ಆರ್.ಧ್ರುವನಾರಾಯಣ್ ಅವರ ಅಕಾಲಿಕ ಮರಣದಿಂದಾಗಿ ಕ್ಷೇತ್ರದಾದ್ಯಂತ ಅನುಕಂಪದ ಅಲೆ ಕಂಡು ಬರುತ್ತಿದೆ. ಈ ಅನುಕಂಪದ ಅಲೆಯಲ್ಲಿಯೇ ಧ್ರುವನಾರಾಯಣ್ ಪುತ್ರ, ದರ್ಶನ್ ಧ್ರುವನಾರಾಯಣ್ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಂಸದ ಆರ್.ಧ್ರುವನಾರಾಯಣ್ ಹುಲ್ಲಹಳ್ಳಿ ಹೋಬಳಿಯ ಭಾಗದಲ್ಲಿ ಚುನಾವಣಾ ಪ್ರವಾಸ ಕೈಗೊಂಡಿದ್ಧ ಮರುದಿನ ಅಕಾಲಿಕ ಮರಣಕ್ಕೆ ತುತ್ತಾದರು. ಇವರು ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿ ಪ್ರಬಲ ಆಕಾಂಕ್ಷಿಯಾಗಿದ್ದರು.

ಆದ್ರೆ ಧ್ರುವನಾರಾಯಣ್‌ರ ಅಕಾಲಿಕ ಮರಣದ ಬೆನ್ನಲ್ಲೇ, ಕಾಂಗ್ರೆಸ್ ಅವರ ಪುತ್ರ, ದರ್ಶನ್ ಧ್ರುವನಾರಾಯಣ್‌ಗೆ ಟಿಕೆಟ್ ನೀಡ್ತು. ಧ್ರುವನಾರಾಯಣ್ ಅವರು ಪ್ರಾರಂಭಿಸಿ ಅರ್ಧಕ್ಕೆ ನಿಂತಿದ್ದ ಚುನಾವಣಾ ಪ್ರವಾಸಕ್ಕೆ ಅವರ ಪುತ್ರ ದರ್ಶನ್ ಧ್ರುವನಾರಾಯಣದಿಂದ ಮತ್ತೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದರ್ಶನ್ ಧ್ರುವನಾರಾಯಣ್ ಹಳ್ಳಿ ಹಳ್ಳಿಗಳಲ್ಲಿ ಭರ್ಜರಿ ಮತಪ್ರಚಾರ ಮಾಡುತ್ತಿದ್ದಾರೆ.

ಕಾಯಕಯೋಗಿ ದಣಿವರಿಯದ ನಾಯಕ ಧ್ರುವನಾರಾಯಣ್ ಅವರ ಅನುಕಂಪದ ಅಲೆಯಿಂದಾಗಿ ದರ್ಶನ್ ಧ್ರುವ ಹೋದ ಕಡೆ ಎಲ್ಲಾ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಮ ಗ್ರಾಮಗಳಲ್ಲಿ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರೆ, ಪುರುಷರು ಪುಷ್ಪವೃಷ್ಟಿ ಮಾಡುವ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲಿ ದರ್ಶನ್ ಧ್ರುವನಾರಾಯಣ್ ಅವರನ್ನು ಕಾಣಲು ಗ್ರಾಮಸ್ಥರು, ವೃದ್ಧರು ಮಹಿಳೆಯರಾದಿಯಾಗಿ ಮುಗಿಬಿದ್ದು ಹರಸಿ ಹಾರೈಸುತ್ತಿದ್ದದ್ದು ವಿಶೇಷವಾಗಿತ್ತು.

ಈ ಕುರಿತು ದರ್ಶನ್ ಧ್ರುವನಾರಾಯಣ್ ಮಾತನಾಡಿ, ʻನಮ್ಮ ತಂದೆಯ ದಿಢೀರ್ ಸಾವಿನಿಂದಾಗಿ ನಾವಿನ್ನು ಹೊರಬಂದಿಲ್ಲ. ದೈಹಿಕವಾಗಿ ಅವರು ನಮ್ಮನ್ನು ಬಿಟ್ಟು ಹೋಗಿದ್ದರೂ ಮಾನಸಿಕವಾಗಿ ನಮ್ಮಲ್ಲಿಯೇ ಇದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ ಶಾಸಕರಾಗಿ ನಿಮ್ಮೆಲ್ಲರ ಸೇವೆ ಮಾಡಬೇಕೆಂಬ ಆಸೆ ಇತ್ತು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ. ಹಾಗಾಗಿ ತಮ್ಮೆಲ್ಲರ ಮತ್ತು ಪಕ್ಷದ ಮುಖಂಡರ ಒತ್ತಾಸೆಯಿಂದ ಪಕ್ಷ ನನಗೆ ಒಂದು ಅವಕಾಶ ನೀಡಿದೆ. ನೀವು ಈ ಬಾರಿ ನನಗೆ ಹರಸಿ ಹಾರೈಸಿ ನನ್ನನ್ನು ಗೆಲ್ಲಿಸಿ ನಮ್ಮ ತಂದೆಯಂತೆ ನಾನು ನಿಮ್ಮೊಟ್ಟಿಗೆ ಇದ್ದು, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೈ ಮುಗಿದು ಮನವಿ ಮಾಡಿಕೊಂಡರು. ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನೂರಾರು ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
