ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು ಎಂಬಂತೆ ಇದೀಗ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹೊಸ ಗಾದೆ ಮಾತೊಂದು ಹುಟ್ಟಿಕೊಂಡಿದೆ. ಅದುವೇ ಉಪಮುಖ್ಯಮಂತ್ರಿ ಸ್ಥಾನದ ಗೊಂದಲ ಬಗೆಹರಿಯದೆ ಸಂಪುಟ ವಿಸ್ತರಣೆಯಾಗದು, ಸಂಪುಟ ವಿಸ್ತರಣೆಯಾಗದೆ ಉಪಮುಖ್ಯಮಂತ್ರಿ ಸ್ಥಾನದ ಗೊಂದಲ ಬಗೆಹರಿಯದು ಎಂಬ ಮಾತು. ಸದ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಮುಖ ಸವಾಲಾಗಿ ಉಳಿದಿರುವುದು ಕೂಡ ಇದೇ ಉಪಮುಖ್ಯಮಂತ್ರಿ ಹುದ್ದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಿದ್ದು, ಮಂತ್ರಿಮಂಡಲ ರಚನೆ, ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ಕಾಡುವಂತಾಗಿದೆ.
ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಸರ್ಕಾರ ಸುಭದ್ರವಾದ ಮೇಲೆ ಸಂಪುಟ ವಿಸ್ತರಣೆ, ಖಾತೆಗಳ ಹಿಂಚಿಕೆಗಳಿಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ಉಪಮುಖ್ಯಮಂತ್ರಿ ಹುದ್ದೆ. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಈಗಾಗಲೇ ಮೂರು ಉಪಮುಖ್ಯಮಂತ್ರಿ ಹುದ್ದೆಗಳಿವೆ. ಈ ಮಧ್ಯೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಬಂದಿರುವ ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಕೂಗು ಜೋರಾಗಿದೆ. ಈ ಮಧ್ಯೆ ಸಚಿವ ಬಿ.ಶ್ರೀರಾಮುಲು ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲೇ ಬೇಕು ಎಂದು ವಾಲ್ಮೀಕಿ ಸಮುದಾಯದ ಒಕ್ಕೊರಲ ಒತ್ತಾಯ ಮತ್ತು ಬಳ್ಳಾರಿ ಭಾಗದ ಬಿಜೆಪಿ ಶಾಸಕರ ಆಗ್ರಹವಾಗಿದೆ.
ಅದರಲ್ಲೂ ಉಪಮುಖ್ಯಮಂತ್ರಿ ಹುದ್ದೆ ರೇಸ್ ನಲ್ಲಿರುವ ರಮೇಶ್ ಜಾರಕಿಹೊಳಿ ಮತ್ತು ಬಿ.ಶ್ರೀರಾಮುಲು ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿರುವುದು ಇಕ್ಕಟ್ಟು ತಂದಿದೆ. ರಮೇಶ್ ಜಾರಕಿಹೊಳಿಗೆ ಈ ಹುದ್ದೆ ನೀಡಲು ಇರುವುದು ಮೈತ್ರಿ ಸರ್ಕಾರ ಉರುಳಿಸು ಬಿಜೆಪಿ ಅಧಿಕಾರಕ್ಕೆ ಬರಲು ಮೂಲ ಕಾರಣಕರ್ತರು ಎಂಬ ಕಾರಣ ಮಾತ್ರ. ಆದರೆ, ಶ್ರೀರಾಮುಲು ಅವರ ಹಿಂದೆ ವಾಲ್ಮೀಕಿ ಸಮುದಾಯವೇ ನಿಂತಿದೆ. ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು ಮಾತ್ರವಲ್ಲ, ಸಮಾಜದ ಬಹುಸಂಖ್ಯೆಯ ಜನ ಅವರ ಬೆನ್ನಿಗಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಶ್ರೀರಾಮುಲು ಅವರನ್ನು ದೂರವಿಟ್ಟರೆ ವಾಲ್ಮೀಕಿ ಸಮುದಾಯ ಬಿಜೆಪಿಯಿಂದ ದೂರವಾಗಬಹುದು. ರಮೇಶ್ ಜಾರಕಿಹೊಳಿ ಅವರಿಗೆ ಈ ಹುದ್ದೆ ನೀಡದೇ ಇದ್ದಲ್ಲಿ ಕೊಟ್ಟ ಮಾತು ತಪ್ಪಿದ ಆರೋಪ ಬರುತ್ತದೆ. ಅಲ್ಲದೆ, ನೂತನವಾಗಿ ಆಯ್ಕೆಯಾಗಿರುವ 11 ಶಾಸಕರು ಅಸಮಾಧಾನಗೊಳ್ಳುವುದರ ಜತೆಗೆ ಮತ್ತೆ ಸರ್ಕಾರ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇನ್ನು ಇಬ್ಬರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಒಂದೇ ಸಮುದಾಯಕ್ಕೆ ಸೇರಿದ ಇಬ್ಬರಿಗೆ ಈ ಹುದ್ದೆ ನೀಡಿದ ಬಗ್ಗೆ ಇತರೆ ಸಮುದಾಯಗಳಿಂದ ಆಕ್ಷೇಪ ಕೇಳಿಬರಬಹುದು. ಈ ಅಂಶವೇ ಉಪಮುಖ್ಯಮಂತ್ರಿ ಸ್ಥಾನ ಬೇಡ ಎಂಬ ಚರ್ಚೆಗೆ ಕಾರಣವಾಗುತ್ತಿರುವುದು.
ಈ ಸಮಸ್ಯೆ ಬಗ್ಗೆ ಯಡಿಯೂರಪ್ಪ ಅವರಿಗೆ ಮೊದಲೇ ಅರಿವಿತ್ತು
ಉಪಮುಖ್ಯಮಂತ್ರಿ ಹುದ್ದೆಯಿಂದ ಸಮಸ್ಯೆ ಉದ್ಭವವಾಗುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೊದಲೇ ಗೊತ್ತಿತ್ತು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಆಗಲೇ ಸಾಕಷ್ಟು ವಿರೋಧ, ಆಕ್ಷೇಪ ಎದುರಾಗಿದ್ದವು. ಏಕೆಂದರೆ, ಸಾಂವಿಧಾನಿಕವಾಗಿ ಉಪಮುಖ್ಯಮಂತ್ರಿ ಸ್ಥಾನ ಎಂಬುದು ಇಲ್ಲ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೂ, ಸಚಿವ ಸ್ಥಾನಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಹೀಗಿರುವಾಗ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ಒಂದಿಬ್ಬರಿಗೆ ಕಾನೂನಿನಲ್ಲಿ ಇಲ್ಲದೇ ಇದ್ದರೂ ಹೆಚ್ಚುವರಿ ಅಧಿಕಾರ ನೀಡುವುದು ಏಕೆ ಎಂದು ಇತರೆ ಸಚಿವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ, ಬಿಜೆಪಿಯಂತಹ ಪಕ್ಷದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಪಕ್ಷದ ನಾಯಕರಿಂದಲೂ ಕೇಳಿಬಂದಿತ್ತು.
ಈ ಸಮಸ್ಯೆಗಳ ಅರಿವಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವುದೇ ಬೇಡ ಎಂದುಕೊಂಡಿದ್ದರು. ಮಂತ್ರಿಮಂಡಲ ರಚನೆ ಕುರಿತಂತೆ ಬಿಜೆಪಿ ವರಿಷ್ಠರ ಜತೆ ಚರ್ಚಿಸುವ ಸಂದರ್ಭದಲ್ಲಿ ಅದನ್ನು ಮುಂದಿಟ್ಟಿದ್ದರು ಕೂಡ. ಆದರೆ, ಸಚಿವರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು, ಯಾರಿಗೆ ಯಾವ ಖಾತೆಗಳನ್ನು ನೀಡಬೇಕು ಎಂಬ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ ವರಿಷ್ಠರು, ಆ ಸಂದರ್ಭದಲ್ಲಿ ಹಾಕಿದ್ದ ಒಂದೇ ಒಂದು ಷರತ್ತು ಎಂದರೆ ಅದು ಮೂರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ. ಆ ಸಂದರ್ಭದಲ್ಲಿ ತಮ್ಮೆಲ್ಲಾ ಮಾತುಗಳಿಗೆ ತಲೆಯಾಡಿಸಿ, ಆ ನಿರ್ಧಾರಗಳೆಲ್ಲವೂ ನಮ್ಮದು ಎಂದು ಸಚಿವಾಕಾಂಕ್ಷಿಗಳನ್ನು ಸುಮ್ಮನೆ ಕೂರಿಸಲು ಸಹಾಯ ಮಾಡಿದ ವರಿಷ್ಠರ ಈ ಒಂದು ಬೇಡಿಕೆಯನ್ನು ತಿರಸ್ಕರಿಸಲು ಸಾಧ್ಯವಾಗದೆ ಯಡಿಯೂರಪ್ಪ ಮೂವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಒಪ್ಪಿಕೊಂಡು ಬಂದಿದ್ದರು.
ಹೀಗಿದ್ದರೂ ಮುಂದೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಯಡಿಯೂರಪ್ಪ ಅವರು ವರಿಷ್ಠರ ಗಮನಕ್ಕೆ ತರುವುದನ್ನು ಮರೆತಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರ ಅನರ್ಹತೆ ವಿವಾದ ಇತ್ಯರ್ಥವಾಗಿ ಉಪಚುನಾವಣೆ ನಡೆದು ರಮೇಶ್ ಜಾರಕಿಹೊಳಿ ಗೆದ್ದು ಬಂದರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ. ಇದರ ಜತೆಗೆ ವಾಲ್ಮೀಕಿ ಸಮುದಾಯದಿಂದ ಒತ್ತಡ ತೀವ್ರಗೊಂಡರೆ ಶ್ರೀರಾಮುಲು ಅವರಿಗೂ ಈ ಹುದ್ದೆ ನೀಡುವ ಪರಿಸ್ಥಿತಿ ಎದುರಾಗಬಹುದು. ಆಗ ಐವರು ಉಪಮುಖ್ಯಮಂತ್ರಿಗಳಾಗಬೇಕಾಗುತ್ತದೆ. ಇದು ಇನ್ನಷ್ಟು ಮಂದಿ ಈ ಹುದ್ದೆಯನ್ನು ಬಯಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಅಸಮಾಧಾನ ಹೆಚ್ಚಾಗಬಹುದು ಎಂದು ವರಿಷ್ಠರಿಗೆ ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವರಿಷ್ಠರು, ಅಂತಹ ಸಂದರ್ಭ ಬಂದಾಗ ನೋಡಿಕೊಳ್ಳೋಣ ಎಂದು ಯಡಿಯೂರಪ್ಪ ಅವರನ್ನು ಸುಮ್ಮನಾಗಿಸಿದ್ದರು. ಆದರೆ, ಸಮಸ್ಯೆ ಇಷ್ಟೊಂದು ಗಂಭೀರವಾಗುತ್ತದೆ ಎಂದು ವರಿಷ್ಠರು ಕೂಡ ಯೋಚಿಸಿರಲಿಲ್ಲ.
ಈಗಲಾದರೂ ಡಿಸಿಎಂ ಹುದ್ದೆ ರದ್ದುಗೊಳಿಸಲು ಹೆಚ್ಚಿದ ಆಗ್ರಹ
ಯಡಿಯೂರಪ್ಪ ಅವರು ನಿರೀಕ್ಷಿಸಿದಂತೆ ಉಪಮುಖ್ಯಮಂತ್ರಿ ಹುದ್ದೆ ಮತ್ತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮಟ್ಟಕ್ಕೆ ಗೊಂದಲ ಸೃಷ್ಟಿಸುತ್ತಿದೆ. ಉಪ ಚುನಾವಣೆಯಲ್ಲಿ ತಮಗೆ ವ್ಯಕ್ತವಾದ ಜನಬೆಂಬಲವನ್ನು ಮುಂದಿಟ್ಟುಕೊಂಡು ಸದ್ಯಕ್ಕೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದಾದರೂ ಅದು ಎಷ್ಟು ದಿನ ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೇ ಉತ್ತಮ ಆಡಳಿತ ನೀಡಿದರೂ ದಿನಕಳೆದಂತೆ ಆಡಳಿತ ವಿರೋಧಿ ಅಲೆ ಕಾಣಿಸಿಕೊಳ್ಳುತ್ತದೆ. ಉಪಮುಖ್ಯಮಂತ್ರಿ ವಿಚಾರವೇ ಗೊಂದಲಕ್ಕೀಡಾಗಿ ಅದರ ಮೂಲಕವೇ ಆಡಳಿತ ವಿರೋಧಿ ಅಲೆ ಕಾಣಿಸಿಕೊಳ್ಳಲಾರಂಭಿಸಿದರೆ ಸರ್ಕಾರ ಅಪಾಯಕ್ಕೊಳಗಾಗಬಹುದು. ಈ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ರದ್ದುಗೊಳಿಸಿ ಎಂಬ ಆಗ್ರಹ ಕೇಳಿಬರಲಾರಂಭಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಶಾಸಕರಾದ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಈ ಆಗ್ರಹದ ಮುಂಚೂಣಿಯಲ್ಲಿ ನಿಂತಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆ ಬೇಡ ಎಂಬ ಸಹಿಸಂಗ್ರಹ ಆರಂಭವಾಗಿದೆ ಎಂಬುದು ಖಚಿತವಾಗದೇ ಇದ್ದರೂ ಯಡಿಯೂರಪ್ಪ ಅವರಿಗೆ ಆಪ್ತವಾಗಿರುವ ಶಾಸಕರ ವಲಯದಲ್ಲಿ ಈ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿರುವುದಂತೂ ಸತ್ಯ. ಈ ಅಂಶವೇ ಈಗಾಗಲೇ ಉಪಮುಖ್ಯಮಂತ್ರಿಗಳಾಗಿರುವವರು ಮತ್ತು ಈ ಹುದ್ದೆ ಮೇಲೆ ಕಣ್ಣಿಟ್ಟಿರುವವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅದು ಇನ್ನು ಯಾವ ಹಂತ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು.