ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ರಾಜಕೀಯ ಪಕ್ಷಗಳ ಪ್ರತಿಷ್ಠಾ ಕಣವಾಗಿ ಬದಲಾಗಿದೆ. (JDS)ಜೆಡಿಎಸ್ ಹಾಗೂ (B J P)ಬಿಜೆಪಿ ನಡುವೆ ಈ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಗೊಂದಲಗಳು ಒಂದೆಡೆಯಿದ್ದರೆ, ಈ ಕ್ಷೇತ್ರದಲ್ಲಿ ಹದ್ದಿನಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Sivakumar)ಅವರು ಚನ್ನಪಟ್ಟಣದಲ್ಲಿ ಇಂದು ಫುಲ್ ಆಕ್ಟೀವ್ ಆಗಿದ್ದಾರೆ.
ಇಂದು ಚನ್ನಪಟ್ಟಣದ ವಿವಿಧೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚುರುಕಾಗಿದ್ದಾರೆ. ವಿವಿಧ ಕಾಮಗಾರಿಗಳಿಗೆ ಚಾಲನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಅಡಿಪಾಯ ಹಾಕಿದ್ದಾರೆ. ಮೊದಲಿಗೆ ಚನ್ನಪಟ್ಟಣದ ಉಪ ನೋಂದಣಿ ಕಚೇರಿಗೆ ಇಂದು ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಕುಂದುಕೊರತೆಗಳನ್ನು ವಿಚಾರಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಮಾಕಳಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಇಂದು ಭೇಟಿ ನೀಡಿ, ಅಲ್ಲಿ ನಡೆಯಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಚನ್ನಪಟ್ಟಣದ ಮಾಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿ.ಆರ್.ಇ ಮತ್ತು ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಯ ಅನುದಾನದಡಿ ಸಿ.ಸಿ.ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣದ ಅಭಿವೃದ್ಧಿಗಾಗಿ ವಿವಿಧ ಇಲಾಖೆಯಡಿ ಸುಮಾರು 300 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇವೆ. ಇಂದು ಮಾಕಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ 2.16 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಹಾಗೆಯೇ 78 ಮನೆಗಳನ್ನ ಮಂಜೂರು ಮಾಡಿದ್ದೇವೆ. ಈ ಕೆಲಸವನ್ನು ಮಾಡಿಸುವ ಜವಾಬ್ದಾರಿಯನ್ನು ಮಾಕಳಿ ಗ್ರಾಮ ಪಂಚಾಯಿತಿಗೆ ವಹಿಸಿದ್ದೇವೆ ಎಂದು ಹೇಳಿದರು.
ಇದಲ್ಲದೆ ಮಾಕಳಿ ಗ್ರಾಮದಲ್ಲಿ ಸಿಎಸ್‌ಆರ್ ಅನುದಾನದಡಿ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯನ್ನು ನಿರ್ಮಿಸಲು ಜಾಗವನ್ನು ಸಹ ಗುರುತಿಸಲಾಗಿದೆ. ನಮ್ಮ ಸರ್ಕಾರ ನಿಮ್ಮ ಸೇವೆಗೆ ಸದಾ ಸಿದ್ಧವಾಗಿದ್ದು, ಚನ್ನಪಟ್ಟಣ ತಾಲೂಕಿಗೆ ಹೊಸ ರೂಪ ನೀಡಲು ನೀವೆಲ್ಲ ಸಹಕಾರ ಕೊಡಬೇಕು ಎಂದು ಜನರಲ್ಲಿ ಕೋರಿದರು.
ಚನ್ನಪಟ್ಟಣಕ್ಕೆ ಹೊಸದೊಂದು ರೂಪ ನೀಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಇಂದು ಚನ್ನಪಟ್ಟಣ ತಾಲ್ಲೂಕು ನಾಗವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗವಾರ ಗ್ರಾಮ, ಚಿಕ್ಕೇನಹಳ್ಳಿ ಮತ್ತು ಮೊಗೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕೆಲಗೆರೆಯಲ್ಲಿ ಕೆಂಗಲ್‌ನಿಂದ ಕಣ್ವ ದಶವಾರ, ನಾಗವಾರ, ಭೈರನಾಯಕನಹಳ್ಳಿ ಮಾರ್ಗದ ಬೇವೂರು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಜನರ ಅಭಿವೃದ್ದಿಗಾಗಿ ನಮ್ಮ ಸರ್ಕಾರ ಹಲವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದು, ಚನ್ನಪಟ್ಟಣ ತಾಲೂಕನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲು ಬದ್ಧವಾಗಿದೆ ಎಂದರು.
ಎಂ.ಬಿ.ಹಳ್ಳಿ ಗ್ರಾಮ ಪಂಚಾಯಿತಿಯ ಅವ್ವೇರಹಳ್ಳಿ, ಹೊನ್ನನಾಯ್ಕನಹಳ್ಳಿ, ಅರಳಾಪುರ, ಎಂ.ಬಿ.ಹಳ್ಳಿ ಮತ್ತು ಹೊಸೂರುದೊಡ್ಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಈ ಭಾಗದಲ್ಲಿ ವಸತಿ ಇಲಾಖೆಯಿಂದ 128 ಮನೆಗಳು ಮಂಜೂರಾಗಿವೆ. 2 ಎಕರೆ ಜಾಗದಲ್ಲಿ ಸೈಟ್‌ಗಳನ್ನು ಹಂಚಿಕೆ ಮಾಡುವ ಕೆಲಸ ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.