ಕೊಲ್ಕತ್ತಾ : ಮೇ. 12 : ಆಗ್ನೇಯ ಬಂಗಾಳ ಕೊಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಚಾ ಚಂಡಮಾರುತ ತೀವ್ರಗೊಂಡಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೋಚಾ ಚಂಡಮಾರುತ ದೇಶದ ವಿವಿಧ ರಾಜ್ಯಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಈ ಹಿನ್ನಲೆ ವಿಪತ್ತು ನಿರ್ವಹಣೆಗಾಗಿ ಪಶ್ಚಿಮ ಬಂಗಾಳದಲ್ಲಿ ಎನ್‌ಡಿಆರ್‌ಎಫ್ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು 8 ತಂಡಗಳನ್ನು ಮಾಡಲಾಗಿದ್ದು, 200ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.
ಪರಿಸ್ಥಿತಿ ನಿಭಾಯಿಸಲು ಸಕಲ ಸಿದ್ಧತೆ

ಮೋಚಾ ಚಂಡಮಾರುತವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ಹವಾಮಾನ ಇಲಾಖೆ, “ಭಾನುವಾರದ ವೇಳೆಗೆ ಚಂಡಮಾರುತ ಕ್ರಮೇಣ ತೀವ್ರಗೊಳ್ಳಲಿದೆ. ಬಾಂಗ್ಲಾ- ಮಯನ್ಮಾರ್ ಗಡಿಯಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದ್ದು, ಗಂಟೆಗೆ 150-160 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ” ಎಂದು ಹೇಳಿದೆ.
ತ್ರಿಪುರಾ ಮತ್ತು ಮಿಜೋರಾಂನಲ್ಲಿ ಭಾರೀ ಮಳೆ ಸಾಧ್ಯತೆ
ತ್ರಿಪುರಾ ಮತ್ತು ಮಿಜೋರಾಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಾಗಾಲ್ಯಾಂಡ್, ಮಣಿಪುರ ಮತ್ತು ದಕ್ಷಿಣ ಅಸ್ಸಾಂ ನಲ್ಲಿ ಮೇ. 14 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೋಚಾ ಸೈಕ್ಲೋನ್ ಈ ವರ್ಷದ ಮೊದಲ ಸೈಕ್ಲೋನ್ ಆಗಿದೆ.

ರೋಹಿಂಗ್ಯಾ ಸ್ವಯಂಸೇವಕರಿಗೆ ತರಬೇತಿ
ಬಾಂಗ್ಲಾ -ಮಯನ್ಮಾರ್ ನಲ್ಲಿ ಮೋಚಾ ಚಂಡಮಾರುತ ಗಂಟೆಗೆ 150-160 ಕಿಮೀ ವೇಗದಲ್ಲಿ ಅಪ್ಪಳಿಸುವ ಸಂಭವ ಇದೆ. ಜೊತೆಗೆ ಭೂಕುಸಿತವೂ ಆಗಬಹುದು. ಹಾಗಾಗಿ ಸುತ್ತಮುತ್ತ ಇರುವ 1 ಮಿಲಿಯನ್‌ಗೂ ಹೆಚ್ಚಿನ ಜನರನ್ನು ನಿರಾಶ್ರಿತರ ಕ್ಯಾಂಪ್‌ಗೆ ಸ್ಥಳಾಂತರ ಮಾಡಲಾಗಿದೆ. ವಿಕೋಪ ಪರಿಸ್ಥಿತಿ ನಿಭಾಯಿಸಲು, ನೂರಾರು ರೋಹಿಂಗ್ಯಾ ನಿರಾಶ್ರಿತ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ. “ಅಪಾಯವನ್ನು ಗುರುತಿಸುವುದು, ಕೂಡಲೇ ಅವರ ಸಮುದಾಯಗಳಿಗೆ ಎಚ್ಚರಿಕೆ ನೀಡುವುದು, ಅಪಾಯ ಎದುರಾದಾಗ ಅಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತರಬೇತಿ ನೀಡಲಾಗಿದೆ” ಎಂದು ಯುಎನ್‌ಎಚ್‌ಸಿಆರ್ ಹೇಳಿದೆ.












