ಬೆಂಗಳೂರು: ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಬಲಿಯಾಗುವ ಮೂಲಕ ಗಣ್ಯಾತಿಗಣ್ಯರು ವಿಮಾನ, ಹೆಲಿಕ್ಯಾಪ್ಟರ್ ನಲ್ಲಿ ಸಾವನ್ನಪ್ಪುವ ಪಟ್ಟಿಗೆ ಮತ್ತೊಂದು ಘಟನೆ ಸೇರಿದಂತಾಗಿದೆ.

ಇಂದು ಬೆಳಗ್ಗೆಯಷ್ಟೇ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಚುನಾವಣಾ ಪ್ರಚಾರಕ್ಕೆ ಹೋಗುವಾಗ ವಿಮಾನ ಪತನವಾಗಿ ಮೃತಪಟ್ಟಿದ್ದಾರೆ. ಇದೇ ರೀತಿ ದೇಶದ ಅನೇಕ ಗಣ್ಯರು ಅಸುನೀಗಿದ್ದಾರೆ. ಅದರ ಪಟ್ಟಿ ಇಲ್ಲಿದೆ.

1. 1980ರಲ್ಲಿ ದಿ.ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ವಿಮಾನದಲ್ಲಿ ಏರ್ ಸ್ಟಂಟ್ ಮಾಡುವಾಗ ದೆಹಲಿಯ ಸಫ್ದರ್ಜಂಗ್ ಏರ್ ಪೋರ್ಟ್ ಸಮೀಪದ ಫ್ಲೈಯಿಂಗ್ ಕ್ಲಬ್ ಏರ್ ಕ್ರಾಪ್ಟ್ ಬಳಿ ವಿಮಾನ ಪತನವಾಗಿ ಸಾವನ್ನಪ್ಪಿದ್ದರು.

2. 2002ರಲ್ಲಿ ಲೋಕಸಭೆ ಸ್ಪೀಕರ್ ಆಗಿದ್ದ ಬಾಲಯೋಗಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಬಾಲಯೋಗಿ ಪೂರ್ವ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಧಾರ್ಮಿಕ ಸಭೆಗೆ ಹೋಗಿದ್ದರು ಮತ್ತು ರೈಲಿನಲ್ಲಿ ಸಿಕಂದರಾಬಾದ್ಗೆ ಹಿಂತಿರುಗಬೇಕಿತ್ತು, ಆದರೆ ಕೊನೆಯ ಕ್ಷಣದಲ್ಲಿ ವಿಮಾನದಲ್ಲಿ ಹೊರಟು ಪ್ರಾಣ ಕಳೆದುಕೊಂಡಿದ್ದರು.

03. 2005ರಲ್ಲಿ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಕೈಗಾರಿಕೋದ್ಯಮಿ ಮತ್ತು ಹರಿಯಾಣ ಸಚಿವ ಓಂ ಪ್ರಕಾಶ್ ಜಿಂದಾಲ್ ನಿಧನರಾದರು. ಈ ಅಪಘಾತದಲ್ಲಿ ಹರಿಯಾಣ ಕೃಷಿ ಸಚಿವ ಸುರೇಂದರ್ ಸಿಂಗ್ ಮತ್ತು ಪೈಲಟ್ ಕೂಡ ಸಾವನ್ನಪ್ಪಿದರು.

4. 2009ರಲ್ಲಿ ಆಂಧ್ರದ ಸಿಎಂ ಆಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕಾಣೆಯಾಯಿತು. ನಂತರ ಅದು ಪತನಗೊಂಡು ರೆಡ್ಡಿ ಸೇರಿದಂತೆ ಎಲ್ಲಾ ಐದು ಜನರು ಸಾವನ್ನಪ್ಪಿದ್ದು.

5. 2025ರಲ್ಲಿ ಗುಜರಾತ್ ಮಾಜಿ ಸಿಎಂ ಆಗಿದ್ದ ವಿಜಯ್ ರೂಪಾನಿ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ರೂಪಾನಿ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಫ್ಲೈಟ್ AI-171, ಬೋಯಿಂಗ್ 787 ಡ್ರೀಮ್ಲೈನರ್ನಲ್ಲಿ ಪ್ರಯಾಣಿಸುತ್ತಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಯಿತು.

6. ಸೆಪ್ಟೆಂಬರ್ 30, 2001 ರಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಮಾಧವರಾವ್ ಸಿಂಧಿಯಾ ರಾಜಕೀಯ ರ್ಯಾಲಿಗೆ ಹೋಗುವಾಗ 10 ಆಸನಗಳ ವಿಮಾನ ಉತ್ತರ ಪ್ರದೇಶದ ಮಣಿಪುರಿ ಬಳಿ ಪ್ರತಿಕೂಲ ಹವಾಮಾನದಿಂದಾಗಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.

7. 2021ರಲ್ಲಿ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ, ಸಹಾಯಕರು ಪ್ರಯಾಣಿಸುತ್ತಿದ್ದ ಇಂಡಿಯನ್ ಏರ್ ಪೋರ್ಸ್ ನ Mi-17 V5 ಹೆಲಿಕಾಪ್ಟರ್ ಕೊಯಮತ್ತೂರಿನ ಸುಲೂರ್ ವಾಯುಪಡೆಯ ನೆಲೆಯಿಂದ ಟೇಕ್ ಆಫ್ ಆದ ನಂತರ ನೀಲಗಿರಿ ಜಿಲ್ಲೆಯ ಕಾಡಿನಲ್ಲಿ ಬೆಟ್ಟಗಳಿಗೆ ಅಪ್ಪಳಿಸಿತು. ಇದರಿಂದ ರಾವತ್ ಸೇರಿ 11 ಜನರು ಮೃತಪಟ್ಟಿದ್ದರು.

8. 2004ರಲ್ಲಿ ಸಿನಿಮಾ ನಟಿ ಸೌಂದರ್ಯ@ ಸೌಮ್ಯ, ಬಿಜೆಪಿ ಪರ ರಾಜಕೀಯ ಪ್ರಚಾರಕ್ಕಾಗಿ ತನ್ನ ಸಹೋದರ ಅಮರನಾಥ್ ಅವರೊಂದಿಗೆ ಬೆಂಗಳೂರಿನಿಂದ ಕರೀಂನಗರಕ್ಕೆ ಪ್ರಯಾಣಿಸುತ್ತಿದ್ದಾಗ ಜಕ್ಕೂರು ಬಳಿ ಹೆಲಿಕಾಪ್ಟರ್ ಪತನಗೊಂಡು ಸೌಂದರ್ಯ ಸೇರಿ ನಾಲ್ವರು ಸಾವನ್ನಪ್ಪಿದ್ದರು.

9. 2011ರಲ್ಲಿ ಅರುಣಾಚಲ ಸಿಎಂ ದೋರ್ಜಿ ಖಂಡು ಚೀನಾ ಗಡಿ ಬಳಿಯ ಲುಗುಥಾಂಗ್ನಲ್ಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಾಣೆಯಾದ ಐದು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದರು. ಇಷ್ಟಲ್ಲದೇ ಇನ್ನೂ ಅನೇಕ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಆಕಾಶಯಾನದಿಂದ ಮೃತಪಟ್ಟಿದ್ದಾರೆ.













