ಡಿಸೆಂಬರ್ ಅಂತ್ಯದಲ್ಲಿ ಡಿ.ಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ವಾರದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದಾರೆ ಡಿಸಿಎಂ ಡಿ.ಕೆ ಶಿವಕುಮಾರ್, ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಟಿ ಕರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂದು ಬೆಳಗ್ಗೆ 5.30 ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಡಿ.ಕೆ ಶಿವಕುಮಾರ್ ಸದ್ಯ ವಿಶ್ರಾಂತಿಯಲ್ಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹತ್ವದ ಸುದ್ದಿಗೋಷ್ಟಿ ಕರೆದಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಡಿ.ಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ ಬೆನ್ನಲ್ಲೆ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಆ ಎಲ್ಲಾ ವಿಚಾರಗಳ ಬಗ್ಗೆ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಬಹುದು ಎನ್ನಲಾಗುತ್ತಿದೆ. ಕಳೆದ ಗುರುವಾರ ಸಿಎಂ ಸಿದ್ದರಾಮಯ್ಯ ಹಾಗು ಅಹಿಂದ ಸಮುದಾಯದ ಸಚಿವರು ಡಿನ್ನರ್ ಮೀಟ್ ಮಾಡಿದ್ದರು. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಮುಖ್ಯಮಂತ್ರಿ ಬದಲಾವಣೆಗೆ ಚರ್ಚೆ ಆರಂಭ ಆದರೆ ಹೈಕಮಾಂಡ್ ಎದುರು ಏನೆಲ್ಲಾ ವಿಷಯ ಮಂಡಿಸಬೇಕು ಅನ್ನೋ ವಿಚಾರವಾಗಿ ಚರ್ಚೆ ಮಾಡಿದ್ದರು.
ಇನ್ನು ದೇವರಾಜ ಅರಸು ಕಾಲದಿಂದಲೂ ಒಬ್ಬರಿಗೆ ಒಂದೇ ಹುದ್ದೆ ಎಂದು ಪಾಲಿಸಿಕೊಂಡು ಬರಲಾಗ್ತಿತ್ತು. ಆದರೆ ಇದೀಗ ಡಿ.ಕೆ ಶಿವಕುಮಾರ್, ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದರೂ ಕೆಪಿಸಿಸಿ ಆಧ್ಯಕ್ಷರಾಗಿಯೂ ಮುಂದುವರಿದಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಒತ್ತಡ ಹೇರುವುದು ಹಾಗು ಡಿಸಿಎಂ ಸ್ಥಾನಗಳನ್ನು ಏರಿಕೆ ಮಾಡುವ ಮೂಲಕ ಡಿ.ಕೆ ಶಿವಕುಮಾರ್ ಹುದ್ದೆಗೆ ಇರುವ ಘನತೆ ಕಡಿಮೆ ಮಾಡುವ ಮೂಲಕ ಡಿ.ಕೆ ಶಿವಕುಮಾರ್ ಕಟ್ಟಿಹಾಕುವ ಪ್ರಯತ್ನವೂ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡ್ತಾರಾ ಅನ್ನೋದು ಈಗಿರುವ ಪ್ರಶ್ನೆ.
ಇನ್ನು ದೆಹಲಿಯಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಈಗಾಗಲೇ ಸರ್ಧಿಗಳ ಪಟ್ಟಿ ಬಿಡುಗಡೆ ಮಾಡಲಾಗ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿರುವ ಬಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾಡಿ ಮಾಹಿತಿ ನೀಡಲಿದ್ದಾರೆ ಅನ್ನೋ ಮಾಹಿತಿಯೂ ಹೊರ ಬಿದ್ದಿದೆ. ಆದರೂ ಪತ್ರಕರ್ತರು ರಾಜ್ಯದ ವಿಚಾರಗಳನ್ನು ಅದರಲ್ಲೂ ವಿದೇಶ ಪ್ರವಾಸ ತೆರಳಿದ ಬಳಿಕ ನಡೆದಿರುವ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಆಗ ಎಲ್ಲದಕ್ಕೂ ಉತ್ತರ ಕೊಡಬೇಕಾಗುತ್ತದೆ ಎನ್ನಬಹುದು. ಇನ್ನು ದಾವಣಗೆರೆಯಲ್ಲಿ ಕನಕ ಜಯಂತಿ ಹೆಸರಲ್ಲಿ ಅಹಿಂದ ಶಕ್ತಿ ಪ್ರದರ್ಶನವೂ ನಡೆದಿದೆ. ಈ ಬಗ್ಗೆಯೂ ಡಿ.ಕೆ ಶಿವಕುಮಾರ್ ಉತ್ತರ ನೀಡಬೇಕಿದೆ. ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು ಎಲ್ಲಾ ಕುತೂಹಲಗಳಿಗೂ ತೆರೆ ಬೀಳಲಿದೆ.