ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ಬಂಧಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿ ಎರಡು ತಿಂಗಳು ಕಳೆದಿದ್ದು, ಇತ್ತ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ರು ಚಾರ್ಜ್‌ಶೀಟ್ ಸಲ್ಲಿಕೆ ಮಾಡುವ ಕೆಲಸವನ್ನು ಭರದಿಂದ ಮಾಡುತ್ತಿದ್ದಾರೆ. ಈ ನಡುವೆ ನಟ ದರ್ಶನ್ ಜೈಲಿನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗು ಮ್ಯಾನೇಜರ್ ನಾಗರಾಜು ಜೊತೆಗೆ ಹರಟೆ ಹೊಡೆಯುವ ಫೋಟೋ ವೈರಲ್ ಆಗಿದೆ. ಅದರ ಜೊತೆಗೆ ವಿಡಿಯೋ ಕೂಡ ವೈರಲ್ ಆಗಿದೆ.
ದರ್ಶನ್‌ಗೆ ಕಾಫಿ ಹಾಗು ಸಿಗರೇಟ್ ನೀಡಿರುವುದು ಇದು ಮೊದಲ ಬಾರಿಯಲ್ಲ. ಜೈಲಿಗೆ ಹೋದ ದಿನದಿಂದಲೂ ಮಾಧ್ಯಮಗಳಲ್ಲಿ ಬರ್ತಿರೋದು ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ವ್ಯವಸ್ಥೆಯನ್ನು ಜೈಲು ಅಧಿಕಾರಿಗಳು ಮಾಡಿ ಕೊಟ್ಟಿದ್ದಾರೆ ಎನ್ನುವುದು ಕಾಮನ್‌ಸೆನ್ಸ್. ಆದರೆ ಇದೀಗ ಫೋಟೋ ಹಾಗು ವಿಡಿಯೋ ವೈರಲ್ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆಯಾ..? ಅನ್ನೋ ಅನುಮಾನ ದಟ್ಟವಾಗಿ ಕಾಡುವುದಕ್ಕೆ ಶುರುವಾಗಿದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳೂ ಕೂಡ ಅನುಮಾನಗೊಂಡಿದ್ದಾರೆ.
ರಾಜ್ಯದಲ್ಲಿ ರಾಜಕಾರಣ ಅಲ್ಲೋಲ ಕಲ್ಲೋಲ ಸ್ಥಿತಿಯಲ್ಲಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಮುಡಾ ಹಗರಣ ಸದ್ದು ಮಾಡುತ್ತಿದೆ. ತನಿಖೆಗೆ ಆಗ್ರಹಿಸಿ ಬಿಜೆಪಿ – ಜೆಡಿಎಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಈ ನಡುವೆ ಆಗಸ್ಟ್ 29ಕ್ಕೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಮಾಧ್ಯಮಗಳಲ್ಲಿ ಮುಡಾ ಹಗರಣವೇ ಸದ್ದು ಮಾಡಿದರೆ ಕೋರ್ಟ್ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣಕ್ಕೆ ಮಾಧ್ಯಮಗಳ ಗಮನವನ್ನು ಈ ರೀತಿ ಬೇರೆ ಕಡೆಗೆ ಸೆಳೆಯಲಾಯ್ತಾ..? ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಸರ್ಕಾರಕ್ಕೆ ಜೈಲಿನಲ್ಲಿ ನಡೆಯುವ ಅವ್ಯವಹಾರ ಅಕ್ರಮಗಳ ಬಗ್ಗೆ ಗೊತ್ತಿಲ್ಲದೆ ಇರಲು ಸಾಧ್ಯವೇ ಇಲ್ಲ. ಗಾಂಜಾ ಸರಬರಾಜು ಸೇರಿದಂತೆ ಮೊಬೈಲ್‌ನಲ್ಲಿ ಮಾತುಕತೆ ಬಗ್ಗೆಯೂ ಇಂಚಿಂಚು ಮಾಹಿತಿ ಇರುತ್ತದೆ. ಆದರೆ ತನಗೆ ಬೇಕಾದಾಗ ಮಾತ್ರ ಈ ರೀತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ ಅನ್ನೋದು ಹೇಳಲಾಗದ ಸತ್ಯ. ಆದರೆ ಇದೀಗ ಕಾಂಗ್ರೆಸ್ ಸರ್ಕಾರವೇ ಉದ್ದೇಶ ಪೂರ್ವಕವಾಗಿ ದರ್ಶನ್ ಫೋಟೋ ಹಾಗು ವಿಡಿಯೋ ಲೀಕ್ ಮಾಡಿತೇ..? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಜಾಲತಾಣದಲ್ಲಿ ಸಂತಸಗೊಂಡಿದ್ದಾರೆ ಅನ್ನೋದಕ್ಕೆ ಸಾಕ್ಷಿಗಳು ಕಾಣಿಸುತ್ತಿವೆ.