ಹಿರಿಯ ಅಭಿನೇತ್ರಿ ಪದ್ಮಭೂಷಣ ಬಿ.ಸರೋಜಾದೇವಿ (B Saroja Devi) ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಬಿ.ಸರೋಜಾದೇವಿ ಅವರು ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದವರು. ಇಡೀ ದಕ್ಷಿಣ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟವರು. ನನಗೆ ಆತ್ಮೀಯರಾಗಿದ್ದರು. ರಾಜಕುಮಾರ್ ಹಾಗೂ ಇತರೇ ನಾಯಕ ನಟರ ಜೊತೆ ಅಭಿನಯಿಸಿದ್ದನ್ನು ನೋಡಿದ್ದೇನೆ. ಇವರ ಎಲ್ಲಾ ಅಭಿಮಾನಿಗಳಿಗೆ ಹಾಗೂ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.
ಶೋಕ ಸಂದೇಶ

“ಅಭಿನಯ ಸರಸ್ವತಿಯಾಗಿ ಆರು ದಶಕಗಳ ಕಾಲ ಕನ್ನಡ ಸೇರಿದಂತೆ ದೇಶದ ಹಲವಾರು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ ಅಭಿನೇತ್ರಿ ಬಿ. ಸರೋಜಾದೇವಿ ಅವರ ಅಗಲಿಕೆ ಇಡೀ ಭಾರತೀಯ ಚಿತ್ರರಂಗಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಅತೀವ ದುಃಖವನ್ನುಂಟು ಮಾಡಿದೆ. ಇವರು ನಮ್ಮ ಜಿಲ್ಲೆಯ ಮನೆಮಗಳಾಗಿದ್ದವರು.
“ಕಿತ್ತೂರ ರಾಣಿ ಚೆನ್ನಮ್ಮ” ಚಿತ್ರದಲ್ಲಿ ರಾಣಿ ಚೆನ್ನಮ್ಮ ಅವರ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದರು. ಸರೋಜಾದೇವಿ ಅವರನ್ನು ಹೊರತು ಪಡಿಸಿ ಮತ್ತೊಬ್ಬರನ್ನು ಈ ಪಾತ್ರದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಮಟ್ಟಿಗೆ ಕನ್ನಡಿಗರ ಮನೆ, ಮನಗಳಲ್ಲಿ ಆವರಿಸಿಕೊಂಡು ಬಿಟ್ಟಿದ್ದಾರೆ. ನನಗೂ ಸಹ ಅವರ ಚೆನ್ನಮ್ಮನ ಪಾತ್ರ ಕಣ್ಣಿಗೆ ಕಟ್ಟಿದಂತಿದೆ.

161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವುದು ಇವರ ಹೆಗ್ಗಳಿಕೆ. ತಮಿಳು ಚಿತ್ರರಂಗದವರು ಕೂಡ ಇವರನ್ನು”ಕನ್ನಡದ ಸುಂದರಗಿಣಿ” (Kannadada Sundaragini) ಎಂದು ಬಿರುದು ನೀಡಿ ಕರೆಯುತ್ತಿದ್ದರು. ಇವರ ಕಲಾ ಸಾಮರ್ಥ್ಯಕ್ಕೆ ಇದೊಂದು ಸಣ್ಣ ಉದಾಹರಣೆ.

ಕನ್ನಡ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಇಂತಹ ಹಿರಿಯರ ಮಾರ್ಗದರ್ಶನ ಅಗತ್ಯವಿತ್ತು. ಕಾಲನ ಕರೆಗೆ ಓಗೊಟ್ಟು ಅಪಾರ ಅಭಿಮಾನಿಗಳನ್ನು ಅಗಲಿ ಹೋಗಿರುವ ಇವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬವರ್ಗ, ಅಭಿಮಾನಿಗಳಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.




