ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಮಹಾಶಿವರಾತ್ರಿಗೆ ಸಕಲ ರೀತಿಯಲ್ಲೂ ಸಜ್ಜಾಗಿದದ್ದು, ಅರಮನೆಯಲ್ಲಿ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಅಂತಿಮ ತಯಾರಿ ಆರಂಭಗೊಂಡಿದೆ.
ಮೈಸೂರು ಜಿಲ್ಲಾಡಳಿತದಿಂದ ಅರಮನೆ ಆಡಳಿತ ಮಂಡಳಿಗೆ ರಾಜಮನೆತನ ಕೊಡುಗೆ ನೀಡಿರುವ 11 ಕೆಜಿ ಚಿನ್ನದ ಕೊಳಗವನ್ನು ಹಸ್ತಾಂತರ ಮಾಡಲಾಗಿದೆ.
ಮೈಸೂರಿನ ತ್ರಿನೇಶ್ವರ ದೇವರಿಗೆ ಚಿನ್ನದ ಕೊಳಗ ತೊಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೈಸೂರು ಜಿಲ್ಲಾ ಖಜಾನೆಯಿಂದ ತಹಸೀಲ್ದಾರ ನೇತೃತ್ವದಲ್ಲಿ ದೇವಾಲಯಕ್ಕೆ ಚಿನ್ನದ ಕೊಳಗ ತರಲಾಗಿದೆ. ಶನಿವಾರ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ.
ಶನಿವಾರ ಮುಂಜಾನೆ 4ರಿಂದ 6 ಗಂಟೆಯೊಳಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನದ ಕೊಳಗ ಧರಿಸಿ ನಂತರ ಹೂವಿನ ಅಲಂಕಾರ ಮಾಡಿ, ರಾಜವಂಶಸ್ಥರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬೆಳಗ್ಗೆ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಪ್ರವೇಶಾವಕಾಶ ನೀಡಲಾಗುತ್ತದೆ.

ಚಿನ್ನದ ಕೊಳಗದ ಹಿನ್ನೆಲೆ
1952ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಈ ಚಿನ್ನದ ಕೊಳಗ ಮಾಡಿಸಿದ್ದರು. ಪುತ್ರ ಸಂತಾನಕ್ಕಾಗಿ ಹರಕೆ ಹೊತ್ತು ತ್ರೀನೇಶ್ವರ, ಶ್ರೀಕಂಠೇಶ್ವರ, ಮುಡುಕೊತೊರೆ ಮಲ್ಲಿಕಾರ್ಜುನೇಶ್ವರನಿಗೆ ಮೂರು ಚಿನ್ನದ ಕೊಳಗವನ್ನು ಒಡೆಯರ್ ನೀಡಿದ್ದರು.
ಕೊಳಗದ ವಿಶೇಷ
ಚಿನ್ನದ ಕೊಳಗಕ್ಕೆ ವಿಶೇಷ ಇತಿಹಾಸವಿದೆ. ನೋಡಲು ಈಶ್ವರನ ಹೋಲುವ ಕೊಳಗ ಅತ್ಯಾಕರ್ಷಕವಾಗಿದೆ. ಚಿನ್ನದ ಜಟಾಮುಕುಟ, ಕರ್ಣಕುಂಡಲ, ತಾಟಂಕ, ಎರಡು ಲೋಲಕ, ಎರಡು ಕೆಂಪು ಹರಳಿನ ಓಲೆಗಳು, ಹಣೆಯಲ್ಲಿ ಬೆಲೆಬಾಳುವ ಕೆಂಪು ಕಲ್ಲಿನ ತಿಲಕ, ಒಂದು ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆಯನ್ನು ಒಳಗೊಂಡಿರುವಂತಹ ಚಿನ್ನದ ಕೊಳಗ ಇದಾಗಿದೆ.
ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದರ್ಶನ ಪಡೆಯಲಿದ್ದಾರೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ.