
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್‌ನಲ್ಲಿ ಆರೋಪ ನಿಗದಿ ಮಾಡಲಾಯಿತು. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ನಾವು ಹತ್ಯೆ ಮಾಡಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.

ಕೋರ್ಟ್ ಒಳಗಡೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಜಡ್ಜ್ ಸೂಚಿಸಿದರು. ಈ ಸೂಚನೆಯಂತೆ ಎ1 ಆರೋಪಿ ಪವಿತ್ರ ಗೌಡ (Pavithra Gowda) ಮೊದಲು ನಿಂತಿದ್ದರೆ ಎ2 ಆರೋಪಿ ದರ್ಶನ್ (Darshan) ಎರಡನೇಯವರಾಗಿ ನಿಂತ ಬಳಿಕ ಎಲ್ಲಾ ಆರೋಪಿಗಳ ಹೆಸರನ್ನು ಹೇಳಿ ಹಾಜರಾಗಿದ್ದಾರೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿದರು. ನಂತರ ಪೊಲೀಸರು ಸಲ್ಲಿಸಿದ್ದ ದೋಷಾರೋಪವನ್ನು ನಿಧಾನವಾಗಿ ಸ್ಪಷ್ಟವಾಗಿ ಓದತೊಡಗಿದರು. ಈ ವೇಳೆ ಎಲ್ಲರಿಗೂ ಕೇಳುತ್ತಿದೆ ಅಲ್ಲವೇ ಎಂದು ಪ್ರಶ್ನಿಸಿದರು. ಒಂದು ವೇಳೆ ಕೇಳದೇ ಇದ್ದರೆ ಮತ್ತೆ ಕೇಳಿ ಎಂದು ಜಡ್ಜ್ ಸೂಚಿಸಿದರು.

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯನ್ನು ಹತ್ಯೆ ಮಾಡಿದ್ದೀರಿ. ಬಹಳ ಪ್ಲ್ಯಾನ್ ಮಾಡಿ ರೇಣುಕಾಸ್ವಾಮಿಯನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಘಟನಾವಳಿಯ ಒಂದೊಂದೇ ಪ್ರಮುಖ ವಿಚಾರವನ್ನು ಓದಿದರು.

ದೋಷರೋಪವನ್ನು ಓದಿದ ಬಳಿಕ, ನಮ್ಮ ಮೇಲಿನ ಆರೋಪಗಳು ಸುಳ್ಳು. ನಾವು ಕೊಲೆಗಡುಕರಲ್ಲ ಎಂದು ಕೊಲೆ ಆರೋಪಿಗಳು ತಮ್ಮ ಮೇಲೆ ಬಂದಿರುವ ದೋಷಾರೋಪವನ್ನು ನಿರಾಕರಿಸಿದರು. ಈ ವೇಳೆ ನಮ್ಮ ವಕೀಲರನ್ನು ನಾವು ಬದಲಾಯಿಸಬೇಕಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆರೋಪ ನಿಗದಿ ಮಾಡಿದ ನಂತರ ಕೋರ್ಟ್ ಮುಂದಿನ ವಿಚಾರಣೆಯನ್ನು ನ.10ಕ್ಕೆ ಮುಂದೂಡಿ ವಿಚಾರಣೆಗೆ ಆದೇಶಿಸಿತು.
