ಬೆಂಗಳೂರು: “ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದಾದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಾಯಕರ ದೊಡ್ಡ ಪಟ್ಟಿಯನ್ನೇ ತಂದು ಚರ್ಚೆ ಮಾಡಿದ್ದಾರೆ. ವಿವಿಧ ಪಕ್ಷಗಳ 42 ಕ್ಕೂ ಹೆಚ್ಚು ಮುಖಂಡರ ಅರ್ಜಿಗಳು ನನ್ನ ಮುಂದಿದೆ. ಆ ಹೆಸರುಗಳನ್ನು ಈಗ ಬಹಿರಂಗ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಮಾಜಿ ಶಾಸಕ, ಶಿರಹಟ್ಟಿಯ ರಾಮಪ್ಪ ಲಮಾಣಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:
“ಸ್ಥಳೀಯ ನಾಯಕರುಗಳ ಜತೆ ಚರ್ಚೆ ಮಾಡಿ, ಒಮ್ಮತ ಮೂಡಿಸಿ ಅನ್ಯ ಪಕ್ಷಗಳ ನಾಯಕರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ವಿರೋಧ ಪಕ್ಷಗಳ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದರಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಮ್ಮ ಪಕ್ಷ ಹಾಗೂ ಕಾರ್ಯಕರ್ತರಿಗೆ ಶಕ್ತಿ ತುಂಬಿದಂತಾಗಿದೆ” ಎಂದು ಹೇಳಿದರು.
“ಕೆಲವರು 2024 ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಅದರ ವಿವರಣೆಗೆ ನಾನು ಹೋಗುವುದಿಲ್ಲ. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ 100ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ನನ್ನನ್ನು ಭೇಟಿ ಮಾಡಿ, ನಾವು ʼಇಂಡಿಯಾʼದಲ್ಲಿ ಗುರುತಿಸಿಕೊಂಡಿದ್ದು, ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ. ಬೀದರ್ ನಿಂದ ಚಾಮರಾಜನಗರದ ತನಕ ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ” ಎಂದರು.
“ಬಿಜೆಪಿ ತಂಡವೊಂದು ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರನ್ನು ಭೇಟಿ ಮಾಡುತ್ತಿದೆ. ಈ ಭೇಟಿಯ ಬಗ್ಗೆ ನಮ್ಮ ಪಕ್ಷದ ಮುಖಂಡರು, ಶಾಸಕರು ಇಂಚಿಂಚೂ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದವರು ಎಷ್ಟೇ ಚರ್ಚೆಗೆ ಎಳೆದರೂ ನಾನು ಏನನ್ನೂ ಬಿಟ್ಟುಕೊಡುವುದಿಲ್ಲ” ಎಂದು ತಿಳಿಸಿದರು.