2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ.ಈ ಎಡವಟ್ಟನ್ನು ಪುನರಾವರ್ತಿಸಲು ಕಾಂಗ್ರೆಸ್ ಬಯಸಿಲ್ಲವಾದ್ದರಿಂದ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸುವ ನಿಟ್ಟಿನಲ್ಲಿ ಟ್ರಬಲ್ ಶೂಟರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಖುದ್ದು ಗೋವಾಗೆ ತೆರಳಿದ್ದಾರೆ ಎನ್ನಲಾಗಿದೆ.
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗೆ ಆಗಿರುವಂತೆ ಕಾಣುತಿದ್ದು, ಎಕ್ಸಿಟ್ ಪೋಲ್ಗಳು ಕೂಡ ಗೋವಾದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ ಎಂದು ಹೇಳಿದ ಬೆನ್ನಲೇ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾರ್ಚ್ 8 ರಂದು ಗೋವಾಕ್ಕೆ ಧಾವಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಶಿವಕುಮಾರ್ ವಿಶೇಷ ವಿಮಾನದ ಮೂಲಕ ಗೋವಾಕ್ಕೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಫೆಬ್ರವರಿಯಲ್ಲಿ ಗೋವಾ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಗೋವಾದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿರ್ವಹಿಸಿದರು.
40 ವಿಧಾನಸಭೆ ಸದಸ್ಯ ಬಲವೊಂದಿರುವ ಗೋವಾ, ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು 21 ಕ್ಷೇತ್ರ ಗೆಲ್ಲಲೇಬೇಕು ಆದರೆ ಗೋವಾದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
ಈ ನಿಟ್ಟಿನಲ್ಲಿ ಶಿವಕುಮಾರ್ ಪ್ರವಾಸ ವೇಳಾಪಟ್ಟಿಯ ಪ್ರಕಾರ, ಕನಿಷ್ಠ ಮೂರು ದಿನಗಳ ಕಾಲ ಗೋವಾದಲ್ಲಿ ಬಿಡಾರ ಹೂಡಲಿದ್ದಾರೆ. ಮಾರ್ಚ್ 9 ರಂದು ನಡೆಯುವ ಪಕ್ಷದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಆಡಳಿತಾರೂಢ ಬಿಜೆಪಿಯ ಯಾವುದೇ ಸಮಯದಲ್ಲಿ ಆಪರೇಷನ್ ಕಮಲ ಅಥವಾ ಸ್ಥಳೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನ ಆಗಬಹುದು ಎಂಬ ಕಾರಣ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೋವಾಗೆ ತೆರಳಿದ್ದಾರೆ ಎನ್ನಲಾಗಿದೆ.
2017ರ ಗೋವಾ ವಿಧಾನಸಭೆ ಚುನಾವಣೆ ಬಳಿಕ ಮಾಡಿದ ಎಡವಟ್ಟನ್ನು ಪುನರಾವರ್ತಿಸಲು ಕಾಂಗ್ರೆಸ್ ಬಯಸಿಲ್ಲ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ಗೋವಾದಲ್ಲಿ 40 ಸೀಟುಗಳ ಪೈಕಿ, ಕಾಂಗ್ರೆಸ್ 17ರಲ್ಲಿ ಗೆಲುವು ಕಂಡಿತ್ತು. ಆದರೆ 13 ಸೀಟುಗಳಲ್ಲಿ ಜಯಗಳಿಸಿದ್ದ ಬಿಜೆಪಿ, ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಸಹಾಯ ಪಡೆದು ಸರ್ಕಾರ ರಚಿಸಿತ್ತು. ಎರಡು ವರ್ಷಗಳ ಬಳಿಕ ಕಾಂಗ್ರೆಸ್ನ 15 ಶಾಸಕರು, ಸ್ವತಃ ವಿರೋಧಪಕ್ಷದ ನಾಯಕರಾಗಿದ್ದ ಬಾಬು ಕವ್ಳೇಕರ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
2017 ರಲ್ಲಿ, ಶಿವಕುಮಾರ್ ಅವರು ಆದಾಯ ತೆರಿಗೆ ದಾಳಿಗಳನ್ನು ಎದುರಿಸುತ್ತಿದ್ದರೂ ಸಹ ಗುಜರಾತ್ನ 44 ಕಾಂಗ್ರೆಸ್ ಶಾಸಕರನ್ನು ಬಿಡದಿಯ ರೆಸಾರ್ಟ್ನಲ್ಲಿ ರಕ್ಷಿಸಿದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆಯದ ಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಗಾಗಿ ಅದೇ ರೀತಿ ಮಾಡಿದರು.