ಬೆಂಗಳೂರು : ರಾಜ್ಯ ಗುತ್ತಿಗೆದಾರರು ಭ್ರಷ್ಟಾಚಾರ ತಡೆಯುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ತಮ್ಮ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ ಎಂದು ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಆದರೆ ಇಂದು ಗುತ್ತಿಗೆದಾರರ ಪ್ರತಿಭಟನಾ ಕಾವಿಗೆ ಬಜೆಟ್ನಲ್ಲಿ ಮುಳುಗಿದ್ದ ಡಿಸಿಎಂ, ಸಚಿವರು ಓಡೋಡಿ ಧರಣಿ ನಿರತರನ್ನು ಭೇಟಿಯಾಗಿದ್ದಾರೆ.

ಈ ವೇಳೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನಾನು ಹಾಗೂ ಸಚಿವ ಸತೀಶ್ ಜಾರಕಿಹೊಳಿ ಸೇರಿ ಈ ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜೊತೆ ಗುತ್ತಿಗೆದಾರರ ಸಭೆ ಮಾಡಿಸುತ್ತೇವೆ. ನಿಮ್ಮ ಸಮಸ್ಯೆ ಬಗೆಹರಿಸಲು ನಾವೆಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರು ತಮ್ಮ ಬದುಕಿಗೆ ಮಾತ್ರವಲ್ಲ ರಾಜ್ಯದ ಬದುಕಿಗೆ ಸಹಾಯ ಮಾಡುತ್ತಿದ್ದೀರಿ. ನಮ್ಮ ಸರ್ಕಾರ ತಂದಿದ್ದೀರಿ ಎಂಬ ಅರಿವು ನಮಗಿದೆ. ನಿಮಗೆ ಹಣ ಪಾವತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ನಿಮ್ಮ ಅಧ್ಯಕ್ಷರಾದ ಮಂಜುನಾಥ್ ಅವರನ್ನು ನಾನು ನೋಡುತ್ತಲೇ ಇದ್ದೇನೆ, ಮೂರು ತಿಂಗಳಿಗೊಮ್ಮೆ ಮಾಧ್ಯಮಗಳಿಗೆ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ ಎಂದು ಗರಂ ಆಗಿದ್ದಾರೆ.
ಅವರನ್ನು ನೋಡಿದರೆ ನೀವು ಅವರಿಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಒಂದು ಜಾಗ ಕೊಡಿಸಬೇಕು. ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಸಿನಿಮಾ, ಕಲೆ ಸೇರಿದಂತೆ ಇತರೆ ವಲಯದವರಿಗೆ ಒಂದು ಪ್ರಾತಿನಿಧ್ಯ ನೀಡಿದಂತೆ ಗುತ್ತಿಗೆದಾರರಿಗೆ ಒಂದು ಜಾಗ ಕೊಡಿಸಬೇಕಿದೆ. ಆಗ ನಿಮ್ಮ ಸಮಸ್ಯೆ ಬಗೆಹರಿಯಬಹುದು. ಇದಕ್ಕೆ ಒಂದು ದಾರಿ ಹುಡುಕಬೇಕಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : BUDGET 2026- ಆರೋಗ್ಯ ಕ್ಷೇತ್ರಕ್ಕೆ “ಅನಾರೋಗ್ಯ” ಬಾರದಂತೆ ನೋಡಿಕೊಂಡ ಸಿಎಂ : ಇಲಾಖೆಗೆ ನೀಡಿದ್ದೇನು..?
ನನ್ನ ಇಲಾಖೆಯಲ್ಲಿ 13 ಸಾವಿರ ಕೋಟಿ, ಬೋಸರಾಜು ಅವರ ಇಲಾಖೆಯಲ್ಲಿ 3 ಸಾವಿರ ಕೋಟಿ, ಸೇರಿದಂತೆ ಸುಮಾರು 37 ಸಾವಿರ ಕೋಟಿ ಬಿಲ್ ಬಾಕಿ ಇದೆ. ನಿಮ್ಮ ನೋವು ನಮಗೆ ಗೊತ್ತಿದೆ. ನಾನು ಚುನಾವಣೆಗೂ ಆರು ತಿಂಗಳು ಮುಂಚಿತವಾಗಿ ಹೇಳಿದ್ದೆ. ಇಲಾಖೆಗಳಲ್ಲಿ ಹಣವಿಲ್ಲದೆ ಯಾವುದೇ ಗುತ್ತಿಗೆ ಕಾಮಗಾರಿ ತಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದೆ ಎಂದು ನೆನಪಿಸಿದ್ದಾರೆ.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಹಣ ಇರಲಿ, ಬಿಡಲಿ, ಕಾಮಗಾರಿ ಕೊಟ್ಟಿದ್ದೇ ಕೊಟ್ಟದ್ದು. ನೀವು ಕೆಲಸ ತೆಗೆದುಕೊಂಡು ನಮ್ಮ ಎದೆ ಮೇಲೆ ಕೂತಿದ್ದೀರಿ. ಇದಕ್ಕೆ ಒಂದು ರೂಪ ನೀಡಬೇಕಿದೆ. ಇದಕ್ಕೆ ಸುಮಾರು 50 ಸಾವಿರ ಕೋಟಿಯಷ್ಟು ಬಾಂಡ್ ಅಥವಾ ಇತರೆ ಮಾರ್ಗ ಹುಡುಕಬೇಕು. ಆಗ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನೆರವು ನೀಡಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದು, ಇದಕ್ಕಾಗಿ ಸುಮಾರು 52 ಸಾವಿರ ಕೋಟಿ ವಾರ್ಷಿಕವಾಗಿ ವೆಚ್ಟ ಮಾಡಲಾಗುತ್ತಿದೆ. ಆದರೂ ನಮ್ಮ ರಾಜ್ಯದಲ್ಲಿ ಉತ್ತಮ ಬಜೆಟ್ ನೀಡುತ್ತಿದ್ದೇವೆ. ಇವತ್ತು ಕೂಡ ಮುಖ್ಯಮಂತ್ರಿಗಳು ಸರಿದೂಗಿಸಿ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯವರು ನಿನ್ನೆಯೇ ಖಾಲಿ ಚೊಂಬು ತೆಗೆದುಕೊಂಡಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಏನು ಕೊಟ್ಟರು? ಖಾಲಿ ಬಿಂದಿಗೆ ಕೊಟ್ಟರು. ಆಗ ಇವರು ಏನೂ ಮಾತನಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಮಾಡಿ ಈಗ ಕೊಟ್ಟಿದ್ದಾರಾ?” ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ಅವರು ಹಣ ಕೊಟ್ಟಿಲ್ಲ. ಅವರು ಮಾಡಲಿ ಬಿಡಲಿ, ನಮ್ಮ ಕರ್ತವ್ಯ ನಾವು ಮಾಡಬೇಕು. ನೀವು ನಮ್ಮನ್ನು ಬಿಡಂಗಿಲ್ಲ, ನಾವು ನಿಮ್ಮನ್ನು ಬಿಡಂಗಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಿ. ನೀವು ಹೇಳಿಕೆ ನೀಡಿದರೆ ಅದು ಒಂದು ದಿನದ ಸುದ್ದಿಯಾಗಬಹುದು, ಬೇರೆ ಯಾವುದೇ ಪ್ರಯೋಜನವಿಲ್ಲ. ನೀವು ನಮ್ಮ ಬಳಿ ಬಂದು ಚರ್ಚೆ ಮಾಡಿ, ಯಾವ ರೀತಿ ಹಣ ಹೊಂದಿಸಿ ಸಮಸ್ಯೆ ಬಗೆಹರಿಸಬೇಕು ನೋಡೋಣ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು ನಾನು, ಸತೀಶ್ ಜಾರಕಿಹೊಳಿ ಹಾಗೂ ಬೋಸರಾಜು ಅವರು ಬಂದಿದ್ದೇವೆ ಎಂದು ತಿಳಿಸಿದ್ದಾರೆ.






