಗಾಣಬೇಕಿತ್ತು. ಕಾನೂನಿನಿಂದ ಸ್ಥಾಪಿಸಲಾದ ಯಾವುದೇ ಕಾರ್ಯವಿಧಾನವಿಲ್ಲದೆ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗುವುದಿಲ್ಲ, ”ಎಂದು ನ್ಯಾಯಾಧೀಶರು ಗಮನಿಸಿದರು. ಲುಕ್‌ಔಟ್ ನೋಟಿಸ್ ನೀಡಿದ್ದರಿಂದ ಆಕಾರ್‌ಗೆ ಸುಮಾರು 3.8 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
“ಹಣಕಾಸಿನ ನಷ್ಟದ ಹೊರತಾಗಿ, ನಿಗದಿತ ಸಮಯದಲ್ಲಿ ಮೊದಲೇ ನಿರ್ಧರಿಸಿದ್ದ ಕಾರ್ಯಕ್ರಮಕ್ಕೆ ಭೇಟಿ ನೀಡಲು ಅವಕಾಶ ನೀಡದ ಕಾರಣ ಅರ್ಜಿದಾರರು (ಆಕಾರ್) ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾರೆ” ಎಂದು ನ್ಯಾಯಾಲಯವು ಹೇಳಿದೆ.
ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಆಕಾರ್ ಪರ ವಕೀಲ ತನ್ವೀರ್ ಅಹ್ಮದ್ ಮಿರ್, “ಗೌರವಾನ್ವಿತ ನ್ಯಾಯಾಧೀಶರು ಆಕಾರ್ ಪಟೇಲ್ ಅವರಿಗೆ ಲಿಖಿತ ಕ್ಷಮೆಯಾಚಿಸಲು ಸಿಬಿಐ ನಿರ್ದೇಶಕರಿಗೆ ಸೂಚಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಮತ್ತು ಸಿಬಿಐ ಇತಿಹಾಸದಲ್ಲಿ ಇದು ಮೊದಲು. ಈ ಆದೇಶವು ಕಾನೂನು ಜಾರಿ ಸಂಸ್ಥೆಗಳಿಗೆ ಬಲವಾದ ಸಂದೇಶವನ್ನು ಕಳುಹಿಸುತ್ತದೆ ಮತ್ತು ಕಾನೂನು ಸಂಸ್ಥೆಗಳಲ್ಲಿ ಸಾಮಾನ್ಯ ಜನರ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ” ಎಂದು ಹೇಳಿದ್ದಾರೆ.