ಐಪಿಎಲ್ ಪ್ರೇಮಿಗಳ ದೀರ್ಘ ಕಾಯುವಿಕೆಯ ನಂತರ ಇಂದು (19/09) ಐಪಿಎಲ್ ಸರಣಿಗಳ ಚೊಚ್ಚಲ ಪಂದ್ಯಾಟ ಯುಎಇಯಲ್ಲಿ ಜರುಗಲಿದೆ. ಭಾರತೀಯ ಕಾಲಮಾನ (ಸಂಜೆ) 7:30 ಕ್ಕೆ ಪಂದ್ಯಾಟ ನಡೆಯಲಿದೆ. ಪ್ರಬಲ ತಂಡಗಳಾದ ಮುಂಬೈ ಹಾಗೂ ಚೆನ್ನೈ ನಡುವೆ ಹಣಾಹಣಿ ನಡೆಯಲಿದ್ದು ಉಭಯ ತಂಡಗಳ ಅಭಿಮಾನಿಗಳಲ್ಲದೆ ಕ್ರಿಕೆಟ್ ಆರಾಧಕರೂ ಉತ್ಸುಕರಾಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಖಾಡಕ್ಕಿಳಿದಿದ್ದು, ರೋಹಿತ್ ಶರ್ಮಾ ಕ್ಯಾಪ್ಟನ್ಶಿಪ್ ಅಡಿಯಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯ ಆಡಲಿದೆ. ತಂಡದ ಪ್ರಮುಖ ಬ್ಯಾಟ್ಸ್ಮನ್ ಸುರೇಶ್ ರೈನಾ ತಂಡದಿಂದ ಹೊರಗುಳಿದಿರುವುದು ಸಿಎಸ್ಕೆ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ. ಋತುರಾಜ್ ಗಾಯಕ್ವಾಡ್ ರೈನಾ ನಿರ್ಗಮನದಿಂದ ತೆರವುಗೊಂಡ ಸ್ಥಾನಕ್ಕೆ ಬರಬೇಕಿದ್ದು, ಗಾಯಕ್ವಾಡ್ ಕೋವಿಡ್ ಪಾಸಿಟಿವ್ ಆಗಿರುವುದರಿಂದ ಆರಂಭದ ಎರಡು ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಇಂದು ನಡೆಯಲಿರುವ ಪಂದ್ಯಾಟದಲ್ಲಿ ಚೆನ್ನೈ ತಂಡದಿಂದ ಶೇನ್ ವ್ಯಾಟ್ಸನ್ ಹಾಗೂ ಮುರಳಿ ವಿಜಯ್ ಆರಂಭಿಕ ಬ್ಯಾಟ್ಸ್ಮನ್ ಆಗಿ ಮೈದಾನಕ್ಕಿಳಿಯುವ ಸಾಧ್ಯತೆಯಿದ್ದು, ಮುಂಬೈ ತಂಡದಿಂದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ (ಸೌತ್ ಆಫ್ರಿಕಾದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್) ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿಯುವ ಸಾಧ್ಯತೆ ಇದೆ.
2019ರ ಐಪಿಎಲ್ ಸರಣಿಯಲ್ಲಿ ಮುಂಬೈ ಹಾಗೂ ಚೆನ್ನೈ ತಂಡ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ನಾಲ್ಕೂ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ವಿಜಯ ಸಾಧಿಸಿತ್ತು. ಫೈನಲ್ ಹಣಾಹಣಿಯಲ್ಲಿ ಚೆನ್ನೈ-ಮುಂಬೈ ಮುಖಾಮುಖಿಯಾಗಿ ಕೇವಲ ಒಂದು ರನ್ನಿಂದ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿತ್ತು.
ಐಪಿಎಲ್ ಇತಿಹಾಸದಲ್ಲಿ ವಿದೇಶಗಳಲ್ಲಿ ಪಂದ್ಯಾಟ ನಡೆಯುವುದು ಇದು ಎರಡನೇ ಬಾರಿ. ಈ ಮೊದಲು 2009 ರ ಸರಣಿಯನ್ನು ಸೌತ್ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಈ ಹಿಂದೆಯೇ ನಡೆಯಬೇಕಿದ್ದ 2020 ರ ಸರಣಿಯು ಕೋವಿಡ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿತ್ತು, ಹಾಗೂ ಆ ಕಾರಣಕ್ಕಾಗಿಯೇ ಯುಎಇಯಲ್ಲಿ ಪಂದ್ಯಾಟ ನಡೆಸಲು ತೀರ್ಮಾನಿಸಲಾಗಿದೆ.