ಬೆಳಗಾವಿ: ಬೆಳಗಾವಿಯಲ್ಲಿ ರಾತ್ರಿ ಭೋಜನ ಕೂಟ, ರಾಜಕೀಯ ಸಭೆ ಜೋರಾಗಿದೆ. ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಮರುದಿನವೇ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಡಿ.ಕೆ ಶಿವಕುಮಾರ್ ಆಪ್ತರು ಸಭೆ ನಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ʼದಿನ ಒಬ್ಬೊಬ್ಬ ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಊಟವನ್ನು ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ, ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಇದು ಯಾವ ಔತಣಕೂಟವೂ ಅಲ್ಲ, ಏನೂ ಅಲ್ಲʼ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಮನೆಯಿಂದ ಇವತ್ತು ಮುದ್ದೆ, ಉಪ್ಸಾರು ಊಟ ಮಾಡಿ ಕಳಿಸುತ್ತೇವೆ ಎನ್ನುತ್ತಿದ್ದಾನೆ. ಹೀಗೇ ಅವರು ಪ್ರೀತಿಯಿಂದ ಹೇಳಿದಾಗ, ಕರೆದಾಗ ಬೇಡ ಎನ್ನಲು ಆಗುತ್ತದೆಯೇ? ನಾಳಿದ್ದು ನಮ್ಮ ಆಸೀಫ್ ಸೇಠ್, ಫಿರೋಜ್ ಸೇಠ್ ಅವರು ಊಟಕ್ಕೆ ಕರೆದಿದ್ದಾರೆ ಎಂದರು.

ದೊಡ್ಡಣ್ಣನವರ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು. ನನ್ನ ಸ್ನೇಹಿತರೂ ಹೌದು. ಅವರದು ದೊಡ್ಡ ಕುಟುಂಬ. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಮ್ಮ ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು, ಅಷ್ಟೇ. ಅದರಲ್ಲಿ ಯಾವ ಔತಣಕೂಟವು ಇಲ್ಲ, ಏನೂ ಇಲ್ಲ ಎಂದು ಹೇಳಿದರು.

ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿರುವ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನ ಗೌರವ ಉಳಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದೇವೆ. ಈ ವಿಚಾರದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಜವಾಬ್ದಾರಿಯನ್ನು ಗೃಹ ಸಚಿವ ಪರಮೇಶ್ವರ್ ಅವರಿಗೆ ವಹಿಸಲಾಗಿದೆ. ಕೆಎಸ್‌ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂತು ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.












