ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕಿತ್ತಾಟದ ಶೀತಲ ಸಮರ ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್‌ನ ಕೆಲ ಶಾಸಕರು ಹಾಗೂ ಸಚಿವರು ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಸ್ವತಃ ಡಿ.ಕೆ ಶಿವಕುಮಾರ್ ಉತ್ತರಿಸಿದ್ದು, ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಬಹುದು. ನನಗೆ ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿವೆ. ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ನಾನು ಸಂಸದರನ್ನು ಭೇಟಿ ಮಾಡಬೇಕಿದೆ. ದೇವರ ಕೃಪೆಯಿಂದ ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆತಿದ್ದು, ಈ ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ಧತೆಗೆ ಸೂಚಿಸಿದ್ದೇವೆ. ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿದಂತೆ ನಮ್ಮ ಸಾಕಷ್ಟು ಯೋಜನೆಗಳ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡುವುದಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಒಕ್ಕಲಿಗ ಸಮುದಾಯ ಪರವಾಗಿ ನಿಂತ ಬಗ್ಗೆ ಮಾತನಾಡಿದ ಅವರು, ನಾನು ಸಮುದಾಯದ ದೃಷ್ಟಿಕೋನದ ಬಗ್ಗೆ ಚರ್ಚೆ ಮಾಡುವುದಿಲ್ಲ. ಪಕ್ಷ ನನಗೆ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಪರವಾಗಿದೆ. ಒಕ್ಕಲಿಗರೂ ಕೂಡ ಹಿಂದುಳಿದ ವರ್ಗದ ಸಮುದಾಯದವರೇ ಎಂದು ಹೇಳಿದರು.










