✍🏻 ರಾಜರಾಂ ತಲ್ಲೂರ್

ಧರ್ಮಸ್ಥಳ ಠಾಣಾ ವ್ಯಾಪ್ತಿಯ 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ ಬಳಿಕ, ಈವತ್ತಿನ ತನಕ ನಾಡಿನ ಬಹುತೇಕ ಮಾಧ್ಯಮಗಳು ಮತ್ತು ತಮ್ಮದೇ ಅಜೆಂಡಾಗಳ ಹಿತಾಸಕ್ತಿಗಳಿರುವ ಸೋಷಿಯಲ್ ಮೀಡಿಯಾಗಳವರು ಹರಡಿದ ರಂಗುರಂಗಿನ ಸುಳ್ಳುಸುದ್ದಿಗಳನ್ನೆಲ್ಲ ವಿಧಾನಸಭೆಯಲ್ಲಿ ಇಂದು ಗೃಹಸಚಿವರು ತನ್ನ ಹೇಳಿಕೆಯ ಮೂಲಕ ಗುಡಿಸಿಹಾಕಿದ್ದಾರೆ. ಅವರ ಹೇಳಿಕೆಯಿಂದ ಎಲ್ಲ ನವರಂಗಿ ಡಿಯರ್ ಮೀಡಿಯಾಗಳೂ ಬೆತ್ತಲಾಗಿವೆ.
ಮಾಹಿತಿದಾರನ ವಿಚಾರಣೆಯ ಮೂಲಕ ಗುರುತಿಸಲಾದ ಪ್ರತೀ ಜಾಗದಿಂದ ಎಕ್ಸ್‌ಹ್ಯೂಮ್ ಮಾಡಿದ ಮಣ್ಣು, ಮತ್ತು ಸಿಕ್ಕಿದ ಮೂಳೆ ಇತ್ಯಾದಿ ಮಾದರಿಗಳೆಲ್ಲವೂ FSL ವಿಶ್ಲೇಷಣೆಗೆ ಹೋಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ತನಿಖೆ ಮುಂದುವರಿದು, ನಿಜವಾಗಿಯೂ ಏನು ನಡೆದಿದೆ ಎಂಬುದು ಬಹಿರಂಗಗೊಳ್ಳಲಿದೆ ಎಂದು ಗೃಹಸಚಿವರು ಸದನದಲ್ಲಿ ಹೇಳಿದ್ದಾರೆ. ಯಾವುದೇ ಪ್ರಕರನದ ವಿಚಾರಣೆ ನಡೆಯುವುದು ಹೀಗೆಯೇ. ಪ್ರಥಮ ಮಾಹಿತಿದಾರ ವ್ಯಕ್ತಿ “V” ಗೆ ವಿಟ್ನೆಸ್ ಪ್ರೊಟೆಕ್ಷನ್ ಕಾಯಿದೆಯಡಿ ಹೇಗೆ ರಕ್ಷಣೆ ನೀಡಬೇಕೆಂದು ಜಿಲ್ಲಾ ನ್ಯಾಯಾಲಯದ ನಿರ್ದಿಷ್ಟ ಸಮಿತಿ ಆದೇಶ ನೀಡಿರುವ ಬಗ್ಗೆ ಕೂಡ ಸಚಿವರು ಸದನದಲ್ಲಿ ಹೇಳಿದ್ದಾರೆ.

ಇದಿಷ್ಟು ಅಧಿಕೃತ ಮಾಹಿತಿಯ ಹೊರತಾಗಿ, ಕಳೆದ ಒಂದು ತಿಂಗಳಿನಲ್ಲಿ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಬಂದದ್ದೆಲ್ಲ ಅಕ್ಷರಶಃ ಕಳುಕು-ಕೆಸರು ಮತ್ತು “ಮಾಧ್ಯಮ” ಎಂಬ ಹೆಸರಿಗೆ ಕಳಂಕ ತರುವ ಸುದ್ದಿಗಳೇ. SITಯಂತಹ ವೃತ್ತಿಪರ ತನಿಖಾ ಸಂಸ್ಥೆಯೊಂದು ಪ್ರತೀದಿನ ಪತ್ರಕರ್ತರಿಗೆ ತಮ್ಮ ತನಿಖೆಯ ಮಾಹಿತಿಗಳನ್ನು ಬ್ರೀಫ್ ಮಾಡುತ್ತಿದ್ದರು ಎಂಬುದನ್ನು ಬುದ್ಧಿ ಶುದ್ಧ ಇರುವ ಯಾರೂ ನಂಬಲು ಸಾಧ್ಯ ಇಲ್ಲ. ಅಕಸ್ಮಾತ್ ಹಾಗೆ ಆಗಿದ್ದರೆ ಅದೂ ಅಪರಾಧವೇ. ಈ ಪ್ರಕರಣದಲ್ಲಿ “ಹಿತಾಸಕ್ತಿ ಪೀಡಿತ”ವಾದ, ವಿಷಯದ ಪರ ಮತ್ತು ವಿರುದ್ಧ ಇರುವ ಮಾಧ್ಯಮಗಳೆಲ್ಲವನ್ನೂ ಸರ್ಕಾರ (ಅಥವಾ ವಿಷಯ ಸಬ್ ಜುಡೀಸ್ ಆಗಿರುವ ಕಾರಣಕ್ಕೆ ಸಂಬಂಧಿತ ನ್ಯಾಯಾಂಗ ವ್ಯವಸ್ಥೆ) ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮಾಜದ ಶಾಂತಿ-ಸುವ್ಯವಸ್ಥೆಗೆ ಸವಾಲಾಗಬಲ್ಲ ಇಂತಹ “ಸಾರ್ವಜನಿಕ ಗಲೀಜು”ಗಳು ಇನ್ನೆಂದೂ ಮರುಕಳಿಸದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮದ ಒಬ್ಬ ಮಾಜೀ ಕಸುಬುದಾರನಾಗಿ ನಾನು ಸಂಬಂಧಿತರನ್ನು ಒತ್ತಾಯಿಸುತ್ತೇನೆ. ಈ ಕ್ರಮ ಏಕೆ ಅಗತ್ಯ ಎಂದರೆ, ಈ ರೀತಿಯ ಹಸ್ತಕ್ಷೇಪಗಳು ನೇರವಾಗಿ ತನಿಖೆಯ ಮೇಲೆ ಪ್ರಭಾವ ಬೀರಬಹುದಾದ ಸಂಗತಿಗಳು. ಎಕ್ಸ್‌ಹ್ಯೂಮ್ ಮಾಡಲು ಹೋದಾಗ ಅಲ್ಲಿ ಕ್ಷಣಕ್ಷಣಕ್ಕೆ ಕ್ಯಾಮರಾ ಹಿಡಿದು ಕಾದವರೆಲ್ಲರೂ ನ್ಯಾಯ ವ್ಯವಸ್ಥೆಗೆ ಉಪಕಾರ ಮಾಡಿದ್ದಕ್ಕಿಂತ ತೊಂದರೆ ಮಾಡಿದ್ದೇ ಹೆಚ್ಚು (ಈ ಬಗ್ಗೆ ಈ ಹಿಂದೆಯೂ ಒಂದು ಪೋಸ್ಟ್‌ನಲ್ಲಿ ಹೇಳಿದ್ದೇನೆ). ಇಂತಹ ಅತ್ಯುತ್ಸಾಹಗಳ ಫಲವಾಗಿಯೇ ಅಲ್ಲಿ ಒಂದು ಹಂತದಲ್ಲಿ ಕ್ರಿಮಿನಲ್ ಪ್ರಕರಣಗಳೂ (ಗುಂಪು ಹಲ್ಲೆ) ನಡೆದವು.

ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂಬುದರಲ್ಲಿ ಯಾರಿಗೂ ಅನುಮಾನ ಇರಬಾರದು. ನ್ಯಾಯ ಸಿಗಬೇಕಿದ್ದರೆ, ನ್ಯಾಯ ವ್ಯವಸ್ಥೆಗೆ ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು. ಮಾಧ್ಯಮ ಏನಾದರೂ ಮಾಡುವುದಿದ್ದರೆ ಆ ನಿಟ್ಟಿನಲ್ಲಿ ಕೆಲಸ ಮಾಡಬಹುದಿತ್ತು. ಅಂತಹದೊಂದು ಅಮೂಲ್ಯ ಅವಕಾಶವನ್ನು ಅವು ಕಳೆದುಕೊಂಡವು. ವದಂತಿಗಳು, ಪರ-ವಿರುದ್ಧ ಸೋಷಿಯಲ್ ಮೀಡಿಯಾ ಬರೆಹಗಳು, ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಮೌನವಾಗಿದ್ದವರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು… ಎಲ್ಲವೂ ಎಷ್ಟು ಸಡಿಲು ನಾಲಿಗೆಯ ಕೆಲಸಗಳು ಎಂಬುದನ್ನು ಇಂದಿನ ಗೃಹಸಚಿವರ ಹೇಳಿಕೆ ಬಯಲು ಮಾಡಿದೆ. ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದ ಕೆಸರೆರಚಾಟಗಳು ಇಡಿಯ ಘಟನೆಯ ನೆರೇಟಿವ್‌ಅನ್ನೇ “ಒಂದು ಧಾರ್ಮಿಕ ಸ್ಥಳಕ್ಕೆ ಅಪಚಾರ” ಎಂದು ಬದಲಾಗುವಂತೆ ಮಾಡಿದ್ದೂ ಸುಳ್ಳಲ್ಲ. ಇವೆಲ್ಲಾ ನ್ಯಾಯ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಪೂರಕ ಅಲ್ಲ ಮತ್ತು ಇದು ಸಂವಿಧಾನದಲ್ಲಿ ನಂಬಿಕೆ ಇರುವವರು ವ್ಯವಹರಿಸಬೇಕಾದ ರೀತಿಯೂ ಅಲ್ಲ.
ಈ ಪ್ರಕರಣ ಅದರ ತಾರ್ಕಿಕ ಅಂತ್ಯಕ್ಕೆ ತಲುಪಲಿ; ಅದಕ್ಕೆ ಇನ್ನಾದರೂ ಎಲ್ಲ ಸ್ಟೇಕ್ ಹೋಲ್ಡರ್‌ಗಳು ಸಹಕರಿಸಲಿ.