ಸ್ವತಂತ್ರ ಭಾರತ ಹಿಂದೆಂದೂ ಕಂಡರಿಯದ ಆಂದೋಲನಕ್ಕೆ ಕಾರಣವಾಗಿದ್ದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಸರ್ಕಾರದ ಭರವಸೆಯ ಬಳಿಕವೂ ಪ್ರತಿಭಟನಾ ನಿರತ ರೈತ ಮುಖಂಡರು ಹೊರಾಟವನ್ನು ಸದ್ಯಕ್ಕೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.
“ಸಂಸತ್ತಿನಲ್ಲಿ ಈ ಕಾನೂನುಗಳು ಅಧಿಕೃತವಾಗಿ ವಾಪಸ್ ಪಡೆಯಬೇಕು. ಅದು ಆದಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ರೈತ ಆಂದೋಲನಕ್ಕೆ ಐತಿಹಾಸಿಕ ಗೆಲುವು ಲಭಿಸಲಿದೆ. ಈ ಹೋರಾಟದಲ್ಲಿ 700ಕ್ಕು ಹೆಚ್ಚು ರೈತರ ಹುತಾತ್ಮರಾಗಿದ್ದಾರೆ. ಲಖೀಂಪುರ ಖಿರಿ ಹತ್ಯಾಕಾಂಡ ಸೇರಿದಂತೆ ಹಲವು ಹಿಂಸಾಚಾರಗಳನ್ನು ಸರ್ಕಾರ ತಪ್ಪಿಸಬಹುದುತ್ತು. ಆದರೆ, ಸರ್ಕಾರದ ಹಠಕ್ಕೆ ರೈತರು ಹುತಾತ್ಮರಾಗಿದ್ದಾರೆ,” ಎಂದು ರೈತ ಮುಖಂಡರು ಹೇಳಿದ್ದಾರೆ.
ರೈತ ಆಂದೋಲನವು ಕೇವಲ ಕೃಷಿ ಕಾಯ್ದೆಗಳ ವಾಪಸಾತಿಗೆ ನಡೆಸಿದ ಹೋರಾಟವಲ್ಲ. ಎಂ ಎಸ್ ಪಿಗೆ ಕಾನೂನಿನ ಮಾನ್ಯತೆ ನೀಡುವುದು ಹಾಗೂ ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕೂ ಈ ಹೋರಾಟವನ್ನು ನಡೆಸಲಾಗಿತ್ತು. ಈ ಬೇಡಿಕೆಗಳು ಇನ್ನೂ ಬಾಕಿಯಿವೆ. ಸಂಯುಕ್ತ ಕಿಸಾನ್ ಮೋರ್ಚಾ ಈ ಕುರಿತಾಗಿ ಶೀಘ್ರವೇ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದೆ, ಎಂದು ಹೇಳಿದ್ದಾರೆ.

ಬಲ್ಬೀರ್ ಸಿಂಗ್ ರಾಜೇವಾಲ್, ಡಾ. ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಧುನಿ, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್ ಸೇರಿದಂತೆ ಇತರ ನಾಯಕರು ಜಂಟಿಯಾಗಿ ಈ ಹೇಳಿಕೆಯನ್ನು ನಿಡಿದ್ದಾರೆ.
ಪ್ರಧಾನಿ ಮನವಿಗೆ ಸ್ಪಂದಿಸುವುದಿಲ್ಲ- ರಾಕೇಶ್ ಟಿಕಾಯತ್
“ಸಂಸತ್ತಿನಲ್ಲಿ ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ಆಂದೋಲನ ಮುಂದುವರೆಯುತ್ತದೆ.MSP ಖಾತ್ರಿ ಕಾಯಿದೆ ಜಾರಿಗೆ ಬರಲೇಬೇಕು. ರೈತ ಹೋರಾಟದಲ್ಲಿ ಸಾವನ್ನಪ್ಪಿದ 750 ರೈತರಿಗೆ ಈ ವಿಜಯವನ್ನು ಸಮರ್ಪಿಸುತ್ತಿದ್ದೇವೆ. ಇದರೊಂದಿಗೆ ರೈತ ಹೋರಾಟದಲ್ಲಿ ಭಾಗಿಯಾದ ಆದಿವಾಸಿಗಳು, ಕಾರ್ಮಿಕರು ಹಾಗೂ ಮಹಿಳೆಯರಿಗೆ ಈ ವಿಜಯದ ಸಮರ್ಪಣೆ,” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಮುಂದುವರೆದು, ಇದೊಂದು ಚುನಾವಣಾ ಗಿಮಿಕ್ ರೀತಿ ಕಾಣಿಸುತ್ತದೆ. ನರೇಂದ್ರ ಮೋದಿ ಸರ್ಕಾರದ ವರ್ಚಸ್ಸು ಕುಂದುದೆ, ಅದನ್ನು ಉತ್ತಮಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಪೊರೇಟ್ ಕಂಪೆನಿಗಳ ಹಿತಕ್ಕಾಗಿ ಮಾತ್ರ ಇರುವಂತಹ ಸರ್ಕಾರ ಅವರಿಗೆ ಬೇಕಾದ ಕೆಲಸಗಳನ್ನು ಮಾತ್ರ ಮಾಡುತ್ತದೆ. ಸದ್ಯಕ್ಕೆ ಪ್ರಧಾನಿ ಘೋಷಣೆಗೆ ಸ್ಪಂದಿಸುವುದಿಲ್ಲ, ಎಂದಿದ್ದಾರೆ.












