ಆರಂಭಿಕ ಅಭಿಷೇಕ್ ಶರ್ಮ ಸಿಡಿಸಿದ ಅರ್ಧಶತಕ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್ ಗಳ ಭರ್ಜರಿಗೆ ಗೆಲುವಿನೊಂದಿಗೆ ಐಪಿಎಲ್ ಟಿ-20 ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದರೆ, 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ 4ನೇ ಬಾರಿ ಸೋಲುಂಡಿದೆ.
ಅಹಮದಾಬಾದ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ ಗೆ 154 ರನ್ ಗೆ ಕಟ್ಟಿಹಾಕಿದ ಸನ್ ರೈಸರ್ಸ್ ಹೈದರಾಬಾದ್ ತಂಡ 2.2 ಓವರ್ ಬಾಕಿ ಇರುವಂತೆಯೇ ೧ ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಅಭಿಷೇಕ್ ಶರ್ಮ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 75 ರನ್ ಬಾರಿಸಿ ಔಟಾದರೆ, ನಾಯಕ ಕೇನ್ ವಿಲಿಯಮ್ಸನ್ 40 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 32 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ 89 ರನ್ ಜೊತೆಯಾಟ ನಿಭಾಯಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.
ರಾಹುಲ್ ತ್ರಿಪಾಠಿ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 39 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.