ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದ ಚೆಕ್ ಡ್ಯಾಂ ನಿರ್ಮಾಣದ ವೇಳೆ ಏರಿ ಹೊಯ್ಯಲು ಮಣ್ಣಿನೊಂದಿಗೆ ಸ್ಮಶಾನದಲ್ಲಿ ಹೂತಿದ್ದ ಶವಗಳನ್ನೂ ಹಾಕುತ್ತಿರುವ ಆಘಾತಕಾರಿ ದೃಶ್ಯ ವೈರಲ್ ಆಗಿದೆ.
ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹಳೇಮಂಡಿಯ ನೀರು ಶುದ್ಧೀಕರಣ ಘಟಕದ ಸಮೀಪದ ತುಂಗಾ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. ನಗರಕ್ಕೆ 24 ಗಂಟೆ ನಿರಂತರ ನೀರು ಸರಬರಾಜು ಮಾಡುವ ಯೋಜನೆಯ ಭಾಗವಾಗಿ ಈ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕಾಗಿ ಮಣ್ಣಿನ ಏರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಗರಪಾಲಿಕೆಯ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಈ ಕಾಮಗಾರಿಯನ್ನು ನಡೆಸುತ್ತಿದೆ.
ಈ ಕಾಮಗಾರಿಗೆ ಸಮೀಪದ ಹಿಂದೂ ರುದ್ರಭೂಮಿಯಿಂದ ಮಣ್ಣನ್ನು ತಂದು ಹಾಕಲಾಗುತ್ತಿದೆ. ಈ ವೇಳೆ, ರುದ್ರಭೂಮಿಯಲ್ಲಿ ಇತ್ತೀಚೆಗೆ ತಾನೇ ಹೂತಿರುವ ಶವಗಳನ್ನೂ ಸೇರಿಸಿ ಟ್ರ್ಯಾಕ್ಟರುಗಳಲ್ಲಿ ಮಣ್ಣು ತುಂಬಿಕೊಂಡು ಬಂದು ಏರಿಗೆ ಸುರಿಯುತ್ತಿರುವುದು ಬೆಳಕಿಗೆ ಬಂದಿದೆ! ಸ್ಥಳೀಯರು ಟ್ರ್ಯಾಕ್ಟರುಗಳಲ್ಲಿ ಮಣ್ಣಿನೊಂದಿಗೆ ಶವವನ್ನೂ ಸಾಗಿಸುತ್ತಿರುವುದನ್ನು ಪತ್ತೆ ಮಾಡಿ ನಗರಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಈ ಆಘಾತಕಾರಿ ಪ್ರಕರಣ ಹೊರಬಂದಿದೆ.
ಸ್ಥಳೀಯರ ಪ್ರಕಾರ, ವಾಸ್ತವವಾಗಿ ಸ್ಮಶಾನದ ಮಣ್ಣು ತೆಗೆದು ನದಿಗೆ ಚೆಕ್ ಡ್ಯಾಂ ಕಟ್ಟುತ್ತಿರುವುದೇ ಅಪಾಯಕಾರಿ ಮತ್ತು ಆಘಾತಕಾರಿ. “ಕಳೆದ ಒಂದು ವಾರದಲ್ಲಿ ಏರಿ ಹೊಯ್ಯಲು ಸಾಗಿಸುವ ಮಣ್ಣಿನಲ್ಲಿ ಐದಾರು ಶವಗಳನ್ನು ಕಂಡಿದ್ದೇವೆ. ಈಗಾಗಲೇ ಆ ಶವಗಳು ಏರಿಯಲ್ಲಿ ಮುಚ್ಚಿಹೋಗಿವೆ. ಮೊನ್ನೆಯ ಪ್ರಕರಣದಲ್ಲಿ ಮಾತ್ರ ಅದನ್ನು ಮೊಬೈಲ್ ನಲ್ಲಿ ವೀಡಿಯೋ ಮಾಡಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಳಿಸಿದ್ದರಿಂದ ಬೆಳಕಿಗೆ ಬಂದಿದೆ. ಟ್ರ್ಯಾಕ್ಟರಿನಲ್ಲಿ ಮಣ್ಣಿನ ಜೊತೆ ಶವವನ್ನೂ ತುಂಬಿಕೊಂಡು ಹೋಗುತ್ತಿರುವುದು ಫೋಟೋ, ವೀಡಿಯೋ ಸಹಿತ ದಾಖಲಾಗಿದ್ದರಿಂದ ಸಾಕ್ಷಿ ಸಿಕ್ಕಿದೆ ಅಷ್ಟೇ. ಸಾಕ್ಷಿ ಸಿಗದೇ ಮಣ್ಣಿನಲ್ಲಿ ಮುಚ್ಚಿಹೋದ ಶವಗಳು ಇನ್ನೆಷ್ಟೋ..” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯರು ದಾಖಲೆ ಸಹಿತ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ನಗರಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಲಾಗಿದೆ. ದೂರು ನೀಡಿದ ಬಳಿಕ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಆಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರು, “ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿರುವ ಕಾಮಗಾರಿಗೆ ಮಣ್ಣು ತೆಗೆಯುತ್ತಿರುವಾಗ ಪಕ್ಕದಲ್ಲೇ ಇದ್ದ ರುದ್ರಭೂಮಿಯ ಶವವೊಂದು ಸಿಕ್ಕಿತ್ತು. ಅದನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡಲಾಗಿದೆ ಎಂದು ಆ ಇಲಾಖೆ ಮಾಹಿತಿ ನೀಡಿದೆ. ಆದಾಗ್ಯೂ ಜಾಗ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವುದರಿಂದ ಸಂಬಂಧಪಟ್ಟ ಇಲಾಖೆಯವರಿಗೆ ನೋಟೀಸ್ ನೀಡಿ, ಆ ಬಗ್ಗೆ ಮಾಹಿತಿ ಕೋರಿದ್ದೇವೆ. ಈ ಘಟನೆ ನಡೆದು ಹದಿನೈದು ದಿನಗಳಾಗಿದೆ. ಆದರೆ, ವೀಡಿಯೋ ಈಗ ವೈರಲ್ ಆಗಿರುವುದರಿಂದ ಬೆಳಕಿಗೆ ಬಂದಿದೆ. ಏನೇ ಆಗಲೀ, ಆ ಬಗ್ಗೆ ವಿಚಾರಣೆ ಮಾಡುತ್ತೇವೆ” ಎಂದು ಸ್ಪಷ್ಟನೆ ನೀಡಿದರು.
ಆದರೆ, ಕುಡಿಯುವ ನೀರಿನ ಚೆಕ್ ಡ್ಯಾಂ ನಿರ್ಮಾಣಕ್ಕೆ ಸ್ಮಶಾನದ ಮಣ್ಣು ಬಳಸಿರುವುದು ಅಕ್ರಮ ಮಾತ್ರವಲ್ಲ; ಅಪರಾಧ. ಜೊತೆಗೆ ಶವವನ್ನೂ ನೋಡಿಯೂ ಅದೇ ಶವಗಳನ್ನು ಮಣ್ಣಲ್ಲಿ ಮುಚ್ಚಿ ಏರಿ ನಿರ್ಮಾಣ ಮಾಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಒಂದು ಕಡೆ ಮೃತ ದೇಹಕ್ಕೆ ಸಲ್ಲಿಸಬೇಕಾದ ಗೌರವಕ್ಕೆ ಚ್ಯುತಿ ಮತ್ತೊಂದು ಕಡೆ ಲಕ್ಷಾಂತರ ಮಂದಿಯ ಕುಡಿಯುವ ನೀರನ್ನು ಮಲಿನಗೊಳಿಸಿದ ಮನುಷ್ಯತ್ವದ ವಿರುದ್ಧದ ಹೇಯ ಅಪರಾಧ.
ಆದರೆ, ಈ “ವಿಷಯದಲ್ಲಿ ಮಹಾನಗರಪಾಲಿಕೆಯಾಗಲೀ, ಜಿಲ್ಲಾಡಳಿತವಾಗಲೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಬದಲಾಗಿ ಗುತ್ತಿಗೆದಾರನಿಗೆ ಯಾವುದೋ ಸಣ್ಣಪುಟ್ಟ ಕಳಪೆ ಕಾಮಗಾರಿ ಮಟ್ಟದಲ್ಲಿ ಈ ಕೃತ್ಯವನ್ನು ಪರಿಗಣಿಸಿ ನೋಟೀಸ್ ನೀಡಿ ತಿಪ್ಪೆ ಸಾರಿಸುವ ಯತ್ನ ನಡೆಯುತ್ತಿದೆ. ಇದು ಅನ್ಯಾಯ. ಬಿಜೆಪಿ ಮಹಾನಗರ ಪಾಲಿಕೆ ಆಡಳಿತ ನಗರದ ಜನರನ್ನು ಎಷ್ಟು ಲಘುವಾಗಿ ಪರಿಗಣಿಸಿದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.