ಸೋಶಿಯಲ್ ಮೀಡಿಯಾದಲ್ಲಿ(Social Media) ಅಶ್ಲೀಲ ಕಮೆಂಟ್ ಹಾಗೂ ಹೇಟ್ ಕಮೆಂಟ್ ಹಾಕುವ ವಿಕೃತ ಮನಸ್ಸಿನ ನೆಟ್ಟಿಗರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi Darshan) ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದು, ಕೆಟ್ಟದಾಗಿ ಕಮೆಂಟ್ ಮಾಡಿದ ಖಾತೆಗಳ ವಿರುದ್ದ ಸೈಬರ್‌ಕ್ರೈಂ (Cyber Crime) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಹಾಗೂ ಮೆಸೇಜ್ಗಳ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಂಡು ಸೈಬರ್ ಪೊಲೀಸರಿಗೆ ನೀಡುವುದರ ಜೊತೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ವಿಜಯಲಕ್ಷ್ಮಿ 15 ಇನ್ಸ್ಟಾಗ್ರಾಮ್ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಮೆಂಟ್ ವಿರುದ್ಧ ಫೋಟೋ ಸಮೇತ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಈ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇನ್ನು ಮಾರ್ಕ್ ಸಿನಿಮಾದ ಪ್ರಚಾರದ ವೇಳೆ ನಟ ಕಿಚ್ಚ ಸುದೀಪ್ ನಾವು ಯುದ್ಧಕ್ಕೆ ಸಿದ್ದ ಎನ್ನುವ ಹೇಳಿಕೆ ನೀಡಿದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ದಾವಣಗೆರೆ ಡೆವಿಲ್ ವಿಜಯೋತ್ಸವದಲ್ಲಿ ದರ್ಶನ್ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ. ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮಾತನಾಡುತ್ತಾರೆ. ದರ್ಶನ್ ಇದ್ದಾಗ ಇವರೆಲ್ಲಾ ಇದ್ರೋ? ಇರಲಿಲ್ವೋ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿತ್ತು. ಈ ಘಟನೆ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೆಟ್ಟ ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.











