ಕೃಷಿಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನಲೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಿರತ್‌ನ ಕಿಸಾನ್ ಪಂಚಾಯತ್‌ನಲ್ಲಿ ಭಾಗವಹಿಸಿ ರೈತರನ್ನುದ್ದೇಶಿಸಿ ಮಾತನಾಡಿದ್ದಾರೆ.
ರೈತರ ಸಮಸ್ಯೆಗಳ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಅಸಹ್ಯದ ಧೋರಣೆಯನ್ನು ತೋರುತ್ತಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿ ಮಾಡುವುದರ ಬಗ್ಗೆ ಬಿಜೆಪಿ ನಾಯಕರು ಸುಳ್ಳು ನುಡಿಯುತ್ತಿದ್ದಾರೆಂದು ಮೋದಿ ಸರ್ಕಾರದ ವಿರುದ್ಧ ನೇರ ವಾಗ್ಧಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರಮೋದಿಯವರು ಇತೀಚೆಗೆ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ “ಎಂಎಸ್‌ಪಿ ಹಿಂದೆಯೂ ಇತ್ತು, ಎಂಎಸ್‌ಪಿ ಈಗಲೂ ಇದೆ, ಭವಿಷ್ಯದಲ್ಲಿಯೂ ಉಳಿಯುತ್ತದೆ ಎಂದು ಕನಿಷ್ಠ ಬೆಂಬಲ ಬೆಲೆ ಉಳಿವಿನ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೆ ಉತ್ತರಪ್ರದೇಶದ ರೈತರಿಗೆ ಎಂಎಸ್‌ಸ್ಪಿ ಸೌಲಭ್ಯ ಎಲ್ಲಿ ಒದಗಿಸಲಾಗಿದೆ..? ಎಂದು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಶ್ನೆಮಾಡಿದ್ದಾರೆ. ಮೂರು ಕೃಷಿಕಾಯ್ದೆಗಳ ವಿರುದ್ಧ ರೈತರು ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ನಾಯಕರು ಮುಂದಾಗಿದ್ದಾರೆಂದು ಆಕ್ರೋಶಗೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಕಬ್ಬಿನ ಕೃಷಿಕರು ಬಾಕಿ ಹಣವನ್ನು ಪಡೆಯದೆ ಎರಡು ವರ್ಷಗಳಾಗಿದೆ. ಜೊತೆಗೆ ಸಕ್ಕರೆ ಕಾರ್ಖಾನೆಯ ಮಾಲೀಕರ ಸಮಸ್ಯೆಯನ್ನು ಬಗೆಹರಿಸಿಲ್ಲ ಈ ವಿಚಾರದ ತೀರ್ಮಾನದಲ್ಲಿ ಅಸಮರ್ಥರಾಗಿದ್ದರೆ ನಿಮ್ಮ ಸರ್ಕಾರಕ್ಕೆ ಅವಮಾನವಾದಂತೆ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ.

ಕೇಂದ್ರದ ಕೃಷಿಕಾಯ್ದೆಗಳು ರೈತರಿಗೆ ಡೆತ್ ವಾರೆಂಟ್ ಇದ್ದ ಹಾಗೆ ಈ ಕಾಯ್ದೆಗಳಿಂದ ರೈತರ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತದೆ. ತಮ್ಮ ಜಮೀನಿನಲ್ಲಿ ತಾವೇ ಕಾರ್ಮಿಕರಾಗುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಈ ಮೂಲಕ ರೈತ ಸಂಕಷ್ಟದ ಸ್ಥಿತಿಗೆ ಒಳಗಾಗಿದ್ದಾನೆ. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿಯೂ ರೈತರ ವಿಚಾರದಲ್ಲಿ ಇಷ್ಟೊಂದು ಧೋರಣೆ ತಾಳಿರಲಿಲ್ಲ, ಆದರೆ ಕೇಂದ್ರದ ಎನ್‌ಡಿಎ ಸರ್ಕಾರ ಅದಕ್ಕೂ ಹೆಚ್ಚು ಧೋರಣೆ ತಾಳುತ್ತಿದ್ದು, ಬ್ರಿಟೀಷರಿಗಿಂತ ಕಡೆ ಎಂದಿದ್ದಾರೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳದ ಬಗ್ಗೆಯೂ ಪ್ರಸ್ತಾಪಿಸುವುದರ ಮೂಲಕ ಪೆಟ್ರೋಲ್,ಡಿಸೇಲ್ ಬೆಲೆಯನ್ನು ಕಡಿಮೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.
ರೈತರ ಪ್ರತಿಭಟನೆ ಇದೊಂದು ರಾಷ್ಟ್ರೀಯ ಚಳವಳಿ ಮತ್ತು ಶುದ್ಧ ಚಳವಳಿ ಎಂದ ಅವರು ಇಲ್ಲಿ ನನಗೆ ಯಾವುದೇ ರೀತಿಯ ಸಹಾಯ ಮಾಡಲಾಗುತ್ತಿಲ್ಲ, ಸರ್ಕಾರವು ಅಂತಿಮವಾಗಿ ರೈತರ ಮುಂದೆ ತಲೆಬಾಗಬೇಕಾಗುತ್ತದೆ ಎಂದು ಕಿಸಾನ್ ಮಹಾಪಂಚಾಯತ್‌ನಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.