ರಾಜ್ಯ ಉಪಚುನಾವಣೆ ಪ್ರಚಾರದ ವೇಳೆ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರ್ತಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸದ್ಯ ಕಿಡಿ ಹೊತ್ತಿಸಿದೆ. ರಾಜ್ಯದ ವಿವಿದೆಡೆ ಬಿಜೆಪಿ ಎಸ್ಸಿ ಮೋರ್ಚಾದ ನಾಯಕರು ಪ್ರತಿಭಟಿಸೋ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸೆಟೆದು ನಿಂತಿದ್ದಾರೆ.
ದಲಿತರು ಹೊಟ್ಟೆಪಾಡಿಗೆ ಬಿಜೆಪಿಯಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇ ತಡ ಬಿಜೆಪಿ ದಲಿತ ನಾಯಕರು ಸಿಟ್ಟಾಗಿದ್ದಾರೆ. ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ರಾಜಧಾನಿ ಬೆಂಗಳೂರು, ದಾವಣಗೆರೆ, ಬೆಳಗಾವಿ ಸೇರಿದಂತೆ ವಿಜಯಪುರದಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಕೊಂಡಿದೆ. ಬೆಂಗಳೂರು ನಗರದ ಮೌರ್ಯ ಸರ್ಕಲ್ ಬಳಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದ್ರು. ಈ ವೇಳೆ ಛಲವಾದಿ ನಾರಾಯಣಸ್ವಾಮಿ, ಶಾಸಕ ಪಿ.ರಾಜೀವ್, ಮಾಜಿ ಎಂ ಎಲ್ ಸಿ ಅಶ್ವಥ್ ನಾರಾಯಣ ಉಪಸ್ಥಿತರಿದ್ರು.
ಬೆಳಗಾವಿಯಲ್ಲೂ ಪ್ರತಿಭಟನೆಯ ಕಿಚ್ಚು ಹಬ್ಬಿಕೊಂಡಿತ್ತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರತಿಭಟಿಸಲಾಯ್ತು. ಈ ವೇಳೆ ಚನ್ನಮ್ಮ ವೃತ್ತದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹನ ಮಾಡಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಸಿದ್ದು ಪ್ರತಿಕೃತಿ ದಹಿಸಿ ಪ್ರತಿಭಟಿಸಿದ್ರು. ದಲಿತ ವಿರೋಧಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಈ ವೇಳೆ ಮೇಯರ್ ಎಸ್.ಟಿ. ವೀರೇಶ್, ಶಾಸಕ ಪ್ರೊ.ಲಿಂಗಣ್ಣ, ಸೇರಿ ಹಲವರು ಭಾಗಿಯಾಗಿದ್ರು.
ಅದ್ಯಾವಾಗ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಕಾವು ಹೆಚ್ಚಾಗತೊಡಗಿತೋ ಆಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ನಾನು ಎಲ್ಲಿಯೂ ದಲಿತರು ಎಂಬ ಪದ ಬಳಸಿರಲಿಲ್ಲ, ರಾಜಕೀಯವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಗರಂ ಆದ್ರು.
ಸಿದ್ದರಾಮಯ್ಯ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂಬ ಹೇಳಿಕೆ ನೀಡಿದರೋ ಇಲ್ಲವೋ ಎಂಬ ಚರ್ಚೆ ನಡುವೆಯೇ ಪ್ರತಿಭಟನೆ ಕಿಚ್ಚು ವ್ಯಾಪಕವಾಗಿ ಹರಡುತ್ತಿದೆ. ನಾನು ಯಾಕೆ ಹಾಗೇ ಹೇಳಲಿ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರೆ, ಬಿಜೆಪಿ ಮಾತ್ರ ಸಿದ್ದರಾಮಯ್ಯ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ.