ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರವು (Congress Government) ರಾಜ್ಯದ ಖಜಾನೆಯನ್ನು ಲೂಟಿ ಮಾಡಿ ತನ್ನ ಹೈಕಮಾಂಡ್(High Command) ನಾಯಕರನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ( BY Vijayendra) ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DCM DK Shivakumar) ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲೆಕ್ಷನ್ ಕಿಂಗ್ ಅಂದರೆ ಅದು ಬಿ.ವೈ ವಿಜಯೇಂದ್ರ. ಅವರ ಕಲೆಕ್ಷನ್ ಬಗ್ಗೆ ಬಿಚ್ಚಿ ಇಡಬೇಕಾ? ವಿಜಯೇಂದ್ರನಿಗೆ ಅನುಭವ ಇಲ್ಲ. ಅವರ ತಂದೆ ಯಡಿಯೂರಪ್ಪ ಅವರ ಹೆಸರು ಕೆಡಿಸಿದ್ದು ವಿಜಯೇಂದ್ರನೇ ಎಂದು ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.

ಅಲ್ಲದೇ ಮಾತಿನಲ್ಲಿ ಇತಿ ಮಿತಿ ಇರಬೇಕು. ರಾಜ್ಯದ ಯಾವ ಖಜಾನೆ ಖಾಲಿಯಾಗಿದೆ..? ಈ ಬಗ್ಗೆ ಸದನಕ್ಕೆ ಬಂದು ಮಾತನಾಡಲು ಹೇಳಿ, ತಪ್ಪಿಸಿಕೊಂಡು ಎಲ್ಲೆಲ್ಲೋ ಮಾತನಾಡುವುದಲ್ಲ. ಈ ಬಗ್ಗೆ ಸದನಕ್ಕೆ ಬಂದು ಪ್ರಶ್ನೆ ಮಾಡಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.

ಮಾತು ಮುಂದುವರಿಸಿದ ಅವರು, ಸದನದಲ್ಲಿ ಇಂದು ಮತ್ತು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿಯ ಪ್ರಶ್ನೆಗೆ ಉತ್ತರ ನೀಡುತ್ತಾರೆ. ಮಹದಾಯಿ ಮತ್ತು ನೀರಾವರಿ ಅಭಿವೃದ್ಧಿ ಬಗ್ಗೆ ನಾನು ಸಹ ಉತ್ತರ ಕೊಡುತ್ತೇನೆ. ಕಬ್ಬು, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿದ್ದೇವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತು ಕಬ್ಬು ಕಾರ್ಖಾನೆಗಳಿಗೆ ಸಾಕಷ್ಟು ಹೊರೆಯಾಗಿದೆ. ಇದನ್ನು ರಾಜ್ಯದ ರೈತರು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಪರವಾಗಿ ರಾಜ್ಯ ಸರ್ಕಾರ ಇದೆ ಎಂದಿದ್ದಾರೆ.











