ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಿದ್ಧತೆಗಳ ನಡುವೆ ಲಕ್ಷ್ಮೀ ಎಂಬ ಆನೆ ಗಂಡು ಮರಿಗೆ ಜನ್ಮ ನೀಡಿದೆ. ಒಂದು ಕಡೆ ಇದು ಸಂಭ್ರಮ- ಸಡಗರ ತಂದರೆ ಮತ್ತೊಂದೆಡೆ ಹಲವು ಚರ್ಚೆಗೆ ಗ್ರಾಸವಾಗಿದೆ.
ಹೌದು ಮೈಸೂರು ದಸರಾ ವೇಳೆ ನಡೆಯುವ ಪ್ರತಿಷ್ಠಿತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಲಕ್ಷೀ ಆನೆಯನ್ನೂ ಕರೆಸಲಾಗಿದೆ. ಆದರೆ ಈ ಆನೆ ಗರ್ಭಿಣಿ ಎಂದೂ ತಿಳಿದು ಕರೆತರಲಾಯಿತೇ ಅಥವಾ ಗೊತ್ತಿಲ್ಲದೇ ಕರೆತರಲಾಯಿತೇ ಎಂಬ ಪ್ರಶ್ನೆಗಳು ಕಾಡತೊಡಗಿದೆ.
ಹೌದು, ಲಕ್ಷ್ಮೀ ಆನೆ ಗಂಡು ಮರಿಗೆ ಜನ್ಮ ನೀಡಿದ್ದರಿಂದ ಅರಮನೆ ಆವರಣದಲ್ಲಿ ಸಂಭ್ರಮ ಸಡಗರ ಹೆಚ್ಚಾಗಿದೆ. ಅಲ್ಲದೇ ಪ್ರವಾಸಿಗರ ಗಮನವನ್ನೂ ಸೆಳೆದಿದೆ.
ಆದರೆ ದಸರಾ ಅಂದರೆ ಸಂಭ್ರಮದ ಜೊತೆ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಸಿದ್ಧತೆಗಳು ಅಗತ್ಯ. ಅದರಲ್ಲೂ ಅತ್ಯಂತ ಸೂಕ್ಷ್ಮ ಹಾಗೂ ಅಷ್ಟೇ ಅಪಾಯಕಾರಿ ಆದ ಆನೆಗಳನ್ನು ನೋಡಿಕೊಳ್ಳುವುದು ಸವಾಲಿನ ವಿಷಯದವೇ ಸರಿ.

ಮೈಸೂರು ದಸರಾ ವೇಳೆ ಆನೆಗಳ ಸಿದ್ಧತೆಯೇ ಪ್ರಮುಖ ವಿಷಯ. ಆನೆಗಳನ್ನು ಸಿದ್ಧಪಡಿಸಲು ಜಿಲ್ಲಾಡಳಿತ, ಮಾವುತರು, ಕಾವುತರು ಸೇರಿದಂತೆ ಹಲವಾರು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಲ್ಲದೇ ಕುಶಾಲ ತೋಪು ಸಿಡಿಸಿ ಶಬ್ಧದ ಅನುಭವ ಮಾಡಿಕೊಡಲಾಗುತ್ತದೆ. ಇದರಿಂದ ಆನೆಗಳು ದಸರಾ ವೇಳೆ ವಿಚಲಿತವಾಗದಂತೆ ಅಭ್ಯಾಸ ಮಾಡಿಕೊಳ್ಳಲಾಗುವುದು.
ಆದರೆ ಇತ್ತೀಚೆಗೆ ನಡೆದ ಕುಶಾಲ ತೋಪು ಸಿಡಿಸುವ ಅಭ್ಯಾಸದ ವೇಳೆ ಲಕ್ಷ್ಮೀ ಸೇರಿದಂತೆ ಕೆಲವು ಆನೆಗಳು ವಿಚಲಿತವಾಗಿದ್ದವು. ಮರಿಗೆ ಜನ್ಮ ನೀಡಿರುವ ಲಕ್ಷ್ಮೀ ಸ್ಥಿತಿ ಸೂಕ್ಷ್ಮವಾಗಿದ್ದು ಇಂತಹ ಸಂದರ್ಭದಲ್ಲಿ ದಸರಾದಲ್ಲಿ ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಾಣಿಪ್ರಿಯರು ಪ್ರಶ್ನಿಸುತ್ತಿದ್ದಾರೆ.
ಅಲ್ಲದೇ ಲಕ್ಷ್ಮೀ ಗರ್ಭಿಣಿ ಆಗಿದ್ದ ವಿಷಯ ನಮಗೆ ಗೊತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದರೆ ಕಾವಾಡಿಗಳು ಹಾಗೂ ಮಾವುತರು ಲಕ್ಷ್ಮೀ ಸ್ಥಿತಿಯನ್ನು ಮುಚ್ಚಿಟ್ಟಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ.